ETV Bharat / state

ಬೆಳಗಾವಿ ಡಿಸಿಸಿ ಬ್ಯಾಂಕ್ ನಾಮಪತ್ರ ಸಲ್ಲಿಕೆಯಲ್ಲಿ ಗಾಂಧಿ ಟೋಪಿ ನೆನಪು: ಟೋಪಿ ಧರಿಸಿಯೇ ಅಭ್ಯರ್ಥಿಗಳಿಂದ ಉಮೇದುವಾರಿಕೆ

ನಾಮಪತ್ರ ಸಲ್ಲಿಸುವಾಗ ಗಾಂಧಿ(ಬಿಳಿ ಶುಭ್ರ) ಟೋಪಿ ಧರಿಸಿ ಅಭ್ಯರ್ಥಿಗಳು ಆಗಮಿಸಿದ್ದು ಗಮನ ಸೆಳೆಯಿತು. ಒಂದಿಬ್ಬರು ಕೇಸರಿ, ಹಳದಿ ಟೋಪಿ ಹಾಕಿದ್ದು, ಬಿಟ್ಟರೆ ಬಹುತೇಕರು ಬಿಳಿ ಟೋಪಿಯಲ್ಲೇ ಮಿಂಚಿದರು.

Remembering Gandhi hat in Belgaum DCC Bank nomination papers
ಗಾಂಧಿ ಟೋಪಿ ಧರಿಸಿಯೇ ಅಭ್ಯರ್ಥಿಗಳಿಂದ ಉಮೇದುವಾರಿಕೆ (ETV Bharat)
author img

By ETV Bharat Karnataka Team

Published : October 11, 2025 at 11:18 PM IST

2 Min Read
Choose ETV Bharat

ಬೆಳಗಾವಿ: ಮಹಾತ್ಮಾ ಗಾಂಧೀಜಿ ತತ್ವ, ಆದರ್ಶಗಳನ್ನು ಗಾಳಿಗೆ ತೂರುವ ಇಂದಿನ ರಾಜಕಾರಣದ ಕಾಲಘಟ್ಟದಲ್ಲಿ‌ ಬೆಳಗಾವಿ ಡಿಸಿಸಿ ಬ್ಯಾಂಕ್ ನಾಮಪತ್ರ ಸಲ್ಲಿಕೆ ವೇಳೆ ಗಾಂಧಿ ಟೋಪಿ ಫುಲ್ ಮಿಂಚಿದವು. ಬಹುತೇಕ ಎಲ್ಲ ಅಭ್ಯರ್ಥಿಗಳು ಈ ಬಿಳಿ ಟೋಪಿ ಧರಿಸಿಯೇ ತಮ್ಮ ಉಮೇದುವಾರಿಕೆ ಸಲ್ಲಿಸುವ ಮೂಲಕ ಕಾಲ ಬದಲಾದರೂ ಗಾಂಧಿ ತತ್ವ ಸಂಪ್ರದಾಯ ಬದಲಾಗಿಲ್ಲ ಎಂಬ ಸಂದೇಶ ಸಾರಿದ್ದು, ವಿಶೇಷವಾಗಿತ್ತು.

ಹೌದು, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಶತಮಾನ ಕಂಡ ಬ್ಯಾಂಕಿನ ನಿರ್ದೇಶಕರಾಗಲು ಜಿಲ್ಲೆಯ ಘಟಾನುಘಟಿ ನಾಯಕರು ಪೈಪೋಟಿಗೆ ಬಿದ್ದಿದ್ದಾರೆ. ಈ ನಡುವೆ ನಾಮಪತ್ರ ಸಲ್ಲಿಸುವಾಗ ಗಾಂಧಿ(ಬಿಳಿ ಶುಭ್ರ) ಟೋಪಿ ಧರಿಸಿ ಅಭ್ಯರ್ಥಿಗಳು ಆಗಮಿಸಿದ್ದು ಗಮನ ಸೆಳೆಯಿತು. ಒಂದಿಬ್ಬರು ಕೇಸರಿ, ಹಳದಿ ಟೋಪಿ ಹಾಕಿದ್ದು ಬಿಟ್ಟರೆ ಬಹುತೇಕರು ಬಿಳಿ ಟೋಪಿಯಲ್ಲೇ ಮಿಂಚಿದರು.

Remembering Gandhi hat in Belgaum DCC Bank nomination
ಬೆಳಗಾವಿ ಡಿಸಿಸಿ ಬ್ಯಾಂಕ್ ನಾಮಪತ್ರ ಸಲ್ಲಿಕೆಯಲ್ಲಿ ಗಾಂಧಿ ಟೋಪಿ ನೆನಪು (ETV Bharat)

ಉತ್ತರ ಕರ್ನಾಟಕ, ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಶುಭ ಕಾರ್ಯಗಳಲ್ಲಿ, ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಬಿಳಿ ಟೋಪಿ ಧರಿಸುವುದು ಸಂಪ್ರದಾಯ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಿತ್ಯ ಅವರು ಗಾಂಧಿ ಟೋಪಿ ಹಾಕದಿದ್ದರೂ ವಿಶೇಷ ಸಂದರ್ಭದಲ್ಲಿ ಹಾಕುವುದು ರೂಢಿ. ಅದು ಡಿಸಿಸಿ ಬ್ಯಾಂಕ್ ಚುನಾವಣೆ ನಾಮಪತ್ರ ಸಲ್ಲಿಕೆಯಲ್ಲೂ ಮುಂದುವರಿದಿದೆ.

Remembering Gandhi hat in Belgaum DCC Bank nomination papers
ಗಾಂಧಿ ಟೋಪಿ ಧರಿಸಿಯೇ ಅಭ್ಯರ್ಥಿಗಳಿಂದ ಉಮೇದುವಾರಿಕೆ (ETV Bharat)

ಅಭ್ಯರ್ಥಿಗಳೊಂದಿಗೆ ಸೂಚಕರು, ಬೆಂಬಲಿಗರು ಬಿಳಿ ಟೋಪಿ ಹಾಕಿದ್ದರು. ಶಾಸಕ ಅಶೋಕ ಪಟ್ಟಣ, ಮಾಜಿ ಸಂಸದ ರಮೇಶ ಕತ್ತಿ ಅವರಿಂದ ಹಿಡಿದು ಇಂದಿನ ಪೀಳಿಗೆಯ ರಾಹುಲ್ ಜಾರಕಿಹೊಳಿವರೆಗೆ ಬಹುತೇಕ ಅಭ್ಯರ್ಥಿಗಳು ಗಾಂಧಿ ಟೋಪಿ ನೆನಪಿಸಿ ಆ ಪರಂಪರೆ ಮುಂದುವರಿಸಿದರು. ಎಲ್ಲ ವಯೋಮಾನದ ಅಭ್ಯರ್ಥಿಗಳು ಟೋಪಿ ಧರಿಸಿದ್ದು, ಸರ್ವೇ ಸಾಮಾನ್ಯ ಆಗಿತ್ತು.

Remembering Gandhi hat in Belgaum DCC Bank nomination papers
ಗಾಂಧಿ ಟೋಪಿ ಧರಿಸಿಯೇ ಅಭ್ಯರ್ಥಿಗಳಿಂದ ಉಮೇದುವಾರಿಕೆ (ETV Bharat)

ಈ ವೇಳೆ ಕೆಲ ಹಿರಿಯರನ್ನು ಈಟಿವಿ ಭಾರತ ಮಾತನಾಡಿಸಿದಾಗ, ಗಾಂಧಿ ಟೋಪಿ ಶುಭ ಚಿಹ್ನೆ ಆಗಿದೆ. ಹಿರಿಯರ ಕಾಲದಿಂದಲೂ ನಾಮಪತ್ರ ಸಲ್ಲಿಸುವಾಗ, ಮನೆ ಕಟ್ಟಲು ಭೂಮಿ ಪೂಜೆ ಮಾಡುವಾಗ, ಮನೆ ಉದ್ಘಾಟನೆ, ನಿಶ್ಚಿತಾರ್ಥ ಸಂದರ್ಭ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಬಿಳಿ ಟೋಪಿ ಧರಿಸುತ್ತಾರೆ. ಈ ರೀತಿ ಟೋಪಿ ಹಾಕಿದರೆ ಹಿಡಿದ ಕೆಲಸ ಯಶಸ್ವಿ ಆಗುತ್ತೆ ಎನ್ನುವ ನಂಬಿಕೆ ಇದೆ. ಅಲ್ಲದೇ ಬೋಳು ತಲೆಯಲ್ಲಿ ಹೊರಗೆ ಬಂದರೆ ಅದು ಅಪಮಾನ ಎಂದು ಹಿರಿಯರು ಹೇಳುತ್ತಿದ್ದರು ಎನ್ನುತ್ತಾರೆ ರಾಯಬಾಗ ಅಭ್ಯರ್ಥಿ ರಾಜಶೇಖರ ಪಾಟೀಲ ಬೆಂಬಲಿಗ ಶ್ರೀಶೈಲ ಮೋಪಗರ್.

Remembering Gandhi hat in Belgaum DCC Bank nomination papers
ಗಾಂಧಿ ಟೋಪಿ ಧರಿಸಿಯೇ ಅಭ್ಯರ್ಥಿಗಳಿಂದ ಉಮೇದುವಾರಿಕೆ (ETV Bharat)

ಕಲ್ಲಣ್ಣ ವಜ್ರಮಟ್ಟಿ ಎಂಬ ಹಿರಿಯರು ಮಾತನಾಡಿ, ಮಹಾತ್ಮಾ ಗಾಂಧೀಜಿ ಸ್ವದೇಶಿ ಖಾದಿ ಬಟ್ಟೆ ತೊಡುವಂತೆ ಕರೆ ಕಟ್ಟಿದ್ದರು. ಆದ್ದರಿಂದ ಬಹಳಷ್ಟು ಹಿರಿಯರು ಅವರ ಮಾತನ್ನು ಪಾಲಿಸುತ್ತಾ ಬಂದಿದ್ದರು. ಬಿಳಿ ಖಾದಿ ಅಂಗಿ, ದೋತರ, ಟೋಪಿ ಧರಿಸುತ್ತಿದ್ದರು. ಈಗ ಇದು ಕಡಿಮೆ ಆಗಿದೆ. ಆದರೆ, ಶುಭ ಕಾರ್ಯಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಟೋಪಿ ಧರಿಸುತ್ತಾರೆ ಎಂದರು.

Remembering Gandhi hat in Belgaum DCC Bank nomination papers
ಗಾಂಧಿ ಟೋಪಿ ಧರಿಸಿಯೇ ಅಭ್ಯರ್ಥಿಗಳಿಂದ ಉಮೇದುವಾರಿಕೆ (ETV Bharat)

ಜನಮಾನಸದಲ್ಲಿ ಗಾಂಧಿ ಟೋಪಿ ಬಗ್ಗೆ ಇನ್ನೂ ಬಹುದೊಡ್ಡ ಗೌರವದ ಸ್ಥಾನವಿದೆ. ಆ ಮನೋಭಾವ ಜನರಿಂದ ಪಡೆಯುವ ಉದ್ದೇಶಕ್ಕಾದರೂ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಗಾಂಧಿ ಟೋಪಿ ಧರಿಸಿರುವುದು ಒಳ್ಳೆಯ ಬೆಳವಣಿಗೆ. ಈ ಹಿಂದೆ ದೇವರಾಜ ಅರಸ ಸಂಪುಟದಲ್ಲಿ ಸಚಿವರಾಗಿದ್ದ ರಾಮದುರ್ಗದ ಆರ್.ಎಸ್.ಪಾಟೀಲ್​, ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದ ಮಾಜಿ ಶಾಸಕ ಮಹಾದೇವಪ್ಪ ಪಟ್ಟಣ, ಸಹಕಾರಿ ರಂಗದ ಭೀಷ್ಮರಾಗಿದ್ದ ಅಪ್ಪಣಗೌಡ ಪಾಟೀಲ, ಬಸಗೌಡ ಪಾಟೀಲ, ವಿಶ್ವನಾಥ ಕತ್ತಿ ಸೇರಿ ಅನೇಕರು ನಿತ್ಯ ಟೋಪಿ ಹಾಕದೇ ಹೊರಗೆ ಬರುತ್ತಿರಲಿಲ್ಲ. ನಾನು ಕಂಡಂತೆ ಈಗ ಸದಾಕಾಲ ಟೋಪಿ ಧರಿಸುವ ಜಿಲ್ಲೆಯ ಏಕೈಕ ರಾಜಕಾರಣಿ ಎಂದರೆ ಅದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತ್ರ. -ಅಶೋಕ ಚಂದರಗಿ, ರಾಜಕೀಯ ವಿಶ್ಲೇಷಕರು

ಇದನ್ನು ಓದಿ: ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆಗೆ ತಿದ್ದುಪಡಿ ಪ್ರಸ್ತಾಪ: ಇನ್ನು ಮುಂದೆ 10 ಕಾರ್ಮಿಕರಿರುವ ಸಣ್ಣ ಅಂಗಡಿ, ಸಂಸ್ಥೆಗಳಿಗೂ ಕಲ್ಯಾಣ ನಿಧಿ ವಂತಿಕೆ ಹೊರೆ!

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

GBA ಸಭೆಗೆ ಹಾಜರಾಗದ ಬಿಜೆಪಿ ನಾಯಕರು ಬೆಂಗಳೂರು ಅಭಿವೃದ್ಧಿಗೆ ವಿರೋಧಿಗಳು: ಸಿಎಂ ಸಿದ್ದರಾಮಯ್ಯ