ಬೆಂಗಳೂರು : TCS ವರ್ಲ್ಡ್ 10K ಮ್ಯಾರಥಾನ್‌ಗೆ ಸಿಲಿಕಾನ್ ಸಿಟಿ ಸಿದ್ಧವಾಗಿದೆ. ವಿಶ್ವದ ಸ್ಟಾರ್ ಅಥ್ಲೀಟ್‌ಗಳು, ಭಾರತೀಯ ಪ್ರತಿಭೆಗಳು, ಹವ್ಯಾಸಿ ರನ್ನರ್‌ಗಳ ನಡುವೆ ಒಂಟಿ ಕಾಲಿನ ಸಾಧಕರೊಬ್ಬರು ಈ ಬಾರಿಯ ಮ್ಯಾರಥಾನ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ತೇನ್‌ಜಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ ವಿಜೇತ ಉದಯ್ ಕುಮಾರ್ ಈ ಬಾರಿಯ TCS ವರ್ಲ್ಡ್ 10K ಮ್ಯಾರಥಾನ್ ಅಖಾಡದಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷವಾಗಿದೆ.
ಅಥ್ಲೀಟ್ ಉದಯಕುಮಾರ್ ಪರಿಚಯ: ಪಶ್ಚಿಮ ಬಂಗಾಳದ ಬೆಲ್ಗೋರಿಯಾ ಮೂಲದ ಉದಯ್ ಕುಮಾರ್ ಗುತ್ತಿಗೆ ಆಧಾರದ ಕೆಲಸಗಾರನಾಗಿದ್ದವರು. 2015ರಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಪ್ಲಾಟ್‌ಫಾರ್ಮ್‌ನಿಂದ ಜಾರಿ ಬಿದ್ದ ಉದಯ್ ಕುಮಾರ್ ತಮ್ಮ ಎಡಗಾಲು ಕಳೆದುಕೊಂಡಿದ್ದಾರೆ. ವೈದ್ಯರು ಉದಯ್ ಕುಮಾರ್ ಅವರನ್ನು 91% ವಿಕಲಚೇತನ ಎಂದು ಘೋಷಿಸಿದರು. ಅನಿರೀಕ್ಷಿತವಾಗಿ ಎದುರಾದ ಪ್ರತಿಕೂಲ ಪರಿಸ್ಥಿತಿ ಕುರಿತು ಹೆಚ್ಚು ಯೋಚಿಸದ ಉದಯ್ ಕುಮಾರ್ ವಿಭಿನ್ನ ದಾರಿಯನ್ನು ಆರಿಸಿಕೊಂಡರು. 2017ರಲ್ಲಿ ಕೋಲ್ಕತ್ತಾದಲ್ಲಿ 5 ಕಿ.ಮೀ ಮ್ಯಾರಥಾನ್‌ನೊಂದಿಗೆ ಆರಂಭವಾದ ಉದಯ್ ಕುಮಾರ್ ಅವರ ಪ್ರಯಾಣ ಸಾಂಗವಾಗಿ ಮುಂದುವರೆದಿದೆ.

ಈವರೆಗೆ 16 ರಾಜ್ಯಗಳಲ್ಲಿನ 80ಕ್ಕೂ ಹೆಚ್ಚು ರೇಸ್‌ಗಳನ್ನು ಉದಯ್ ಕುಮಾರ್ ಗೆದ್ದು ಬೀಗಿದ್ದಾರೆ. ಈ ಅಸಾಧಾರಣ ಸಾಧನೆಗಳ ಹೊರತಾಗಿಯೂ ಸ್ಥಿರವಾಗಿರುವ ಉದಯ್ ಕುಮಾರ್ ಇದೀಗ TCS ವರ್ಲ್ಡ್ 10K ಮೂಲಕ ಹೊಸ ವೈಯಕ್ತಿಕ ಸವಾಲಿನ ಮೇಲೆ ಕಣ್ಣಿಟ್ಟಿದ್ದಾರೆ. ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ನಡೆಯಲಿರುವ TCS ವರ್ಲ್ಡ್ 10Kನಲ್ಲಿ ಅವರು ಭಾಗವಹಿಸಲಿದ್ದಾರೆ.
"ಬೆಂಗಳೂರಿನಲ್ಲಿ ನಾನು ಓಡುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ವಿರಾಟ್ ಕೊಹ್ಲಿಯವರ One8 ಓಟದಲ್ಲಿ ಭಾಗವಹಿಸಿದ್ದ ನಾನು, ಅಲ್ಲಿ 1 ಗಂಟೆ 35 ನಿಮಿಷಗಳ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದ್ದೇನೆ. ಈಗ 1 ಗಂಟೆ 20 ನಿಮಿಷಗಳಲ್ಲಿ ಅಂತಿಮ ಗೆರೆ ದಾಟುವ ಗುರಿಯನ್ನು ಹೊಂದಿದ್ದೇನೆ" ಎಂದು ಉದಯ್ ಕುಮಾರ್ ಘೋಷಿಸಿದರು.
''ಈ ವರ್ಷ, ಜನವರಿ 17, 2025ರಂದು ನಾನು ಪರ್ವತಾರೋಹಣದಲ್ಲಿ ಅತ್ಯುನ್ನತ ಪ್ರಶಸ್ತಿಯನ್ನು ಪಡೆದಿದ್ದೇನೆ. 16,500 ಅಡಿ ಎತ್ತರದಲ್ಲಿ ಕಾಂಚನಜುಂಗಾವನ್ನು ಏರಿದ್ದೆ. ಅದರ ನಂತರ, ಆಫ್ರಿಕಾ ಖಂಡದ ಅತ್ಯುನ್ನತ ಶಿಖರವಾದ ಕಿಲಿಮಂಜಾರೊ ಪರ್ವತಕ್ಕೆ ಹೋಗಿದ್ದೆ. ತಿರಾಜಪುರದಿಂದ ಸ್ಕೈ ಡೈವಿಂಗ್ ಮಾಡಿದೆ ಮತ್ತು 35 ಅಡಿಗಳಷ್ಟು ತೆರೆದ ನೀರಿನಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದೆ. ನೀರು, ಭೂಮಿ ಮತ್ತು ಗಾಳಿಯಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿದ ಮೊದಲ ಭಾರತೀಯನಾಗಿ ಇತಿಹಾಸ ನಿರ್ಮಿಸಿದೆ. ನನ್ನನ್ನು ನಾನು 91% ಸಮರ್ಥ ಎಂದು ಹೇಳಿಕೊಳ್ಳಲು ಬಯಸುತ್ತೇನೆ'' ಎಂದು ಅವರು ವಿಶ್ವಾಸ ಮತ್ತು ಭರವಸೆಯ ಮಾತುಗಳನ್ನಾಡಿದರು.
ಇದನ್ನೂ ಓದಿ: TCS ವರ್ಲ್ಡ್ 10K: ಕೀನ್ಯಾದ ಪೀಟರ್ ಮ್ವಾನಿಕಿ, ಲಿಲಿಯನ್ ಕಸಾಯಿಟ್ ಚಾಂಪಿಯನ್ - TCS World 10K Bengaluru