ಕೋಲಾರ: ಪಹಲ್ಗಾಮ್ ದಾಳಿಯಲ್ಲಿನ 26 ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ?. ಆ ಹೆಣ್ಣು ಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ ಎಂದು ಭಾರತದ ಆಪರೇಷನ್ ಸಿಂಧೂರ ವಿಚಾರಕ್ಕೆ ಸಂಬಂಧಪಟ್ಟಂತೆ ಕೋಲಾರದಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಪ್ರಶ್ನಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಪ್ರಜೆಗಳ ಮೇಲೆ ಯುದ್ದ ಮಾಡೋದಕ್ಕೆ ನಮ್ಮ ವಿರೋಧ ಇದೆ. ಆದ್ರೆ ನಮ್ಮ ದೇಶದೊಳಗೆ ಉಗ್ರರು ಬಂದು ಅವರ ಪತ್ನಿಯರ ಎದುರೇ ಪತಿಯಂದಿರನ್ನು ಹೊಡೆದರೆ ಹೇಗೆ ಸಹಿಸೋದು ಎಂದರು.
ಅಂತಹದಕ್ಕೆ ಪರಿಹಾರ ಇದಲ್ಲ, ಬೇರಿಂದ ಕೊಂಬೆ ತನಕ ಎಲ್ಲವನ್ನ ಹೊಡಿಯಬೇಕು. ಇದಕ್ಕೆ ಒಳ್ಳೆಯ ಅವಕಾಶ ಇತ್ತು. ಆದರೆ ಏನೂ ಮಾಡಿಲ್ಲ ಅನ್ನೋದು ಬೇಸರ ತಂದಿದೆ ಎಂದು ಪ್ರಧಾನಿ ಹಾಗೂ ಸೇನೆ ವಿರುದ್ದ ಶಾಸಕರು ಬೇಸರ ಹೊರಹಾಕಿದರು. ಸಿಂಧೂರ ಹೆಸರಲ್ಲಿ ಅಷ್ಟು ಜನ - ಇಷ್ಟು ಜನ ಉಗ್ರರನ್ನು ಹೊಡೆದಿದ್ದೇವೆ ಅಂತಾರೆ. ಆದರೆ ಇಲ್ಲಿಯವರೆಗೂ ಎಲ್ಲೂ ಕನ್ ಫರ್ಮ್ ಆಗಿಲ್ಲ, ಮಾಧ್ಯಮಗಳಲ್ಲಿ ಬಂದಿದ್ದು ಬಿಟ್ರೆ ಎಲ್ಲೂ ನೋಡಿಲ್ಲ ಎಂದರು.
ಭಾರತ ಕೊಟ್ಟ ಪ್ರತ್ಯುತ್ತರ ಸಮಾಧಾನಕರವಾದ ಕ್ರಮ ಅಲ್ಲ, ಈಗ ಒಳ್ಳೆಯ ಚಾನ್ಸ್ ಸಿಕ್ಕಿತ್ತು, ಉಗ್ರವಾದವನ್ನ ಬೇರು ಸಮೇತ ಕಿತ್ತೋಗೆಯಬಹುದಿತ್ತು, ಆದ್ರೆ ನಮ್ಮ ನಿರೀಕ್ಷೆ ಹುಸಿಯಾಗಿದೆ. ನಮಗೆ ನಿರೀಕ್ಷೆ ಇತ್ತು, ಸಿಂಧೂರ ಕಳೆದುಕೊಂಡ ಹಣ್ಣು ಮಕ್ಕಳಿಂದಲೇ ಆ ಉಗ್ರರಿಗೆ ಪನಿಶ್ ಮಾಡಬಹುದಿತ್ತು. ಆದರೆ ಕದನ ವಿರಾಮ ಎಂದು ಹೇಳುವ ನೀವು ಇಸ್ರೇಲ್ ನೋಡಿ ಕಲಿಯಬೇಕಿದೆ, ಇಸ್ರೇಲ್ ಯಾರ ಮಾತು ಕೇಳಲಿಲ್ಲ, ಇನ್ನು ರಷ್ಯಾ ಉಕ್ರೇನ್ ಅನ್ನು ಹೇಗೆ ಹೊಡೆದು ಹಾಕಿದೆ ನೋಡಿ. ಅಮೆರಿಕದ ಒಬ್ಬ ಪ್ರಜೆಯನ್ನ ಮುಟ್ಟಿದ್ರೆ ಬಿಡ್ತಾರಾ ಎಂದು ಶಾಸಕ ಕೊತ್ತೂರು ಮಂಜುನಾಥ ಪ್ರಶ್ನಿಸಿದರು.
ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೂ ಅವಕಾಶ ನೀಡಬೇಕು: ಮುಂದಿನ ಸಚಿವ ಸಂಪುಟ ವಿಸ್ತರಣೆಗೆ ನನಗೂ ಅವಕಾಶ ನೀಡಬೇಕು, ಕಳೆದ ಬಾರಿಯೇ ನನಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ ನಾನೇ ಬೇಡವೆಂದು ಹೈಕಮಾಂಡ್‌ಗೆ ಹೇಳಿದೆ. ಮುಂದೆ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೆ ಮಂತ್ರಿ ಸ್ಥಾನ ಕೊಡುವಂತೆ ಸಿಎಂ ಮತ್ತು ಡಿಸಿಎಂ ಅವರಲ್ಲಿ ಮನವಿ ಮಾಡುವೆ ಎಂದರು.