ಹಾವೇರಿ: ವಿಶ್ವದೆಲ್ಲೆಡೆ ಯೋಗ ದಿನ ಆಚರಿಸಲಾಗುತ್ತಿದೆ. ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ್ದು ಭಾರತ. ಆರಂಭದಲ್ಲಿನ ಯೋಗ ಇಂದು ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಅಂತಹವುಗಳಲ್ಲಿ ಒಂದು ಜಲಯೋಗ. ಈ ಜಲಯೋಗವನ್ನು ಕರಗತ ಮಾಡಿಕೊಂಡಿರುವ ಹಾವೇರಿಯ ಹಾನಗಲ್‌ನ ರಾಜು ಪೇಟಕರ್ ಹಲವು ಆಸನಗಳನ್ನು ನೀರಲ್ಲಿ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ.
ನೀರಲ್ಲಿ ಗಂಟೆಗಟ್ಟಲೆ ನಿಲ್ಲುವ ರಾಜು ಅವರು ನೀರಲ್ಲೇ ಪದ್ಮಾಸನ, ಶವಾಸನ ಮಾಡುತ್ತಾರೆ. ಆರಂಭದಲ್ಲಿ ನೆಲದ ಮೇಲೆ ಯೋಗಾಸನ ಮಾಡುತ್ತಿದ್ದ ಪೇಟಕರ್ ತಮ್ಮ ಪ್ರಯೋಗವನ್ನು ನೀರಿನಲ್ಲಿ ಮಾಡಲು ಆರಂಭಿಸಿದರು. ನಿರಂತರ ಅಭ್ಯಾಸದಿಂದಾಗಿ ಈಗ ನೀರಿನಲ್ಲಿ ಪದ್ಮಾಸನ ಶವಾಸನ ಸೇರಿದಂತೆ ವಿವಿಧ ಆಸನಗಳನ್ನು ಸರಾಗವಾಗಿ ಮಾಡುತ್ತಾರೆ.
ಹಲವು ಆಸನಗಳನ್ನು ಅಭ್ಯಾಸ ಮಾಡುತ್ತಿರುವ ರಾಜು ಅವರು, "ಯೋಗಾಭ್ಯಾಸದಿಂದ ಸಾಕಷ್ಟು ಆರೋಗ್ಯ ಸುಧಾರಿಸುತ್ತದೆ. ಮನಸ್ಸು ಉಲ್ಲಸಿತವಾಗಿರುತ್ತದೆ. ಅಷ್ಟೇ ಅಲ್ಲ ನೀರಿನಲ್ಲಿ ಬಹಳ ವೇಳೆ ಕಳೆಯಬಹುದು. ಐದನೇ ತರಗತಿಯಲ್ಲಿದ್ದಾಗ ಸ್ನೇಹಿತರ ಜೊತೆ ಈಜಲು ಹೋಗುತ್ತಿದ್ದೆ. ಆಗಲೇ ಯೋಗದ ಬಗ್ಗೆ ಸಾಕಷ್ಟು ಆಸಕ್ತಿ ಇದ್ದ ನನಗೆ ನೀರಿನಲ್ಲಿ ಯೋಗ ಮಾಡಿದರೇ ಹೇಗೆ ಎನಿಸಿತು. ಅದೇ ವೇಳೆ ಪತ್ರಿಕೆಗಳಲ್ಲಿ ಜಲಯೋಗದ ಬಗ್ಗೆ ಫೋಟೋಗಳು ಬಂದಿದ್ದವು. ಇದರಿಂದ ಪ್ರೇರಿಪಿತರಾಗಿ ನೀರಿನಲ್ಲಿ ಯೋಗಾಸನ ಮಾಡುವುದನ್ನು ಕಲಿತೆ. ಅಂದು ಆರಂಭವಾದ ನನ್ನ ಜಲಯೋಗ ಇನ್ನು ನಿಂತಿಲ್ಲ "ದಿನದಿಂದ ದಿನಕ್ಕೆ ಹೊಸದನ್ನು ಕಲಿಯುತ್ತಿದ್ದೇನೆ" ಎನ್ನುತ್ತಾರೆ.
"ಇನ್ನು ನೆಲದ ಮೇಲೆ ನಿದ್ರೆ ಮಾಡಲು ಮುಂದಾದರೆ ದೇಹಕ್ಕೆ ನೆಲ ಗಾದೆ ಯಾವುದೇ ಇರಲಿ ಒತ್ತುತ್ತದೆ. ಆದರೆ ಜಲದಲ್ಲಿ ಯೋಗನಿದ್ರೆ, ಶವಾಸನ ಮಾಡುವ ಅನುಭವ ವರ್ಣಿಸಲಾಗುವುದಿಲ್ಲ. ಅದನ್ನು ಮಾಡಿಯೇ ಅನುಭವಿಸಬೇಕು. ಜಲಯೋಗಕ್ಕೆ ಮೊದಲು ಯೋಗಾಸನ ಬರುತ್ತೀರಬೇಕು. ಪ್ರಾಣಾಯಾಮದಲ್ಲಿ ಉಸಿರು ಹಿಡಿಯುವುದು ಗೊತ್ತಿರಬೇಕು. ಮತ್ತು ಈಜು ಬರುತ್ತಿರಬೇಕು. ಇವೆಲ್ಲಾ ಬಂದರೆ ಜಲಯೋಗ ಬಹಳ ಸುಲಭ. ಮೊದ ಮೊದಲು ಸ್ವಲ್ಪ ಕಷ್ಟವಾಗುತ್ತೆ, ನಂತರ ಸುಲಭವಾಗುತ್ತದೆ. ಒಂದು ಬಾರಿ ಅಭ್ಯಾಸವಾದರೆ, ನೀರಿನಿಂದ ಮೇಲೆ ಬರುವುದಕ್ಕೆ ಮನಸ್ಸಾಗುವುದಿಲ್ಲ" ಎಂದು ಹೇಳಿದರು.
ರಾಜು ಪೇಟಕರ್ ಅವರಿಗೆ ಈಗಾಗಲೇ 55 ವರ್ಷ ದಾಟಿದ್ದು, ಈಗಲೂ ಚಿರಯುವಕನಂತೆ ಕಾಣುತ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಯಾವುದೇ ರೋಗಗಳು ಕಾಣಿಸಿಕೊಂಡಿಲ್ಲ. ಸ್ಥೂಲಕಾಯ ಸೇರಿದಂತೆ ಆಧುನಿಕ ರೋಗಗಳು ಇವರಿಂದ ದೂರ ಇವೆ. ಇದಕ್ಕೆಲ್ಲ ಯೋಗವೇ ಕಾರಣ" ಎನ್ನುತ್ತಾರೆ ರಾಜು.
"ಇನ್ನು ಮಕ್ಕಳಿಗೆ ಪೋಷಕರು ಯಾವುದನ್ನು ಕಲಿಸದಿದ್ದರೂ, ಯೋಗಾಸನ, ಈಜು ಕಲಿಸಬೇಕು. ಸಂಗೀತ, ಕ್ರೀಡೆ, ಅಭಿನಯ ಕಲಿಸಿ ಅದರ ಜೊತೆಗೆ ಈಜು ಮತ್ತು ಯೋಗ ಇರಲಿ" ಎನ್ನುವ ಅಭಿಪ್ರಾಯ ಪೇಟಕರ್ ಅವರದು.
ಪೇಟಕರ್ ವರನಟ ಡಾ.ರಾಜ್ಕುಮಾರ್ ಅವರ ಅಭಿಮಾನಿ. ಡಾ. ರಾಜ್ ಬಹುತೇಕ ಸಿನಿಮಾ ನೋಡಿರುವ ರಾಜು ಪೇಟಕರ್ ತಮ್ಮ ಕಾರಿನ ಮೇಲೆ ಒಲವಿನ ಪೂಜೆಗೆ ಒಲವೇ ಮಂದಾರ ಎಂಬ ಶೀರ್ಷಿಕೆ ಹಾಕಿಸಿದ್ದಾರೆ. ಡಾ. ರಾಜ್ಕುಮಾರ್ ಹಾಡುಗಳಿಗೆ ದನಿಗೂಡುವ ರಾಜು ಪೇಟಕರ್ಗೆ ರಾಜ್ ಹಾಡುಗಳೆಂದರೇ ಅಚ್ಚುಮೆಚ್ಚು.
ರಾಜು ಪೇಟಕರ್ ಕೇವಲ ವ್ಯಾಯಾಮ, ಜಲಯೋಗದಿಂದ ಮಾತ್ರ ಪ್ರಸಿದ್ಧಿಯಾಗಿಲ್ಲ. ಜೊತೆಗೆ ನೀರಿನಲ್ಲಿ ಮುಳುಗುತ್ತಿರುವವರನ್ನು ರಕ್ಷಿಸುವುದಕ್ಕೂ ಮುಂದಾಗುತ್ತಾರೆ. ಎಲ್ಲಿ ಯಾವುದಾದರೂ ನೀರಿನ ಅವಘಡಗಳು ಸಂಭವಿಸಿದರೆ ರಾಜು ಅವರಿಗೆ ದೂರವಾಣಿ ಕರೆ ಬರುತ್ತದೆ. ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆ, ಮುಳುಗಿದವರ ಪತ್ತೆ ಹಚ್ಚುವ ಕಾರ್ಯವನ್ನು ರಾಜು ಮಾಡುತ್ತಾರೆ.
ರಾಜು ಪೇಟಕರ್ ಅವರ ಜಲಯೋಗ ಕಂಡು ಅಚ್ಚರಿ ಪಟ್ಟವರು ಇದ್ದಾರೆ. ನೆಲದ ಮೇಲೆ ಯೋಗಾಸನ ಮಾಡಲು ನಮಗೆ ಕಷ್ಟವಾಗುತ್ತದೆ. ಅಂತಹದರಲ್ಲಿ ರಾಜು ಪೇಟಕರ್ ನೀರಿನ ಮೇಲೆ ಯೋಗ ಮಾಡುತ್ತಾರೆ. ನಾವು ಸಹ ಈ ಜಲಯೋಗದ ಬಗ್ಗೆ ಮಾಹಿತಿ ಕೇಳುತ್ತಿದ್ದೇವೆ ಎಂದು ರಾಜು ಪೇಟಕರ್ ಅವರ ಯೋಗಪ್ರೇಮಕ್ಕೆ, ಅವರ ಸಾಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ವಿಶ್ವ ಯೋಗ ದಿನ: ಸಾಂಸ್ಕೃತಿಕ ನಗರಿ ಪ್ರವಾಸೋದ್ಯಮಕ್ಕೆ ಬೂಸ್ಟ್ ನೀಡಿದ ಯೋಗ!