ಹಾವೇರಿ: ತಾಲೂಕು ಸಂಗೂರು ಗ್ರಾಮದ ಬಳಿ ಇರುವ ಜಿ.ಎಂ. ಶುಗರ್ಸ್ ಕಂಪನಿ ವಿರುದ್ದ ಹಾವೇರಿ ಕಬ್ಬು ಬೆಳೆಗಾರರು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಜಿ.ಎಂ.ಶುಗರ್ಸ್ ಕಂಪನಿ ಸರ್ಕಾರ ನೀಡಿರುವ ಎಫ್.ಆರ್.ಪಿ ದರ ನೀಡದೆ ರೈತರ ಕೋಟ್ಯಾಂತರ ರೂಪಾಯಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ರೈತರು ಆರೋಪಿಸಿದ್ದಾರೆ.
ಕಳೆದ ವರ್ಷ ಜಿ.ಎಂ. ಶುಗರ್ಸ್ ಕಂಪನಿ ಸುಮಾರು ಎರಡು ಲಕ್ಷ ಟನ್ ಕಬ್ಬು ನುರಿಸಿದೆ. ಸರ್ಕಾರ ಪ್ರತಿಟನ್‌ಗೆ 3151 ರೂಪಾಯಿ ದರ ನಿಗದಿ ಮಾಡಿತ್ತು. ಆದರೆ ಜಿ.ಎಂ. ಶುಗರ್ಸ್ ಕಂಪನಿ ರೈತರಿಗೆ ಪ್ರತಿಟನ್‌ಗೆ 3035 ರೂಪಾಯಿ ಪಾವತಿಸಿದೆ. ಪ್ರತಿಟನ್‌ಗೆ 116 ರೂಪಾಯಿ ಕಂಪನಿ ಬಾಕಿ ಉಳಿಸಿಕೊಂಡಿದೆ. ಆರಂಭದಲ್ಲಿ ಈ ಹಣ ನೀಡುವುದಾಗಿ ತಿಳಿಸಿದ್ದ ಆಡಳಿತ ಮಂಡಳಿ ಇದೀಗ ಬೇರೆ ಕಾರಣ ಹೇಳುತ್ತಿದೆ ಎಂದು ರೈತರು ದೂರಿದ್ದಾರೆ. ಪ್ರತಿಟನ್ ಕಬ್ಬಿಗೆ 116 ರೂಪಾಯಿಯಂತೆ ಸಾವಿರಾರು ರೈತರಿಗೆ ಸುಮಾರು 2 ಕೋಟಿ 32 ಲಕ್ಷ ರೂಪಾಯಿ ಹಣವನ್ನು ಕಂಪನಿ ಬಾಕಿ ಉಳಿಸಿಕೊಂಡಿದೆ ಎಂದು ರೈತರು ಆರೋಪಿಸಿದ್ದಾರೆ.
ಕಾರ್ಖಾನೆಗೆ ಕಬ್ಬು ಪೂರೈಸಿ ಬಾಕಿ ಹಣಕ್ಕೆ ಓಡಾಡುವುದೇ ಕೆಲಸವಾಗಿದೆ. ಮಕ್ಕಳ ಶಾಲೆಯ ಫೀ, ಡೊನೇಶನ್ ಕಟ್ಟಲು ಹಣವಿಲ್ಲಾ, ಇತ್ತ ಮಳೆ ಉತ್ತಮವಾಗಿದ್ದು ಬಿತ್ತನೆ ಬೀಜ ಗೊಬ್ಬರ ಖರೀದಿಗೆ ಹಣ ಇಲ್ಲ ಎಂದು ದಿನಿನಿತ್ಯ ಕಾರ್ಖಾನೆಗೆ ಅಲೆದಾಡುತ್ತಿದ್ದೇವೆ. ಜಮೀನಿನಲ್ಲಿ ಕೆಲಸ ಬಿಟ್ಟು ಬಾಕಿ ಹಣಕ್ಕೆ ಅಲೆದಾಡುವುದೇ ನಮ್ಮ ಕೆಲಸವಾಗಿದೆ. ಆದರೂ ಸಹ ಬಾಕಿ ಹಣ ಬಿಡುಗಡೆಯಾಗುತ್ತಿಲ್ಲಾ ಎಂದು ರೈತ ಮುಖಂಡ ಭುವನೇಶ್ವರ್ ಶಿಡ್ಲಾಪುರ ಹೇಳಿದ್ದಾರೆ.
ಈ ಮಧ್ಯ ಕಾರ್ಖಾನೆ ಆಡಳಿತ ಮಂಡಳಿಯವರು ಕಾರ್ಖಾನೆ ಗೋದಾಮಿನಲ್ಲಿದ್ದ ಸಕ್ಕರೆಯನ್ನ ರಾತ್ರೋರಾತ್ರಿ ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ರೀತಿ ರಾತ್ರಿ ಸಕ್ಕರೆ ಲೋಡ್ ಮಾಡಿ ನಿಂತಿದ್ದ ಸುಮಾರು 20ಕ್ಕೂ ಅಧಿಕ ಲಾರಿಗಳನ್ನು ರೈತರು ತಡೆದು ನಿಲ್ಲಿಸಿದ್ದಾರೆ. ಸಕ್ಕರೆ ತುಂಬಿದ ಲಾರಿಗಳು ಕಾರ್ಖಾನೆ ಗೇಟ್ ಹೊರಗೆ ಹೋಗದಂತೆ ಗೇಟ್‌ಗೆ ಬೀಗ ಹಾಕಿದ್ದಾರೆ. ಕಾರ್ಖಾನೆ ಆಡಳಿತ ಮಂಡಳಿ ರೈತರ ಬಾಕಿ ತೀರಿಸಿ ಲಾರಿಗಳನ್ನು ಬಿಡಿಸಿಕೊಂಡು ಹೋಗಲಿ ಎಂದು ಮತ್ತೋರ್ವ ರೈತ ಮುಖಂಡ ಶಿವನಾಗಪ್ಪ ಮಲಗುಂದ ಹೇಳಿದರು.
ಈ ಮಧ್ಯೆ ಆಹಾರ ಇಲಾಖೆಯ ಜಿಲ್ಲಾ ಅಧಿಕಾರಿಗಳು ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅವರ ಸಲಹೆಯನ್ನ ಸಹ ಕಾರ್ಖಾನೆ ಆಡಳಿತ ಮಂಡಳಿ ತಳ್ಳಿಹಾಕಿದೆ. ಇತ್ತ ಜಿಲ್ಲಾಡಳಿತಕ್ಕೆ ಸಹ ಆಡಳಿತ ಮಂಡಳಿ ಯಾವುದೇ ಕಿಮ್ಮತ್ತು ನೀಡುತ್ತಿಲ್ಲಾ ಎಂದು ರೈತರು ಆರೋಪಿಸಿದ್ದಾರೆ.
ಎಂ ಡಿ ಹೇಳಿದ್ದೇನು? ಈ ಮಧ್ಯೆ ಜಿ.ಎಂ. ಶುಗರ್ಸ್ ಆಡಳಿತ ಮಂಡಳಿಯ ಎಂಡಿ. ಜಿ.ಎಂ. ಲಿಂಗರಾಜ್ ಈ ಕುರಿತಂತೆ ಪ್ರತಿಕ್ರಿಯೆ ಕೇಳಿದಾಗ ನನಗೆ ಇದ್ಯಾವುದೋ ಗೊತ್ತಿಲ್ಲಾ. ನಾನು ಬೇರೆ ಕಡೆ ಇದ್ದೇನೆ. ಈ ಕುರಿತಂತೆ ನಂತರ ವಿಚಾರಿಸುವುದಾಗಿ ತಿಳಿಸಿದ್ದಾರೆ.