ಮೈಸೂರು: ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ, ಯಾರೂ ಮುಖ್ಯಮಂತ್ರಿಗಳ ಬದಲಾವಣೆಗೆ ಗಡುವು ಕೊಟ್ಟಿಲ್ಲ. ಈಗ ಸಿಎಂ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಇಂದು ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ದೆಹಲಿಗೆ ಸಿಎಂ, ಡಿಸಿಎಂ ಹೋಗಿರುವುದು ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡಲು, ಮುಖ್ಯವಾಗಿ ಜಾತಿ ಗಣತಿ ಬಗ್ಗೆ ಚರ್ಚೆಯಾಗಿದೆ. ಆದರೆ ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆ ಗೊತ್ತಿಲ್ಲ. ಯಾರೂ ಮುಖ್ಯಮಂತ್ರಿ ಬದಲಾವಣೆಗೆ ಗಡುವು ಕೊಟ್ಟಿಲ್ಲ. ಮುಖ್ಯಮಂತ್ರಿಗಳು ಒಳ್ಳೆ ಕೆಲಸ ಮಾಡುತ್ತಿದ್ದಾರೆ, ಅದನ್ನು ಮುಂದುವರೆಸಿಕೊಂಡು ಹೋಗಿ ಎಂದು ಹೇಳಿದ್ದಾರೆ ಎಂದರು.
ಬೆಂಗಳೂರಿನ ಕಾಲ್ತುಳಿತ ಪ್ರಕರಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ರೀತಿ ಘಟನೆಗಳು ನಡೆದಾಗ ಯಾವುದೇ ಕ್ರಮ ಆಗಿಲ್ಲ. ನಾವು ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದೇವೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಂದರೆ ಉತ್ತರ ಪ್ರದೇಶದ ಕುಂಭಮೇಳ ಹಾಗೂ ಬಿಜೆಪಿ ಮಿತ್ರ ಪಕ್ಷವಿರುವ ತಿರುಪತಿಯಲ್ಲಿ ನಡೆದ ಘಟನೆಗಳ ಬಗ್ಗೆ ಯಾವುದೇ ಕ್ರಮ ಆಗಿಲ್ಲ. ಅಲ್ಲಿ ಯಾರು ರಾಜೀನಾಮೆ ತೆಗೆದುಕೊಂಡಿಲ್ಲ. ಇದು ಬರೀ ಅಪಪ್ರಚಾರದ ರಾಜಕೀಯ ಮಾಡುತ್ತಿದ್ದಾರೆ. ಈ ಘಟನೆ ನಡೆಯಬಾರದಿತ್ತು, ತಪ್ಪಿತಸ್ಥರ ವಿರುದ್ಧ ಸಿಎಂ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಸಿಎಂ ತಪ್ಪಿಲ್ಲ, ಕ್ರೀಡಾಂಗಣದವರು ಅನುಮತಿ ಪಡೆದುಕೊಂಡಿಲ್ಲ. ಪೊಲೀಸರು ಸರಿಯಾಗಿ ಬಂದೋಬಸ್ತ್ ಮಾಡಿಲ್ಲ. ತನಿಖೆ ನಡೆಯುತ್ತಿದೆ, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ. ಈ ಪ್ರಕರಣದಿಂದ ಸಿಎಂ ಸ್ಥಾನಕ್ಕೆ ಯಾವುದೇ ಗಂಡಾಂತರ ಇಲ್ಲ ಎಂದರು.
ಇದನ್ನೂ ಓದಿ: ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ; ಸಮೀಕ್ಷೆ ಮರುಗಣತಿಗೆ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಇದನ್ನೂ ಓದಿ: ಜಾತಿ ಗಣತಿ ಕುರಿತ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿಕೆಶಿ