ಹುಬ್ಬಳ್ಳಿ: ಐದು ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿ, ಕೊಲೆ ಮಾಡಿದ್ದ ಆರೋಪಿ ರಿತೇಶ್ ಕುಮಾರ್ (35) ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಮಂಗಳವಾರ ನಗರಕ್ಕೆ ಬಂದ ತನಿಖಾಧಿಕಾರಿಗಳು ಸ್ಥಳೀಯ ಪೊಲೀಸರಿಂದ ಕಡತಗಳನ್ನು ಪಡೆದುಕೊಂಡರು.
ಸರ್ಕಾರದ ಸೂಚನೆ ಮೇರೆಗೆ ಸಿಐಡಿ ಎಸ್ ಪಿ ವೆಂಕಟೇಶ್ ನೇತೃತ್ವದಲ್ಲಿ ಡಿವೈಎಸ್‌ಪಿ ಪುನೀತ್‌ಕುಮಾರ್, ಇನ್ಸ್ಪೆಕ್ಟರ್ ಮಂಜುನಾಥ ಅವರು ಪೊಲೀಸರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದರು. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಕಾಗದಪತ್ರ ಹಾಗೂ ದಾಖಲೆಗಳನ್ನು ಪಡೆದರು. ಬಳಿಕ ಮಗು ಕೊಲೆಯಾದ ಹಾಗೂ ಆರೋಪಿ ಗುಂಡೇಟಿನಿಂದ ಮೃತಪಟ್ಟ ಸ್ಥಳ ಮತ್ತು ಕೆಎಂಸಿ – ಆರ್‌ಐ ಆಸ್ಪತ್ರೆಯ ಶವಾಗಾರಕ್ಕೆ ತೆರಳಿ ಪರಿಶೀಲನೆ ಕೂಡ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆ: ಆರೋಪಿ ರಿತೇಶ್ ಕುಮಾರ್ನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಸಿಐಡಿ ಅಧಿಕಾರಿಗಳ ಮತ್ತು ಪಂಚರ ಸಮ್ಮುಖದಲ್ಲಿ ಕೆಎಂಸಿ - ಆರ್‌ಐ ಶವಾಗಾರದಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು. ಸಿಐಡಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಪರೀಕ್ಷೆಯನ್ನು ಸಂಪೂರ್ಣವಾಗಿ ಚಿತ್ರಿಕರಣ ಮಾಡಲಾಗಿದೆ. ಮೃತದೇಹ ಕೊಂಡೊಯ್ಯಲು ಸಂಬಂಧಿಕರು ಯಾರೂ ಬಾರದ ಕಾರಣ ಕೆಲ ದಿನಗಳವರೆಗೆ ಶವ ಸಂರಕ್ಷಿಸಿಟ್ಟು ನಂತರ ಮಣ್ಣು ಮಾಡುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ವಪ್ರೇರಣೆಯಿಂದ ಸಿಐಡಿ ತನಿಖೆ: ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಡಿಸಿಪಿ ಮಹಾನಿಂಗ ನಂದಗಾವಿ, ಪ್ರಕರಣದ ತನಿಖಾ ಹಂತದಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿ ಮೃತಪಟ್ಟರೆ, ನ್ಯಾಯಾಲಯದ ಆದೇಶದಂತೆ ಸ್ವಯಂಪ್ರೇರಣೆಯಿಂದ ಆ ಪ್ರಕರಣದ ತನಿಖೆ ನಡೆಸಲಾಗುತ್ತದೆ. ಈ ಹಿನ್ನೆಲೆ ಬೆಂಗಳೂರಿನಿಂದ ಬಂದ ಸಿಐಡಿ ಅಧಿಕಾರಿಗಳ ತಂಡ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಕಳೆದ ಮೂರು ದಿನಗಳ ಹಿಂದೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯ ಕಂಪೌಂಡ್ನಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿ ರಿತೇಶ್ ಕುಮಾರ್ ಪುಸಲಾಯಿಸಿ ಕರೆದುಕೊಂಡು ಹೋಗಿದ್ದನು. ನಂತರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ಕೊಲೆ ಮಾಡಿದ್ದ ಎಂಬ ಆರೋಪ ಇದೆ.
ಪೊಲೀಸರು ಆರೋಪಿಯನ್ನು ಬಂಧಿಸಿ, ಸ್ಥಳ ಮಹಜರಿಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಈ ವೇಳೆ ಮಹಿಳಾ ಪಿಎಸ್ಐ ಅನ್ನಪೂರ್ಣ ಅವರು ಮೊದಲು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದರು. ಆದರೂ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಬಳಿಕ ಮತ್ತೊಂದು ಗುಂಡು ಬೆನ್ನಿಗೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆರೋಪಿ ರಿತೇಶಕುಮಾರ್ ಕೆಎಂಸಿಆರ್ಐ ಆಸ್ಪತ್ರೆಗೆ ಕರೆತಂದಿದ್ದಾಗ ಮೃತಪಟ್ಟಿದ್ದನು. ಇನ್ನು ಈತನ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಇಬ್ಬರು ವೈದ್ಯರ ತಂಡ ಮರಣೋತ್ತರ ಪರೀಕ್ಷೆ ಮಾಡಿ, ತನಿಖೆಗೆ ನೆರವಾಗುವುದಕ್ಕಾಗಿ ದೇಹದ ಭಾಗಗಳ ಮಾದರಿಗಳನ್ನು ಸಂಗ್ರಹಿಸಿಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಮಂಗಳವಾರ ಮಧ್ಯಾಹ್ನ ಸಿಐಡಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಪರೀಕ್ಷೆಯನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಗಿದೆ.