ದೀಪಾವಳಿಗೆ ಊರಿಗೆ ತೆರಳುವವರಿಗೆ ಗುಡ್ ನ್ಯೂಸ್: NWKRTC ಯಿಂದ 310 ಹೆಚ್ಚುವರಿ ಬಸ್, ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ
ದೀಪಾವಳಿ ಹಬ್ಬದ ನಿಮಿತ್ತ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ವಿಶೇಷ ಬಸ್ ಮತ್ತು ರೈಲುಗಳನ್ನು ಬಿಡಲಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.

Published : October 14, 2025 at 1:49 PM IST
ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ನೈಋತ್ಯ ರೈಲ್ವೆ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.
ದೀಪಾವಳಿಗೆ 300ಕ್ಕೂ ಹೆಚ್ಚು ವಿಶೇಷ ಬಸ್: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 310 ಹೆಚ್ಚುವರಿ ವಿಶೇಷ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
ಅ.20 ಹಾಗೂ 22 ರಂದು ಕ್ರಮವಾಗಿ ನರಕ ಚತುರ್ದಶಿ ಹಾಗೂ ದೀಪಾವಳಿ ನಿಮಿತ್ತ ಸರ್ಕಾರಿ ರಜೆ ಹಾಗೂ ಅ.18 ಹಾಗೂ 19 ರಂದು ವಾರಾಂತ್ಯ ದಿನಗಳಾಗಿದ್ದರಿಂದ ಬೆಂಗಳೂರು ಮತ್ತು ಇತರ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳುವುದರಿಂದ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಿಂದ ರಾಜ್ಯ/ಅಂತಾರಾಜ್ಯ ವಿವಿಧ ಸ್ಥಳಗಳಿಗೆ ತೆರಳಲು ಅ.17 ರಿಂದ 19 ರಂದು ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಬ್ಬ ಮುಗಿದ ನಂತರ ಅ.22 ಮತ್ತು ನಂತರದ ದಿನಗಳಂದು ಪ್ರಮುಖ ಸ್ಥಳಗಳಿಗೆ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ನೈಋತ್ಯ ರೈಲ್ವೆಯಿಂದ ದೀಪಾವಳಿಗೆ ವಿಶೇಷ ರೈಲುಗಳ ಸಂಚಾರ: ದೀಪಾವಳಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯು ವಿಶೇಷ ರೈಲು ಸೇವೆಗಳನ್ನು ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲುಗಳ ವಿವರಗಳು ಹೀಗಿವೆ:
ರೈಲು ಸಂಖ್ಯೆ 07353/07354 ಎಸ್ಎಸ್ಎಸ್ ಹುಬ್ಬಳ್ಳಿ–ಮಂಗಳೂರು ಜಂಕ್ಷನ್–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ (1 ಟ್ರಿಪ್):
ರೈಲು ಸಂಖ್ಯೆ 07353 ಎಸ್ಎಸ್ಎಸ್ ಹುಬ್ಬಳ್ಳಿ – ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 17 ರಂದು ಸಂಜೆ 4 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, ಮರುದಿನ ಅಕ್ಟೋಬರ್ 18 ರಂದು ಬೆಳಗ್ಗೆ 11:15 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ. ಈ ರೈಲು ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ರೈಲು ಸಂಖ್ಯೆ 07354 ಮಂಗಳೂರು ಜಂಕ್ಷನ್ – ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 18 ರಂದು ಮಧ್ಯಾಹ್ನ 02:35 ಗಂಟೆಗೆ ಮಂಗಳೂರು ಜಂಕ್ಷನ್ನಿಂದ ಹೊರಟು, ಅದೇ ದಿನ ರಾತ್ರಿ 11:15 ಗಂಟೆಗೆ ಯಶವಂತಪುರ ತಲುಪಲಿದೆ. ಈ ರೈಲು ಬಂಟವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ ಮತ್ತು ಕುಣಿಗಲ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ರೈಲು ಸಂಖ್ಯೆ 06229/06230 ಯಶವಂತಪುರ-ಮಂಗಳೂರು ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್ ಪ್ರೆಸ್ (1 ಟ್ರಿಪ್):
ರೈಲು ಸಂಖ್ಯೆ 06229 ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ ಪ್ರೆಸ್ ಅಕ್ಟೋಬರ್ 19 ರಂದು ರಾತ್ರಿ 12:15 ಗಂಟೆಗೆ ಯಶವಂತಪುರದಿಂದ ಹೊರಟು, ಅದೇ ದಿನ ಬೆಳಗ್ಗೆ 11:15 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ. ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟವಾಳ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ರೈಲು ಸಂಖ್ಯೆ 06230 ಮಂಗಳೂರು ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 19 ರಂದು ಮಧ್ಯಾಹ್ನ 02:35 ಗಂಟೆಗೆ ಮಂಗಳೂರು ಜಂಕ್ಷನ್ನಿಂದ ಹೊರಟು, ಮರುದಿನ ರಾತ್ರಿ 12:30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಇದು ಬಂಟವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್ ಮತ್ತು ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಈ ಎರಡು ವಿಶೇಷ ರೈಲುಗಳು (07353/07354 ಮತ್ತು 06229/06230) 01 ಫಸ್ಟ್ ಕಮ್ ಸೆಕೆಂಡ್ ಎಸಿ, 01 ಎಸಿ 2-ಟೈರ್, 02 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 04 ಜನರಲ್ ಸೆಕೆಂಡ್ ಕ್ಲಾಸ್, ಮತ್ತು 02 ಎಸ್ಎಲ್ಆರ್/ಡಿ ಬೋಗಿಗಳು ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತವೆ.
ರೈಲು ಸಂಖ್ಯೆ 06507/06508 ಬೆಳಗಾವಿ-ಎಸ್ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ (1 ಟ್ರಿಪ್):
ರೈಲು ಸಂಖ್ಯೆ 06507 ಬೆಳಗಾವಿ - ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 18 ರಂದು ಬೆಳಗ್ಗೆ 8:00 ಗಂಟೆಗೆ ಬೆಳಗಾವಿಯಿಂದ ಹೊರಟು, ಅದೇ ದಿನ ರಾತ್ರಿ 07:45 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಹಿಂದಿರುಗುವ ಸೇವೆ, ರೈಲು ಸಂಖ್ಯೆ 06508, ಅಕ್ಟೋಬರ್ 18 ರಂದು ರಾತ್ರಿ 09:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಅಕ್ಟೋಬರ್ 19 ರಂದು ಬೆಳಗ್ಗೆ 08:35 ಗಂಟೆಗೆ ಬೆಳಗಾವಿಯನ್ನು ತಲುಪಲಿದೆ.
ಮಾರ್ಗಮಧ್ಯೆ, ಈ ರೈಲು ಎರಡೂ ದಿಕ್ಕುಗಳಲ್ಲಿ ಲೋಂಡಾ, ಅಲ್ನಾವರ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣವರ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ಈ ರೈಲು 01 ಎಸಿ 2-ಟೈರ್, 03 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 03 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಎಸ್ಎಲ್ಆರ್/ಡಿ ಸೇರಿ 19 ಬೋಗಿಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ವಾಯುವ್ಯ ಸಾರಿಗೆ ಸಂಸ್ಥೆಗೆ 200 ಇವಿ ಬಸ್: ಹುಬ್ಬಳ್ಳಿ, ಬೆಳಗಾವಿಯಲ್ಲಿ ಡಿಪೋ ನಿರ್ಮಾಣಕ್ಕೆ ಸಿದ್ಧತೆ

