ಹಾವೇರಿ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿನ ನೀರಾವರಿ ಕ್ಷೇತ್ರಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಪಕ್ಷನಾಯಕ ಆರ್.ಅಶೋಕ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ನೀರಾವರಿ ಕ್ಷೇತ್ರಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಹಾವೇರಿ ಜಿಲ್ಲೆಯಿಂದಲೇ ಹೋರಾಟ ನಡೆಸಲು ಮುನ್ನುಡಿ ಬರೆಯುವುದಾಗಿ ಆರ್ ಅಶೋಕ್ ತಿಳಿಸಿದರು.
ರಾಜ್ಯದಲ್ಲಿ ಬಡವರು ದುಡ್ಡು ಕೊಟ್ಟು ಮನೆ ಪಡೆಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಟೇಬಲ್ ಕೆಳಗೆ ಮನಿ ಕೊಟ್ಟವರಿಗೆ ಮನೆ ನೀಡುತ್ತಿದೆ ಎಂದು ಬಿ.ಆರ್.ಪಾಟೀಲ್ ನೇರವಾಗಿ ಹೇಳಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬಗ್ಗೆ ಅವರ ಪಕ್ಷದ ಶಾಸಕರಾದ ಬಿ.ಆರ್. ಪಾಟೀಲ, ರಾಜು ಕಾಗೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಾಗರ ಶಾಸಕ ಗೋಪಾಲಕೃಷ್ಣ ಅವರೇ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇದೆಯಾ..? ಇದು ನುಡಿದಂತೆ ನಡೆಯುವ ಸರ್ಕಾರ ಅಲ್ಲ. ಸಿಕ್ಕ ಸಿಕ್ಕಲ್ಲಿ ಕಮಿಷನ್ ಹೊಡೆಯುವ ಶೇ.60ರಷ್ಟು ಸರ್ಕಾರ ಎಂದು ಅಶೋಕ ಆರೋಪಿಸಿದ್ದಾರೆ.
ವಸತಿ ಮನೆ ಹಂಚಿಕೆ ಮಾಡುವಲ್ಲಿ ಸುಮಾರು 2,100 ಕೋಟಿ ಕಮಿಷನ್ ಲೂಟಿ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದು, ಸಿಎಂ ಸಿದ್ದರಾಮಯ್ಯ ಟಿಪ್ಪು ಸಂಸ್ಕೃತಿಯನ್ನು ರಾಜ್ಯದ ಮೇಲೆ ಹೇರುತ್ತಿದ್ದಾರೆ. ದಲಿತರಿಗೆ, ಎಸ್ಸಿ-ಎಸ್ಟಿಗಳಿಗೆ ಮೀಸಲಾತಿ ಎಂಬುದು ಸಂವಿಧಾನದಲ್ಲಿ ಇದೆ. ಆದರೆ ಧರ್ಮಾಧಾರಿತವಾಗಿ ಅಲ್ಲ. ಈ ದರಿದ್ರ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಸತ್ತಾಗ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ದೆಹಲಿಯಿಂದ ಬಾಂಬೆಗೆ ಹೆಣ ತರಲು ಹಣಕೊಡಲಿಲ್ಲ ಎಂದು ಅಶೋಕ ವಾಗ್ದಾಳಿ ನಡೆಸಿದರು.
ಅಕ್ಟೋಬರ್- ನವೆಂಬರ್‌ನಲ್ಲಿ ಸರ್ಕಾರ ಬೀಳುತ್ತೆ: ಅಕ್ಟೋಬರ್ ನವೆಂಬರ್‌ನಲ್ಲಿ ಯಾರೇ ಸಿಎಂ ಆದರೂ ಈ ಸರ್ಕಾರ ಬಿದ್ದು ಹೋಗುತ್ತದೆ. ಅಧಿಕಾರಕ್ಕೆ ಬರಲು ಲೂಟಿ ಮಾಡುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದರು.
ರಾಜ್ಯದಲ್ಲಿ ಈಗ ತುರ್ತುಪರಿಸ್ಥಿತಿ ಇದೆ: ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ದ ಅಲೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶ ಮಾಡಿದೆ. ರೈತರು, ಜನರು, ಪ್ರತಿಪಕ್ಷಗಳು ಪ್ರತಿಭಟನೆ ಮಾಡಿದರೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.
ನಮ್ಮ ನಾಯಕ ಯಡಿಯೂರಪ್ಪ ಹೊರಾಟ ಮಾಡುವುದನ್ನು ಹೇಳಿದ್ದಾರೆ. ನಾವು ಬಡವರ ಪರ, ಜನಪರ ಸರ್ಕಾರವನ್ನು ಇಡೀ ದೇಶವೇ ಮೆಚ್ಚುವಂತೆ ಮಾಡಿದ್ದೇವೆ. ನಮ್ಮ ಶಾಕಸರು ಮುಖಂಡರಿಗೆ ಕಿವಿ ಮಾತು ಹೇಳುತ್ತೇನೆ. ಮುಂದಿನ ಎರಡೂವರೆ ವರ್ಷದಲ್ಲಿ ಪಕ್ಷದ ಗೆಲುವಿಗೆ ಹೇಗೆ ಶ್ರಮಿಸಬೇಕು ಎಂದು ಚಿಂತನೆ ಮಾಡಬೇಕಿದೆ. ಪ್ರತಿದಿನ ಸತ್ಯಾಗ್ರಹ ಮಾಡುವಷ್ಟು ವಿಷಯ ಕಾಂಗ್ರೆಸ್ ವಿಷಯ ಕೊಡುತ್ತಿದೆ. ಐದು ವರ್ಷದ ಕೊನೆಯಲ್ಲಿ ಬರುವ ಪರಿಸ್ಥಿತಿ ಎರಡೇ ವರ್ಷದಲ್ಲಿ ರಾಜ್ಯದಲ್ಲಿ ಬಂದಿದೆ. ರಾಜ್ಯದಲ್ಲಿ ಅತ್ಯಂತ ಕೆಟ್ಟ ದುಷ್ಟ ಸರ್ಕಾರ ಇದೆ. ಒಂದೂ ಕೂಡ ಜನಪರ ನಿರ್ಣಯ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಕಾಲದಲ್ಲಿ ರೈತರ ಮಕ್ಕಳಿಗೆ ಸಬ್ಸಿಡಿ ಕೊಡುತ್ತಿದ್ದೆವು, ಅದನ್ನು ನಿಲ್ಲಿಸಿದ್ದಾರೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೆವು ಅದನ್ನು ನಿಲ್ಲಿಸಿದ್ದಾರೆ. ಬಡಮಕ್ಕಳಿಗೆ ವಿಶೇಷವಾಗಿ ಹೆಚ್ಚಿನ ಹಾಸ್ಟೆಲ್ ವ್ಯವಸ್ಥೆ ಮಾಡಿದ್ದೆವು ಅದನ್ನು ಕಡಿತಗೊಳಿಸಿದರು. ಪ್ರಜಾಪ್ರಭುತ್ವವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸಂಪೂರ್ಣ ನಾಶ ಮಾಡಿದೆ. ರೈತರು, ಜನರು, ಪ್ರತಿಪಕ್ಷಗಳು ಪ್ರತಿಭಟನೆ ಮಾಡಿದರೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.