ಹಾವೇರಿ: ಆರ್‌ಸಿಬಿ ತಂಡ 18ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಗೆಲುವು ತನ್ನದಾಗಿಸಿಕೊಂಡಿದ್ದು, ರಾಜ್ಯಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಆರ್‌ಸಿಬಿ ಅಭಿಮಾನಿಯೊಬ್ಬರು ತಾವು ಹೇಳಿದಂತೆ, ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಮೃಷ್ಟಾನ್ನ ಭೋಜನ ವ್ಯವಸ್ಥೆ ಮಾಡಿದ್ದಾರೆ.
ಪಕ್ಕಾ ಆರ್‌ಸಿಬಿ ಅಭಿಮಾನಿಯಾಗಿರುವ ಹಾವೇರಿಯ ಸತೀಶ್ ಎನ್ನುವವರು, ಈ ಬಾರಿ ಆರ್ಸಿಪಿ ಐಪಿಎಲ್ ಕಪ್ ಗೆದ್ದರೆ, ತಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಉತ್ತರ ಕರ್ನಾಟಕದ ಫೇಮಸ್ ಹೋಳಿಗೆ, ಮಾವಿನಹಣ್ಣಿನ ಸೀಕರಣೆ ಮೃಷ್ಟಾನ್ನ ಭೋಜನ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ತಡರಾತ್ರಿ ಆರ್‌ಸಿಬಿ ತಂಡ ಐಪಿಲ್ ಕಪ್ ಗೆಲ್ಲುತ್ತಿದ್ದಂತೆ ಸತೀಶ್ ತಾವು ಕೊಟ್ಟ ಮಾತಿನಂತೆ ಮೃಷ್ಟಾನ್ನ ಭೋಜನ ವ್ಯವಸ್ಥೆ ಮಾಡಿದ್ದಾರೆ.

ಇಂದು ಮಧ್ಯಾಹ್ನ ಕೇಕ್ ತಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿದರು. ಆರ್‌ಸಿಬಿ ತಂಡಕ್ಕೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದರು. ಆರ್‌ಸಿಬಿ ತಂಡದ ಗೆಲುವಿನ ನಾಗಾಲೋಟ ಮುಂದುವರೆಯಲಿ ಎಂದು ಹಾರೈಸಿದರು. ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರ ಆಟದ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸತೀಶ್ ಮಾತನಾಡಿ, "ಆರ್‌ಸಿಬಿ ತಂಡ ಕೋಟ್ಯಾಂತರ ಅಭಿಮಾನಿಗಳ ಕನಸನ್ನು ನನಸು ಮಾಡಿದೆ. ವಿಶ್ವದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಆರ್‌ಸಿಬಿ. 17 ವರ್ಷ ಕಪ್ ಗೆಲ್ಲದಿದ್ದರೂ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದಿತ್ತು. ಐಪಿಎಲ್‌ನ ಪ್ರತಿ ಆವೃತ್ತದಲ್ಲಿ ಸಹ ಕಪ್ ನಮ್ಮದೆ ಎಂದು ಬಡಬಡಿಸುತ್ತಿದ್ದೆವು. ತಂಡ ಸೋತಾಗ ಸಹ ಎದೆಗುಂದದೆ ತಂಡಕ್ಕೆ ಬೆಂಬಲ ನೀಡಿದ್ದೆವು. ಮಂಗಳವಾರ ತಡರಾತ್ರಿ ಕೋಟ್ಯಾಂತರ ಅಭಿಮಾನಿಗಳ ಕನಸನ್ನು ತಂಡ ಈಡೇರಿಸಿದೆ. ಕನ್ನಡಗಿರ ಮನಗೆದ್ದ ಆರ್‌ಸಿಬಿ ತಂಡ ಗೆದ್ದರಿ ಕಾಲೇಜು ಮಕ್ಕಳಿಗೆ, ಸಿಬ್ಬಂದಿಗೆ ಅಭಿಮಾನಿಗಳಿಗೆ ಹೋಳಿಗೆ ಊಟ ಹಾಕಿಸುವ ಭರವಸೆ ನೀಡಿದ್ದೆ. ಅದರಂತೆ ಬುಧವಾರ ಎಲ್ಲರಿಗೂ ಹೋಳಿಗೆ ಊಟದ ವ್ಯವಸ್ಥೆ ಮಾಡಿದೆ" ಎಂದು ಸತೀಶ್ ತಿಳಿಸಿದರು.
ವಿದ್ಯಾರ್ಥಿಗಳು ಮಾತನಾಡಿ, "ಆರ್‌ಸಿಬಿ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಜರ್ಸಿ ನಂಬರ್ 18, ಹಾಗೆಯೇ ಐಪಿಎಲ್ 18ನೇ ಆವೃತ್ತಿಯ ಕಪ್ ನಮ್ಮದಾಗಿದೆ. ಆರ್‌ಸಿಬಿ ಅಭಿಮಾನಿಗಳಾದ ನಾವಷ್ಟೆ ಸಂಭ್ರಮಾಚರಣೆ ಮಾಡುತ್ತಿಲ್ಲ. ಈ ಸಂಭ್ರಮವನ್ನು ಹಂಚುವ ಕೆಲಸ ಮಾಡುತ್ತಿದ್ದೇವೆ. ಕಳೆದ 18 ವರ್ಷದಿಂದ ಕನ್ನಡಿಗರ ಆಸೆ ಆರ್‌ಸಿಬಿ ತಂಡ ಐಪಿಎಲ್ ಗೆಲ್ಲುವುದಾಗಿತ್ತು. 18 ವರ್ಷಕ್ಕೆ ಆರ್‌ಸಿಬಿ ಈ ಸಾಧನೆ ಮಾಡಿದೆ" ಎಂದು ಖುಷಿ ವ್ಯಕ್ತಪಡಿಸಿದರು.

"ನಮ್ಮ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಅವರು ಆರ್‌ಸಿಬಿ ಅಭಿಮಾನಿ. ಆರ್‌ಸಿಬಿ ತಂಡ ಗೆದ್ದರೆ ಹೋಳಿಗೆ ಸೀಕರಣೆ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಇವತ್ತು ಹೋಳಿಗೆ ಸೀಕರಣೆ ಬಡಿಸುವ ಮೂಲಕ ಆರ್‌ಸಿಬಿ ತಂಡದ ಮೇಲಿ ಅಭಿಮಾನ ಸಾಬೀತುಪಡಿಸಿದ್ದಾರೆ" ಎಂದು ಸಂಭ್ರಮಿಸಿದರು.
ಇದನ್ನೂ ಓದಿ: 17 ವರ್ಷಗಳ ಬಳಿಕ ಕನಸಾದ ಕನಸು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ