ಹುಬ್ಬಳ್ಳಿ: ಡೀಸೆಲ್ ದರ ಹಾಗೂ ಟೋಲ್ ಶುಲ್ಕ ಪರಿಷ್ಕರಣೆ ಕುರಿತು ಗಡುವು ನೀಡಿದ್ದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲೀಕರ ಸಂಘದಿಂದ ಸೋಮವಾರ ಮಧ್ಯರಾತ್ರಿಯಿಂದಲೂ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆದಿದೆ.
ನಗರದ ಹೊರವಲಯದ ಕಾರವಾರ-ಹುಬ್ಬಳ್ಳಿ ರಸ್ತೆಯ ಅಂಚಟಗೇರಿ ಗ್ರಾಮದ ಬಳಿ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ದಿನನಿತ್ಯದ ಹಣ್ಣು-ಹಾಲು, ತರಕಾರಿ, ಗ್ಯಾಸ್, ಔಷಧ ಸಂಬಂಧಿತ ವಸ್ತುಗಳ ಸಾಗಣೆ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಉಳಿದಂತೆ ವಾಣಿಜ್ಯ ಹಾಗೂ ಇತರೆ ಸರಕು ಸಾಗಣೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕುಸಿತ ಕಂಡಿದೆ.
ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ: ಈ ಕುರಿತಂತೆ ಧಾರವಾಡ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗಿರೀಶ ಮಲನಾಡ್ ಮಾತನಾಡಿ, "ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಷಣ್ಮುಖಪ್ಪ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಸಭೆಗೆ ಆಹ್ವಾನಿಸಿದ್ದಾರೆ. ನಮ್ಮ ಪ್ರಮುಖ ಐದು ಬೇಡಿಕೆ ಇದೆ. ಈ ಬೇಡಿಕೆಗಳಿಗೆ ದಾರಿ ತೋರಿಸುತ್ತಾರೆ ಎಂದು ನಾವು ಕಾಯುತ್ತಿದ್ದೇವೆ. ಭರವಸೆ ಈಡೇರಿಸಿದರೆ ಮುಷ್ಕರ ಹಿಂಪಡೆಯುತ್ತೇವೆ. ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಮುಂದುವರೆಯಲಿದೆ" ಎಂದು ತಿಳಿಸಿದರು.
"ಕಳೆದ ಹಲವು ವರ್ಷಗಳಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಹೋರಾಟದ ಮೂಲಕ ಮನವಿ ಸಲ್ಲಿಸುತ್ತಾ ಬರಲಾಗುತ್ತಿದೆ. ಆದಾಗ್ಯೂ, ಕೂಡ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ, ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಸಾರ್ವಜನಿಕರು ಕೂಡ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಬೇಕು" ಎಂದು ಹೇಳಿದ್ದಾರೆ.
ಲಾರಿ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಎಸ್.ಬಿ.ಘಂಟಿಮಠ ಹೇಳಿದ್ದೇನು?: "ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಟೋಲ್ಗಳನ್ನು ಮಾಡಿದ್ದಾರೆ. ಅದರ ಅವಶ್ಯಕತೆ ಏನಿದೆ?. ಟ್ಯಾಕ್ಸ್ ಕೊಡುತ್ತಿದ್ದೇವೆ. ಇದರ ಹೊರತಾಗಿಯೂ ನೀವು ಟೋಲ್ ಹಣ ಸಂಗ್ರಹಿಸುತ್ತಿರುವುದು ನಮಗೆ ಹೊರೆಯಾಗಿದೆ. ಇದನ್ನು ತೆಗೆಯಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದರು.
"ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ಲಾರಿ ಮಾಲೀಕರು ಒಗ್ಗಟ್ಟಾಗಿ ಹೋರಾಡುತ್ತಿದ್ದಾರೆ. ಇದು ಮುಗಿಯುವವರೆಗೂ ನಿಲ್ಲುವುದಿಲ್ಲ. ಸರ್ಕಾರ ಇದಕ್ಕೆ ಒತ್ತು ಕೊಟ್ಟು ಆದಷ್ಟು ಬೇಗ ಇದಕ್ಕೆ ಒಂದು ದಾರಿ ಮಾಡಿಕೊಡಬೇಕು" ಎಂದು ಹೇಳಿದರು.
ಇದನ್ನೂ ಓದಿ: ಮೈಸೂರು: 9 ಸಾವಿರಕ್ಕೂ ಹೆಚ್ಚು ಲಾರಿಗಳ ಸಂಚಾರ ಸ್ಥಗಿತ - LORRY STRIKE