ಬೆಂಗಳೂರು: ಕೆಟ್ಟು ನಿಂತಿದ್ದ ಕಸದ ಲಾರಿಗೆ ಕಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದಿದ್ದು, ಈ ವೇಳೆ ಏರ್ಟಿಗಾ ಕಾರಿಗೆ ಹಾನಿಯಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ ಫ್ಲೈಓವರ್ ಮೇಲೆ ಅಂದಾಜು ನಸುಕಿನ 2 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಕಸದ ಲಾರಿ ಚಾಲಕ ಫಯಾಜ್ ಅಹಮ್ಮದ್ ಸಾವನ್ನಪ್ಪಿದ್ದಾನೆ.
ಕಸದ ಲಾರಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಕೆಟ್ಟು ನಿಂತಿತ್ತು. ಈ ವೇಳೆ ಕಸದ ಲಾರಿ ಹಿಂಭಾಗಕ್ಕೆ ಕಲ್ಲು ತುಂಬಿ ಕೊಂಡು ಬರುತ್ತಿದ್ದ 10 ಚಕ್ರದ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಕಸದ ಲಾರಿ ಕೆಳಗೆ ಸಿಲುಕಿ ಫಯಾಜ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಹೆಬ್ಬಾಳ ಸಂಚಾರಿ ಪೊಲೀಸರು ಅಪಘಾತಕ್ಕೆ ತುತ್ತಾದ ವಾಹನಗಳನ್ನು ತೆರವುಗೊಳಿಸಿದ್ದಾರೆ.
ಘಟನೆ ಸಂಬಂಧ ಮಾತನಾಡಿದ ಮೃತನ ಸ್ನೇಹಿತ ಶಹಬಾಜ್, "ಮುಂಜಾನೆ ನನ್ನ ಸ್ನೇಹಿತ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಫ್ಲೈಓವರ್ ಮೇಲೆ ಗಾಡಿ ಕೆಟ್ಟೋಗಿದ್ದರಿಂದ ನಿಲ್ಲಿಸಿದ್ದ. ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಅಪಘಾತ ಆಗಿದೆ. ಮೃತ ಫಯಾಜ್ ಬಿಹಾರ ಮೂಲದವನು. ಕಳೆದ ಮೂರು ವರ್ಷದಿಂದ ಲಾರಿ ಓಡಿಸುತ್ತಿದ್ದ. ಮೊದಲು ಎಸಿ ಟೆಕ್ನೀಷಿಯನ್ ಆಗಿದ್ದ ನಂತರ ಕಸದ ಲಾರಿ ಓಡಿಸ್ತಿದ್ದ" ಎಂದು ತಿಳಿಸಿದರು.
ಇದನ್ನೂ ಓದಿ: ಹಾಸನದಲ್ಲಿ ಪುಂಡಾನೆಗಳನ್ನು ಸೆರೆಹಿಡಿದರೂ ನಿಲ್ಲುತ್ತಿಲ್ಲ ಹಾವಳಿ: ಕಾಡಾನೆ ದಾಳಿಗೆ ಮಹಿಳೆ ಬಲಿ