ದಾವಣಗೆರೆ: ಸರ್ಕಾರ ಜಾತಿ ಗಣತಿ ವರದಿ ಜಾರಿ ಮಾಡಿಕೊಂಡ್ರೇ ಏನ್ ಆಗುತ್ತೆ. ಅವರಿಗೆ ಉಲ್ಟಾ ಹೊಡೆಯುತ್ತೆ. ರಾಜ್ಯದಲ್ಲಿ ಎರಡು ಡೇಂಜರ್ ಕಮ್ಯೂನಿಟಿಗಳಿವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಮ್ಮದೇ ಸರ್ಕರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಮೊದಲಿಗೆ ವೀರಶೈವರು, ಎರಡನೇ ಸ್ಥಾನದಲ್ಲಿ ಒಕ್ಕಲಿಗರು ಇದ್ದಾರೆ. ವೀರಶೈವ ಲಿಂಗಾಯತರನ್ನು ಹಾಗು ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡಲು ಆಗುತ್ತಾ? ಲಿಂಗಾಯತರು ಹಾಗು ಒಕ್ಕಲಿಗರು ಇಬ್ಬರು ಸೇರಿ ಹೋರಾಟ ಮಾಡ್ತೇವೆ. ಇಬ್ಬರು ಸೇರಲಿದ್ದೇವೆ. ನಮ್ಮನ್ನು ಎದುರು ಹಾಕಿಕೊಂಡು ರಾಜ್ಯ ಭಾರ ಮಾಡಲು ಸಾಧ್ಯವೇ ಇಲ್ಲ. ಇದರ ಬಗ್ಗೆ ಸಭೆ ನಡೆದಿದ್ದು, ಮುಂದೇನು ಸಭೆ ಮಾಡ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಹೊಸ ಜನಗಣತಿ ಮಾಡುವಂತೆ ಬಹುತೇಕರಿಂದ ಒತ್ತಾಯ: ಇದಕ್ಕೆ ನಮ್ಮ ಸಹಮತ ಕೂಡ ಇದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
10 ವರ್ಷಗಳ ಹಿಂದೆ ಈ ಜನಗಣತಿ ನಡೆದಿದ್ದು, ಈ ಜನಗಣತಿ ವೈಜ್ಞಾನಿಕವಾಗಿ ಇಲ್ಲ, ಸರಿಯಾಗಿಲ್ಲ ಎಂಬುದು ರಾಜ್ಯದ ವಿವಿಧ ವರ್ಗದ ಜನ್ರ ಅಭಿಪ್ರಾಯ ಆಗಿದೆ. ಸರ್ಕಾರ ಇದೇ 17 ರಂದು ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದಿದೆ. ಅವರು ಗಂಭೀರವಾಗಿ ಚರ್ಚೆ ಮಾಡುತ್ತಾರೆ ಎಂದು ನಾವು ನಂಬಿದ್ದೇವೆ. ಮತ್ತೆ ಹೊಸದಾಗಿ ಶಾಸ್ತ್ರೀಯವಾಗಿ ಜನಗಣತಿ ಮಾಡುವ ಅವಶ್ಯಕತೆ ಇದೆ. ಇದರಲ್ಲಿ ಲಿಂಗಾಯತ ಸಂಖ್ಯೆ ಕಡಿಮೆ ಇದೆ. ಬೇರೆ ವರ್ಗದ ಸಂಖ್ಯೆ ಹೆಚ್ಚಿದೆ. ಇದರಿಂದ ಹೊಸ ಜನಗಣತಿ ಮಾಡುವಂತೆ ಬಹುತೇಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದಕ್ಕೆ ನಮ್ಮ ಸಹಮತ ಕೂಡ ಇದೆ. ಈಗ ಚರ್ಚೆ ಆಗ್ತಿರುವ ಜಾತಿ ಗಣತಿ ವರದಿ ಬಿಡುಗಡೆ ಆಗಲ್ಲ ಎಂಬ ನಂಬಿಕೆ ಇದೆ. ಸರ್ಕಾರ ಕೂಡ ಬಿಡುಗಡೆಗೂ ಮುನ್ನ ಸಮಾಜಗಳ ಒಲವು ಹೇಗಿದೆ ಎಂದು ಚರ್ಚಿಸುತ್ತದೆ. ಬಹುತೇಕ ಶಾಸಕರು, ಮಂತ್ರಿಗಳು ಇದರ ಪರ ಇಲ್ಲ. ಇದನ್ನು ಹೊಸದಾಗಿ ಮಾಡ್ಬೇಕೆಂಬ ಅಭಿಪ್ರಾಯ ಇದೆ. ಇದು ಕೇವಲ ಒಕ್ಕಲಿಗರು, ಲಿಂಗಾಯತರಿಗೆ ಅಂತಲ್ಲ. ಎಲ್ಲಾ ವರ್ಗದವರಿಗೆ ಅನ್ಯಾಯ ಆಗಿದೆ. ನಾವು ಸರ್ಕಾರಕ್ಕೆ ಎಚ್ಚರಿಕೆ ಕೊಡಲಿಲ್ಲ. ಬದಲಾಗಿ ತಿಳುವಳಿಕೆ ಕೊಡಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ವೀರಶೈವ ಲಿಂಗಾಯತರ ಬಗ್ಗೆ ಜಾತಿ ಗಣತಿಯಲ್ಲಿ ತಪ್ಪು ಮಾಹಿತಿ ಆರೋಪ: ಮಹಾಸಭಾದಿಂದ ತಜ್ಞರ ಸಮಿತಿ