ವಿಶೇಷ ವರದಿ: ಕಿರಣ್ ಕುಮಾರ್
ಶಿವಮೊಗ್ಗ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರ ನಡುವೆ ಶಿವಮೊಗ್ಗದ ಸರ್ಕಾರಿ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ದಾಖಲಾತಿಯಲ್ಲಿ ದಾಖಲೆ ಬರೆಯುತ್ತಿದೆ. ಹೌದು, ಶಿವಮೊಗ್ಗ ನಗರದದ ದುರ್ಗಿಗುಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಈಗ ರಾಜ್ಯದ ಗಮನ ಸೆಳೆಯುತ್ತಿದೆ.
ದುರ್ಗಿಗುಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ ಶೇ.95 ರಷ್ಟು ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಇಲ್ಲಿ ಓದಿದವರು ವೈದ್ಯರು, ಇಂಜಿನಿಯರ್, ಸರ್ಕಾರಿ ಉದ್ಯೋಗಿಗಳಾಗಿದ್ದಾರೆ. ಶಾಲೆಯಲ್ಲಿ ಸದ್ಯ 936 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಎಲ್ಕೆಜಿಯಿಂದ ಏಳನೇ ತರಗತಿಯ ತನಕ ಇನ್ನೂ ಪ್ರವೇಶಾತಿ ಪ್ರಕ್ರಿಯೆ ಮುಂದುವರೆದಿದೆ. ಈ ವರ್ಷ ದಾಖಲಾತಿ ಒಂದು ಸಾವಿರ ದಾಟುವ ನೀರಿಕ್ಷೆ ಇದೆ.
ದುರ್ಗಿಗುಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಲಿ 26 ಶಿಕ್ಷಕರಿದ್ದಾರೆ. ಇವರು ಕಳೆದ ಐದಾರು ವರ್ಷಗಳಿಂದ ಇಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶಾಲೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಜೂರಾದ ಆರು ಸ್ಮಾರ್ಟ್ ಕ್ಲಾಸ್ಗಳು ಇವೆ. ಇಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆ ಮತ್ತು ಕಂಪ್ಯೂಟರ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರತಿ ದಿನ ಮಧ್ಯಾಹ್ನ ಊಟ, ಹಾಲು, ಬಾಳೆಹಣ್ಣು ನೀಡಲಾಗುತ್ತಿದೆ.
ಎಸ್ಡಿಎಂಸಿಯಿಂದ ಶಾಲೆ ಮೇಲ್ವಿಚಾರಣೆ: ಶಾಲಾ ಅಭಿವೃದ್ಧಿ ಸಮಿತಿಯು ಶಾಲೆಯ ಉಸ್ತುವಾರಿ ನೋಡುಕೊಳ್ಳುತ್ತಿದೆ. ಈ ಸಮಿತಿಗೆ ಪೋಷಕರೇ ಸದಸ್ಯರಾದ ಕಾರಣಕ್ಕೆ ಶಾಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶಾಲೆಗೆ ಏನೇ ಸಮಸ್ಯೆ ಎದುರಾದರೂ ಸಮಿತಿಯವರು ತಕ್ಷಣ ಬಗೆಹರಿಸುತ್ತಾರೆ. ಶಾಲಾ ಅಭಿವೃದ್ಧಿ ಸಮಿತಿಯವರೇ ಶಾಲೆಯ ಶೌಚಾಲಯ, ಕಟ್ಟಡದ ಸ್ವಚ್ಚತೆಗೆ ಪ್ರತಿ ತಿಂಗಳು 10 ಸಾವಿರ ನೀಡಿ ಕೆಲಸದವರನ್ನು ನೇಮಿಸಿದ್ದಾರೆ. ಈ ಮೂಲಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.
ತಮ್ಮ ಇಬ್ಬರು ಮಕ್ಕಳನ್ನು ದುರ್ಗಿಗುಡಿ ಸರ್ಕಾರಿ ಶಾಲೆಗೆ ದಾಖಲಿಸಿದ ಬಸವರಾಜ್ ಮಾತನಾಡಿ, ನಾನು ಇತ್ತಿಚೇಗೆ ಬೆಂಗಳೂರಿನಿಂದ ಬಂದು ಶಿವಮೊಗ್ಗದಲ್ಲಿ ನೆಲೆಸಿದ್ದೇನೆ. ಇಲ್ಲಿ ಶಿಕ್ಷಣ ತುಂಬಾ ಚನ್ನಾಗಿದೆ ಎಂದು ತಿಳಿದು ನನ್ನ ಇಬ್ಬರು ಮಕ್ಕಳನ್ನು ಈ ಶಾಲೆಗೆ ದಾಖಲಿಸಿದ್ದೇನೆ. ಮಗಳನ್ನು ಎರಡನೇ ತರಗತಿಗೆ, ಮಗನನ್ನು ಎಲ್ಕೆಜಿ ಗೆ ದಾಖಲಿಸಿದ್ದೇನೆ. ಇಲ್ಲಿ ಶಿಕ್ಷಣ ಚೆನ್ನಾಗಿದೆ ಎಂದು ನನ್ನ ತಾಯಿ ಹೇಳುತ್ತಿದ್ದರು. ಜೊತೆಗೆ ನನ್ನ ಸಂಬಂಧಿಕರು ಸಹ ಇದೇ ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದರು.
ಪೋಷಕರಾದ ಉಮೇಶ್ ಮಾತನಾಡಿ, ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವಷ್ಟು ಆರ್ಥಿಕವಾಗಿ ಶಕ್ತರಲ್ಲ. ಇದೇ ಶಾಲೆಯಲ್ಲಿ ನಮ್ಮ ಅಣ್ಣನ ಮಕ್ಕಳು ಓದಿ ಈಗ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.ಇದರಿಂದ ನಾನು ನನ್ನ ಇಬ್ಬರು ಮಕ್ಕಳನ್ನು ಇಲ್ಲೇ ಓದಿಸುತ್ತಿದ್ದೇನೆ. ನನ್ನ ಮಗು ಈಗ ಇಲ್ಲಿ ಎಲ್ಕೆಜಿ ಓದುತ್ತಿದೆ. ಈ ಶಾಲೆಯಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಇರುವುದಕ್ಕೆ ತುಂಬಾ ಸಂತೋಷವಾಗಿದೆ. ಇದರಿಂದ ನನ್ನ ಮಗುವನ್ನು ಇಲ್ಲಿಗೆ ಸೇರಿಸಿದ್ದೇನೆ. ನನ್ನಂತೆ ಬಡವರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತಿದ್ದಾರೆ. ನನ್ನ ಮಗಳು ಈಗ ಮೂರನೇ ತರಗತಿ, ಅವಳು ಇಂಗ್ಲಿಷ್ ವಿಷಯವನ್ನು ಚೆನ್ನಾಗಿ ಓದುತ್ತಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು.
ನನ್ನ ಇಬ್ಬರು ಮಕ್ಕಳನ್ನು ಈ ಶಾಲೆಗೆ ಸೇರಿಸಿದ್ದೇನೆ: ಪೋಷಕರಾದ ಸುವರ್ಣ ಮಾತನಾಡಿ, ಬಡತನ ಕಾರಣ ನಾವು ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಆಗಲಿಲ್ಲ. ನಾನು ಮನೆಗೆಲಸ ಮಾಡುತ್ತೇನೆ, ನನ್ನ ಪತಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಇಷ್ಟು ದಿನ ಮಕ್ಕಳನ್ನು ನಮ್ಮ ತಾಯಿ ಮನೆಯಟ್ಟು ಓದಿಸುತ್ತಿದ್ದೆ. ಈಗ ದುರ್ಗಿಗುಡಿ ಸರ್ಕಾರಿ ಶಾಲೆ ಚೆನ್ನಾಗಿದೆ ಎಂದು ಕೇಳಿ ನನ್ನ ಇಬ್ಬರು ಮಕ್ಕಳನ್ನು ಈ ಶಾಲೆಗೆ ಸೇರಿಸಿದ್ದೇನೆ. ಇಲ್ಲಿ ಶುಲ್ಕವಿಲ್ಲ ಹಾಗೂ ಮಕ್ಕಳಿಗೆ ಮಧ್ಯಾಹ್ನ ಊಟ ಸಿಗುತ್ತದೆ ಎಂದರು.
ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ: ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಈ ಶಾಲೆಯಲ್ಲಿ ಓದಿದ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ. ಇದರಿಂದ ಇಲ್ಲಿ ಪ್ರತಿ ವರ್ಷ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಿಂದೆ ಒಂದರಿಂದ ಏಳನೇ ತರಗತಿಗೆ 700 ಜನ ವಿದ್ಯಾರ್ಥಿಗಳಿದ್ದರು. ಈ ವರ್ಷ 936 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.
ಇಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಶಿಕ್ಷಕರು ಉತ್ತಮವಾಗಿ ಪಾಠ ಮಾಡುತ್ತಿದ್ದಾರೆ. ಇಲ್ಲಿನ ಶಿಕ್ಷಣದ ಗುಣಮಟ್ಟ ನೋಡಿ ಅನೇಕರು ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸುತ್ತಿದ್ದಾರೆ. ಈ ಶಾಲೆಯ ಸೀಟಿಗಾಗಿ ಎಂಪಿ, ಎಂಎಲ್ಎಯಿಂದ ಶಿಫಾರಸು ಮಾಡಿಸಿದ ಉದಾಹರಣೆ ಇದೆ. ಕಳೆದ ವರ್ಷ ಎಲ್ಕೆಜಿ ಶುರು ಮಾಡಿದ್ದು, ಈ ವರ್ಷ ಯುಕೆಜಿ ಪ್ರಾರಂಭಿಸಿದ್ದೇವೆ. ಇಲ್ಲಿ ಹೆಚ್ಚಿನ ಶಾಲಾ ಕೊಠಡಿ ಅವಶ್ಯಕತೆ ಇದೆ. ಶಿಕ್ಷಣ ಇಲಾಖೆ ಹೆಚ್ಚುವರಿ ಕೊಠಡಿ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಹೆಚ್ಚುವರಿ ಕೊಠಡಿ ಅವಶ್ಯಕತೆ ಇದೆ: ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ನಾಗರತ್ನಮ್ಮ ಎಸ್. ಆರ್ ಮಾತನಾಡಿ, ಕಳೆದ ವರ್ಷ 846 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ವರ್ಷ 936 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ನಮ್ಮಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಇದೆ. ಎಲ್ಕೆಜಿ, ಯುಕೆಜಿ ದಾಖಲಾತಿ ಮುಗಿದಿದೆ. ಆದರೂ ಸಹ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಬರುತ್ತಿದ್ದಾರೆ. ಹಾಲಿ ಶಾಲೆಯಲ್ಲಿ 26 ಜನ ಶಿಕ್ಷಕರಿದ್ದಾರೆ. ಇಲ್ಲಿ ಪಿಇ ಟೀಚರ್ ಹಾಗೂ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದೆ. ಮುಖ್ಯ ಶಿಕ್ಷಕರನ್ನು ನೇಮಕ ಮಾಡಿದರೆ ಚೆನ್ನಾಗಿರುತ್ತದೆ. ಇಲ್ಲಿನ ಎಸ್ಡಿಎಂಸಿ ಸಮಿತಿ ಚೆನ್ನಾಗಿದೆ. ಮಕ್ಕಳು ಜಾಸ್ತಿ ಆಗಿರುವುದರಿಂದ ಹೆಚ್ಚುವರಿ ಕೊಠಡಿಯ ಅವಶ್ಯಕತೆ ಇದೆ ಎಂದರು.
ಶಿಕ್ಷಕಿ ಕನ್ಯಾಕುಮಾರಿ ಮಾತನಾಡಿ, ಇಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅನೇಕರು ನಮ್ಮ ಶಾಲೆಯ ಪಕ್ಕದ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಶಿಕ್ಷಕರು, ಉದ್ಯಮಿಗಳಾಗಿದ್ದಾರೆ. ಇದು ನಮ್ಮ ಶಾಲೆಗೆ ಹೆಮ್ಮೆಯಾಗಿದೆ. ಪಿಯುಸಿ ಮತ್ತು ಎಸ್ಎಸ್ಎಲ್ಸಿಯ ಟಾಪರ್ ವಿದ್ಯಾರ್ಥಿಗಳು ನಮ್ಮ ಇಲ್ಲಿನ ವಿದ್ಯಾರ್ಥಿಗಳಾಗಿರುತ್ತಾರೆ ಎಂದು ಹೇಳಿದರು.
ಈ ಶಾಲೆಯಲ್ಲಿ ಓದುವ ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗ್ತಿದೆ: ಏಳನೇ ತರಗತಿ ವಿದ್ಯಾರ್ಥಿನಿ ಗೀತಾ ಮಾತನಾಡಿ, ದುರ್ಗಿಗುಡಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಇಲ್ಲಿನ ಶಿಕ್ಷಕರ ನಮ್ಮ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಎಲ್ಲರೂ ಚೆನ್ನಾಗಿ ಪಾಠ ಮಾಡುತ್ತಾರೆ. ಮಧ್ಯಾಹ್ನದ ಬಿಸಿ ಊಟ ಚೆನ್ನಾಗಿರುತ್ತದೆ. ಜೊತೆಗೆ ಬಾಳೆಹಣ್ಣು, ಮೊಟ್ಟೆ ಕೊಡುತ್ತಾರೆ. ಈ ಶಾಲೆಯಲ್ಲಿ ಓದುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬ ಸಂತೋಷವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಸಂಚಿತ್ ರಾಘವ್ ಮಾತನಾಡಿ, ನಮ್ಮ ಶಾಲೆಯಲ್ಲಿ ಪಾಠ ಚೆನ್ನಾಗಿ ಮಾಡುತ್ತಾರೆ. ನಮಗೆ ಏನೇ ಸಂದೇಹವಿದ್ದರೂ ಪರಿಹರಿಸುತ್ತಾರೆ. ನಾನು ದೊಡ್ಡವನಾದ ಮೇಲೆ ಐಎಎಸ್ ಅಧಿಕಾರಿ ಆಗಬೇಕೆಂದುಕೊಂಡಿದ್ದೇನೆ. ಮಧ್ಯಾಹ್ನದ ಊಟ ಚೆನ್ನಾಗಿದ್ದು, ಬಾಳೆಹಣ್ಣು, ಮೊಟ್ಟೆ ಕೊಡುತ್ತಾರೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಕ್ಯಾನ್ಸರ್ ಇರುವ ಮಕ್ಕಳಿಗಾಗಿಯೇ ಪ್ರತ್ಯೇಕ ಶಾಲೆ ಆರಂಭ: ಸಚಿವ ಮಧು ಬಂಗಾರಪ್ಪ
ಇದನ್ನೂ ಓದಿ: ಮಕ್ಕಳೆಂಬ ದೇವರಿಗೆ 'ಹೊರೆಕಾಣಿಕೆ': ಮಂಗಳೂರಿನ ಶಾಲೆಗೆ ಹರಿದುಬಂತು ಶಾಲಾ ಸಾಮಗ್ರಿ