ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿರುವ ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು, ವಿಚಾರಣೆ ವೇಳೆ ಪತ್ನಿ ಪಲ್ಲವಿ (64) ತಪ್ಪೊಪ್ಪಿಕೊಂಡಿದ್ದರಿಂದ ಅವರನ್ನು ಬಂಧಿಸಿದ್ದಾರೆ. ಸದ್ಯದ ಮಟ್ಟಿಗೆ ಹತ್ಯೆಯಲ್ಲಿ ಪುತ್ರಿ ಕೃತಿ ವಿರುದ್ಧ ಸಾಕ್ಷ್ಯಾಧಾರಗಳು ಲಭಿಸದ ಹಿನ್ನೆಲೆಯಲ್ಲಿ ಆಕೆಯನ್ನ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
ತಂದೆಯ ಕೊಲೆಗೆ ತಾಯಿ ಹಾಗೂ ತಂಗಿಯ ಕಾರಣವೆಂದು ಆರೋಪಿಸಿ ಪುತ್ರ ಕಾರ್ತಿಕೇಶ್ ನೀಡಿದ ದೂರು ಆಧರಿಸಿ ಪಲ್ಲವಿ ಹಾಗೂ ಕೃತಿ ಎಂಬುವರನ್ನ ನಿನ್ನೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ಪತಿಯು ತಮ್ಮ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಪತಿಯನ್ನ ಚಾಕುವಿನಿಂದ ಸಾಯಿಸಿರುವುದಾಗಿ ಪಲ್ಲವಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರಿಸಲಾಯಿತು. ಎಚ್ಎಸ್ಆರ್ ಲೇಔಟ್ನ ಎಂಸಿಎಚ್ಎಸ್ ಕ್ಲಬ್ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಡಿಜಿಪಿ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಪೊಲೀಸ್ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕೊಲೆ ಪ್ರಕರಣ ಸಿಸಿಬಿ ಹೆಗಲಿಗೆ: ನಿವೃತ್ತ ಡಿಜಿಪಿ ಕೊಲೆ ಹಿಂದೆ ಹಲವು ಕಾರಣಗಳು ಕೇಳಿಬರುತ್ತಿವೆ. ಪತಿಯಿಂದ ನಿರಂತರ ಕಿರುಕುಳ ನೀಡುತ್ತಿದ್ದರು ಎಂಬುದು ಒಂದು ಆರೋಪವಾದರೆ ಮತ್ತೊಂದೆಡೆ ಪಲ್ಲವಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರಿಂದ ಭ್ರಮೆಯಲ್ಲಿ ಪತಿಯನ್ನ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆಸ್ತಿ ಕಲಹದಿಂದ ಓಂ ಪ್ರಕಾಶ್ ಅವರು ಕೊಲೆಯಾದರಾ ಎಂಬ ಅನುಮಾನವೂ ವ್ಯಕ್ತವಾಗಿದೆ. ಹತ್ಯೆಗೆ ನಿಖರ ಕಾರಣ ಹಾಗೂ ಆಳ ತನಿಖೆ ನಡೆಸಲು ಪ್ರಕರಣವನ್ನ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸಿಸಿಬಿಗೆ ವರ್ಗಾಯಿಸಿ ಆದೇಶಿಸಿದ್ದಾರೆ. ಸದ್ಯ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಎಸಿಪಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಮಹಜರು ವೇಳೆ ಡೊಮೆಸ್ಟಿಕ್ ವೈಲೆನ್ಸ್ ಎಂದ ಆರೋಪಿತೆ: ಹತ್ಯೆ ಪ್ರಕರಣದಲ್ಲಿ ಬಂಧಿತೆಯಾಗಿರುವ ಪಲ್ಲವಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ಎಚ್ಎಸ್ಆರ್ ಲೇಔಟ್ನಲ್ಲಿರುವ ಹತ್ಯೆಯಾದ ಜಾಗವಾದ ಸ್ವಗೃಹಕ್ಕೆ ಕರೆದುಕೊಂಡು ಹೋಗಿ ಪೊಲೀಸರು ಮಹಜರಿಗೆ ಒಳಪಡಿಸಿದರು. ಮಹಜರಿಗಾಗಿ ಕಾರಿನಿಂದ ಇಳಿಯುವಾಗಲೂ ಕೌಟುಂಬಿಕ ದೌರ್ಜನ್ಯ ಎಂದು ಆರೋಪಿತೆ ಹೇಳಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಓಂ ಪ್ರಕಾಶ್ ಕೊಲೆ ಪ್ರಕರಣ: ತಾಯಿ, ತಂಗಿ ಮೇಲೆ ಶಂಕೆ ವ್ಯಕ್ತಪಡಿಸಿದ ಪುತ್ರ; ಎಫ್ಐಆರ್ ದಾಖಲು - OM PRAKASH MURDER