ಬೆಂಗಳೂರು: ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ-2025 ರ ಸಮೀಕ್ಷಾ ಕಾರ್ಯಾವಧಿಯನ್ನು ಅಂತಿಮವಾಗಿ ವಿಸ್ತರಿಸಲಾಗಿದೆ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ, ಪರಿಶಿಷ್ಟ ಜಾತಿ ಸಮೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ ವಹಿಸಿದೆ.
ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳಿಗೆ ಸೇರಿದವರ ಪ್ರಾತಿನಿದ್ಯತೆ ಕುರಿತು ವೈಜ್ಞಾನಿಕ ದತ್ತಾಂಶವನ್ನು (Emperical Data) ಸಂಗ್ರಹಿಸಲು 05-05-2025 ರಿಂದ ಮನೆ-ಮನೆ ಭೇಟಿ ಮೂಲಕ ರಾಜ್ಯಾದ್ಯಂತ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದೆ.
ಸಮೀಕ್ಷೆಯಲ್ಲಿ ಭಾಗವಹಿಸದೇ ಇರುವ ಪರಿಶಿಷ್ಟ ಜಾತಿ ಕುಟುಂಬದವರಿಗೆ ಅಂತಿಮ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ಸಮೀಕ್ಷಾ ದಿನಾಂಕವನ್ನು 23-06-2025 ರಿಂದ 30-06-2025 ರವರೆಗೆ ವಿಸ್ತರಿಸಲಾಗಿದೆ. ಈವರೆಗೂ ರಾಜ್ಯಾದ್ಯಂತ ಸಮೀಕ್ಷೆಯಲ್ಲಿ ಶೇ.91ರಷ್ಟು ಪ್ರಗತಿಯನ್ನು ಸಾಧಿಸಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.50ರಷ್ಟು ಪ್ರಗತಿಯಾಗಿರುತ್ತದೆ.
ಇಲ್ಲಿ ಸ್ವಯಂ ಘೋಷಣೆ ಮಾಡಿ: ನಾಗರಿಕ ಸೇವಾ ಕೇಂದ್ರಗಳಾದ, "ಕರ್ನಾಟಕ ಒನ್" (Karnataka one) "ಬೆಂಗಳೂರು ಒನ್" (Bengaluru one) "ಗ್ರಾಮ ಒನ್"(Grama one) ಮತ್ತು ಬಾಪೂಜಿ ಸೇವಾ ಕೇಂದ್ರಗಳು, ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಕಚೇರಿ (BBMP ward offices) ಗಳಲ್ಲಿ ವ್ಯವಸ್ಥೆ ಮಾಡಿಕೊಂಡಿರುವ ಪ್ರತ್ಯೇಕವಾದ ಶಿಬಿರಗಳಲ್ಲಿ ಸ್ವಯಂ ಘೋಷಣೆ ಮಾಡಬಹುದಾಗಿದೆ.
Online ನಲ್ಲಿ https://schedulecastesurvey.karnataka.gov.in/selfd eclaration ಲಿಂಕ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬಹುದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯ ನಡೆಸುತ್ತಿರುವ ಕುರಿತು ಖಾತರಿ ಪಡಿಸಿಕೊಳ್ಳುವ ಸಲುವಾಗಿ ಸೋಮವಾರದಿಂದ ಪ್ರತಿ ಮನೆಗೆ ಸ್ಟಿಕ್ಕರ್ ಅಂಟಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅದರಂತೆ, ಕರ್ನಾಟಕದ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ ಪಾಲಿಕೆಯ ತಂಡ ಅಥವಾ ಗಣತಿದಾರರು ಜೂನ್ 23, 2025 ರಿಂದ ನಿಮ್ಮ ಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ನಡೆಸುತ್ತಾರೆ. ಬಿಬಿಎಂಪಿ ತಂಡ ಅಥವಾ ಗಣತಿದಾರರು ಮನೆಗೆ ಭೇಟಿ ಮಾಡಿರುವ ಪುರಾವೆಯಾಗಿ ಪ್ರತಿ ಮನೆಗೆ ಸ್ಟಿಕ್ಕರ್ ಅಂಟಿಸುತ್ತಾರೆ. ಮನೆಗೆ ಭೇಟಿ ನೀಡುವ ಬಿಬಿಎಂಪಿ ತಂಡ ಅಥವಾ ಗಣತಿದಾರರಿಗೆ ಸಹಕರಿಸಿ ಮತ್ತು ಸರಿಯಾದ ಮಾಹಿತಿ ನೀಡಿ. ಅಲ್ಲದೆ, ನಿಮ್ಮ ಮನೆಗೆ ಅಂಟಿಸಿದ ಸ್ಟಿಕ್ಕರ್ ಅನ್ನು ತೆಗೆದು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪರಿಶಿಷ್ಠ ಜಾತಿ ಒಳಮೀಸಲಾತಿ: ಸಮೀಕ್ಷೆಯ ಅವಧಿ ವಿಸ್ತರಿಸಲು ತೀರ್ಮಾನ- ನಾಗಮೋಹನ್ ದಾಸ್