ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತದಲ್ಲಿ 11 ಮಂದಿ ಸಾವು ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದ ಸಿಐಡಿಗೆ ಹಿನ್ನಡೆಯಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಾದ ನಿಖಿಲ್ ಸೋಸಲೆ, ಸುನಿಲ್ ಮ್ಯಾಥ್ಯೂ, ಕಿರಣ್ ಹಾಗೂ ಶಮಂತ್ ಅವರನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯುವ ಸಂಬಂಧ ಮಂಗಳವಾರ ಸಿಐಡಿ ಅಧಿಕಾರಿಗಳು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗಳ ಮೇಲೆ ಗುರುತರ ಆರೋಪಗಳಿವೆ. ಆರ್ಸಿಬಿ ವಿಜಯೋತ್ಸವ ನಡೆಸಲು ಪೊಲೀಸರ ಪೂರ್ವಾನುಮತಿವಿಲ್ಲದೆ ಅಭಿಮಾನಿಗಳನ್ನು ಆಹ್ವಾನಿಸಿದ್ದರಿಂದ ಊಹೆಗೆ ಮೀರಿ ಜನರು ಸ್ಟೇಡಿಯಂ ಜಮಾವಣೆಗೊಂಡಿದ್ದರಿಂದ 11 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ. ಇವರನ್ನು ತೀವ್ರ ವಿಚಾರಣೆ ನಡೆಸಬೇಕಾದ ಅಗತ್ಯವಿದೆ. 9 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡುವಂತೆ ಸಿಐಡಿ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿಗಳ ಪರ ವಕೀಲರು, ನ್ಯಾಯಾಲಯದ ಆದೇಶದ ಮೇರೆಗೆ ಜೂ.19ರ ವರೆಗೆ ಕಕ್ಷಿದಾರರು ಜೈಲಿನಲ್ಲಿದ್ದಾರೆ. ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಪೊಲೀಸರ ವಶಕ್ಕೆ ನೀಡುವುದು ಸಮಂಜಸವಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿದರು.
ಹೈಕೋರ್ಟ್ನಲ್ಲಿ ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ. ಅಲ್ಲಿ ಅರ್ಜಿ ಇತ್ಯರ್ಥವಾದ ಬಳಿಕ ಇಲ್ಲಿ ವಿಚಾರಣೆ ನಡೆಸುವುದು ಸೂಕ್ತವೆಂದು ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿತು. ಹೀಗಾಗಿ ಆರೋಪಿತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಒಪ್ಪಿಸಲಾಯಿತು.
ಕಾಲ್ತುಳಿತದ ದೃಶ್ಯಗಳು ವಶಕ್ಕೆ: ದುರ್ಘಟನೆ ಸಂಬಂಧ ಈಗಾಗಲೇ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿ ಮಹಜರು ಪೂರ್ಣಗೊಳಿಸಿರುವ ಸಿಐಡಿ ತನಿಖಾಧಿಕಾರಿ ಶುಭಾನ್ವಿತಾ ನೇತೃತ್ವದ ತಂಡವು ಕಾಲ್ತುಳಿತದ ವೇಳೆ ಕ್ರೀಡಾಂಗಣದ ಬಳಿ ಸೆರೆಯಾಗಿರುವ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಘಟನೆಯ ವಿಡಿಯೋಗಳನ್ನು ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ. ಗಾಯಾಳುಗಳಿಗೆ ನೋಟಿಸ್ ನೀಡಿ ಹೇಳಿಕೆ ಪಡೆಯಲು ಸಿದ್ಧತೆ ನಡೆಸಿದೆ. ಬಂಧಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಕೆಎಸ್ಸಿಎ ಹಾಗೂ ಆರ್ಸಿಬಿ ಫ್ರಾಂಚೈಸಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪ್ರಕರಣ ಹಿನ್ನೆಲೆ: ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡದ ಮಧ್ಯೆ ಐಪಿಎಲ್ 2025ರ ಫೈನಲ್ ಪಂದ್ಯ ನಡೆದಿತ್ತು. ಅತಿ ಹೆಚ್ಚು ಅಭಿಮಾನಗಳನ್ನು ಹೊಂದಿರುವ ಆರ್ಸಿಬಿ ತಂಡ ಅಂದು ಗೆಲುವು ಸಾಧಿಸಿತು. ಇದರಿಂದ ತಂಡದ ಅಭಿಮಾನಿಗಳ ಸಂಭ್ರಮ ನೂರ್ಮಡಿಯಾಗಿತ್ತು. ಈ ಹಿನ್ನೆಲೆ ಜೂನ್ 4 ರಂದು ಮೊದಲು ಸರ್ಕಾರದಿಂದ ಆರ್ಸಿಬಿ ತಂಡಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಮಾರಂಭ ಏರ್ಪಡಿಸಿ ಸನ್ಮಾನಿಸಲಾಯಿತು.
ವಿಜಯೋತ್ಸವದಲ್ಲಿ ದುರಂತ: ವಿಧಾನಸೌಧದ ಕಾರ್ಯಕ್ರಮದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಯೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಹರಿದುಬಂದಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದರೆ, ಕೆಲವರು ಗಾಯಗೊಂಡರು.
ಇದನ್ನೂ ಓದಿ: ಕಾಲ್ತುಳಿತ ಸಂತ್ರಸ್ತರ ಮನೆಗೆ ಪ್ರತಿಪಕ್ಷ ನಾಯಕರ ಭೇಟಿ: 'ನಮ್ಮನ್ನು ನೋಡ್ಕೊಳ್ಳುವವರು ಯಾರು' ಎಂದ ಮೃತ ಭೂಮಿಕ್ ತಂದೆ