ಬೆಂಗಳೂರು: ಮಹಿಳೆಯನ್ನು ವಿವಸ್ತ್ರಗೊಳಿಸಿ, ಸಹಚರರಿಂದ ಆತ್ಯಾಚಾರ ಮಾಡಿಸಿದ ಮತ್ತು ವೈರಸ್ ತಗುಲುವ ಚುಚ್ಚುಮದ್ದು ನೀಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಪೊಲೀಸರು ಎಸ್ಐಟಿಗೆ ಹಸ್ತಾಂತರಿಸಿದ್ದಾರೆ.
ಮುನಿರತ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಸಮಗ್ರ ತನಿಖೆಗಾಗಿ ಕಳೆದ ವರ್ಷ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿತ್ತು. ಮುನಿರತ್ನ ವಿರುದ್ಧ ಕಗ್ಗಲಿಪುರ ಠಾಣೆಯಲ್ಲಿ ಆತ್ಯಾಚಾರ ಪ್ರಕರಣ, ವೈಯಾಲಿಕಾವಲ್ ಠಾಣೆಯಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣಗಳು ಎಸ್ಐಟಿಗೆ ವರ್ಗವಾಗಿದ್ದವು.
ಇದೀಗ, ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ದಾಖಲಾಗಿದ್ದ ಆತ್ಯಾಚಾರ ಪ್ರಕರಣವನ್ನೂ ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ. ಈ ಸಂಬಂಧ ಪ್ರಕರಣದ ಕಡತಗಳನ್ನು ವರ್ಗಾಯಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆಯು ಬಿಜೆಪಿ ಕಾರ್ಯಕರ್ತೆಯಾಗಿದ್ದು, ಅವರು ನೀಡಿದ ದೂರು ಆಧರಿಸಿ ಶಾಸಕ ಮುನಿರತ್ನ, ಸಹಚರರಾದ ವಸಂತ, ಚನ್ನಕೇಶವ ಹಾಗೂ ಕಮಲ್ ಎಂಬವರ ವಿರುದ್ಧ ಆತ್ಯಾಚಾರ ಆರೋಪದಡಿ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮುನಿರತ್ನ ಅವರು ಅಧಿಕಾರದ ಪ್ರಭಾವ ಬಳಸಿ ವೇಶ್ಯಾವಾಟಿಕೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ನನ್ನನ್ನು ಬಂಧಿಸುವಂತೆ ಮಾಡಿದ್ದರು. 2022ರಲ್ಲಿ ಅವರ ಕಚೇರಿಯಲ್ಲಿ ವಿವಸ್ತ್ರಗೊಳಿಸಿ ಮುನಿರತ್ನ ಜೊತೆಗಿದ್ದ ಸಹಚರರು ನನ್ನ ಮೇಲೆ ಆತ್ಯಾಚಾರವೆಸಗಿದ್ದರು. ಅಲ್ಲದೆ, ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿ, ವಾಸಿಯಾಗದ ವೈರಸ್ ತಗಲುವ ಇಂಜೆಕ್ಷನ್ ನೀಡಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದರು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು