ಶಿವಮೊಗ್ಗ: ಇಲ್ಲಿಂದ ಕಾಶ್ಮೀರಕ್ಕೆ ಕುಟುಂಬಸಮೇತ ಪ್ರವಾಸಕ್ಕೆ ಹೋಗಿದ್ದ ಉದ್ಯಮಿ ಮಂಜುನಾಥ್ರಾವ್ ಅವರು ಕಾಶ್ಮೀರದ ಪೆಹಲ್ಗಾಂವ್ನಲ್ಲಿ ಇಂದು ಮಧ್ಯಾಹ್ನ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಏಪ್ರಿಲ್ 19ರಂದು ಅವರು ಪತ್ನಿ ಪಲ್ಲವಿ ಮತ್ತು ಪುತ್ರನ ಜೊತೆಗೆ ಪ್ರವಾಸ ಕೈಗೊಂಡಿದ್ದರು. ಇವರ ಜೊತೆ ಸಾಗರದ ತಂಡ ಇತ್ತು.
ಮಂಜುನಾಥ್ರಾವ್ ಅವರು ಉಗ್ರರ ಗುಂಡೇಟಿನಿಂದ ಸಾವನ್ನಪ್ಪಿರುವುದನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು 'ಈಟಿವಿ ಭಾರತ'ಕ್ಕೆ ದೃಢಪಡಿಸಿದ್ದಾರೆ. ಮಂಜುನಾಥ್ರಾವ್ ಅವರು ಶಿವಮೊಗ್ಗದ ವಿಜಯನಗರದ ನಿವಾಸಿಯಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿ. ಇವರ ಪತ್ನಿ ಪಲ್ಲವಿ ಚಿಕ್ಕಮಗಳೂರು ಜಿಲ್ಲೆಯ ಬಿರೂರಿನ ಮ್ಯಾಮ್ಕೋಸ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಗನಿಗಾಗಿ ಕಾಶ್ಮೀರ ಪ್ರವಾಸ: ಪುತ್ರ ಅಭಿಜಯ ಅವರು ಇತ್ತೀಚೆಗೆ ಪ್ರಕಟವಾದ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಶೇಕಡಾ 97ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದರು. ಪುತ್ರನ ಸಾಧನೆಯನ್ನು ಸಂಭ್ರಮಿಸಲು ಅವರು ಕಾಶ್ಮೀರ ಪ್ರವಾಸದ ಯೋಜನೆ ಹಾಕಿದ್ದರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಮಾಹಿತಿ ನೀಡಿದ್ದಾರೆ.
ಕುಟುಂಬವು ಕಾಶ್ಮೀರದ ಪೆಹಲ್ಗಾಂವ್ನ ಮಾರುಕಟ್ಟೆಗೆ ಹೋದಾಗ ಉಗ್ರನು ಮಂಜುನಾಥ್ ಅವರ ಹೆಸರು ಕೇಳಿದ್ದಾನೆ. ಬಳಿಕ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಜೊತೆಗೆ, ಪತ್ನಿ ಪಲ್ಲವಿ ಹಾಗೂ ಮಗ ಅಭಿಜಯ ಇದ್ದರು. ಇಬ್ಬರನ್ನು ಬಿಟ್ಟು ಆತ ಉದ್ಯಮಿ ಮೇಲೆ ಮಾತ್ರ ಗುಂಡಿನ ದಾಳಿ ಮಾಡಿದ್ದಾಗಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮೃತದೇಹ ತರಲು ವ್ಯವಸ್ಥೆ: ಮಂಜುನಾಥ್ ರಾವ್ ಅವರ ಮನೆಗೆ ಮ್ಯಾಮ್ಕೋಸ್ನ ಉಪಾಧ್ಯಕ್ಷ ಮಹೇಶ್ ಭೇಟಿ ನೀಡಿ ನಂತರ ಮಾತನಾಡಿ, ಪಲ್ಲವಿ ಅವರು ನಮ್ಮ ಸಂಸ್ಥೆಯ ಉದ್ಯೋಗಿ. ಅವರ ಪತಿ ಉಗ್ರ ದಾಳಿಗೆ ಸಾವನ್ನಪ್ಪಿರುವುದು ಆಘಾತ ತಂದಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ಪ್ರವಾಸಕ್ಕೆ ಹೋದ ಮಂಜುನಾಥ್ ಅವರಿಗೆ ಈ ಸ್ಥಿತಿ ಬರುತ್ತದೆ ಅಂದುಕೊಂಡಿರಲಿಲ್ಲ. ಅವರ ಕುಟುಂಬದ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ರಾವ್ ಅವರ ಪಾರ್ಥಿವ ಶರೀರ ಶಿವಮೊಗ್ಗಕ್ಕೆ ತರಲು ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಕೇಂದ್ರ ನಾಯಕರ ಜೊತೆ ಮಾತನಾಡಿದ್ದೇವೆ ಎಂದರು.
ಮಂಜುನಾಥ ರಾವ್ ಅವರ ಸಹೋದರಿ ದೀಪಾ ಮಾತನಾಡಿ, ಏಪ್ರಿಲ್ 19 ರಂದು ಕಾಶ್ಮೀರಕ್ಕೆ ಪ್ರವಾಸ ತೆರಳಿದ್ದರು. ನಮ್ಮ ಅಣ್ಣನ ಮೇಲೆ ಗುಂಡಿನ ದಾಳಿ ಆಗಿದ್ದು ಕೇಳಿ ಆಘಾತವಾಗಿದೆ. ಈಗ ನಮ್ಮ ಚಿಕ್ಕಮ್ಮನ ಮನೆಗೆ ಬಂದಿದ್ದೇವೆ. ಅವರು ದುಃಖದಲ್ಲಿದ್ದಾರೆ. ಅಣ್ಣನನ್ನು ಕಳೆದುಕೊಂಡಿದ್ದೇವೆ ಎಂದು ದುಃಖ ವ್ಯಕ್ತಪಡಿಸಿದರು.