ಹಾವೇರಿ: ನಗರದಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ತಾಯಿಯ ಮಡಿಲಿಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆ ಮೂಲದ ಯುವತಿ ಮುಮ್ತಾಜ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ನಾಲ್ಕೈದು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಮುಮ್ತಾಜ್ ಗುರುವಾರ ಹಾವೇರಿ ನಗರದಲ್ಲಿ ಅಲೆದಾಡುತ್ತಿದ್ದನ್ನು ಕಂಡ ಸ್ಥಳೀಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ಗೆ ಮಾಹಿತಿ ನೀಡಿದ್ದರು. ನಂತರ ಖಾದರ್, ಮಾನಸಿಕ ಅಸ್ವಸ್ಥ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ವೈದ್ಯರಿಗೆ ತೋರಿಸಿದ್ದರು. ಮಾನಸಿಕ ರೋಗ ತಜ್ಞೆ ಡಾ.ಲೀಲಾ ಯುವತಿಗೆ ಚಿಕಿತ್ಸೆ ನೀಡಿದ್ದರು.
ನಂತರ ಅಬ್ದುಲ್ ಖಾದರ್, ಯುವತಿಯನ್ನು ತಮ್ಮ ಪೋಷಕರಿಗೆ ಸೇರಿಲು ಆಕೆಯ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್ ಮತ್ತು ವಾಟ್ಯ್ಆ್ಯಪ್ನಲ್ಲಿ ಹಾಕಿದ್ದರು. ಇದನ್ನು ಗಮನಿಸಿದ ಯುವತಿಯ ಸಂಬಂಧಿಕರು, ಮುಮ್ತಾಜ್ ತಾಯಿಗೆ ಮಾಹಿತಿ ನೀಡಿದ್ದರು. ನಂತರ ಮುಮ್ತಾಜ್ ತಾಯಿ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ಅನ್ನು ಸಂಪರ್ಕಿಸಿ ಶನಿವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು.
ಜಿಲ್ಲಾಸ್ಪತ್ರೆಯ ಮಹಿಳಾ ಸಾಂತ್ವನ ಕೇಂದ್ರ ಮತ್ತು ಜಿಲ್ಲಾಸ್ಪತ್ರೆಯ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ಅವರ ಸಮ್ಮುಖದಲ್ಲಿ ಯುವತಿಯನ್ನು ಆಕೆಯ ತಾಯಿಗೆ ಒಪ್ಪಿಸಲಾಯಿತು. ಮುಮ್ತಾಜ್ಳನ್ನು ಕಂಡ ತಾಯಿಯ ಖುಷಿಗೆ ಪಾರವೇ ಇರಲಿಲ್ಲ, ನಂತರ ಮಗಳನ್ನು ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: 9ನೇ ವಯಸ್ಸಿನಲ್ಲಿ ಕಾಣೆ, 38ನೇ ವಯಸ್ಸಿನಲ್ಲಿ ಪತ್ತೆ!; ಗೂಗಲ್ ಮ್ಯಾಪ್ ಸಹಾಯದಿಂದ 29 ವರ್ಷಗಳ ಬಳಿಕ ತನ್ನ ಮನೆ ಸೇರಿದ ವ್ಯಕ್ತಿ