Bihar Election Results 2025

ETV Bharat / state

ಜಾರಕಿಹೊಳಿ ಕುಟುಂಬದ ಎರಡು ಕುಡಿಗಳು ಡಿಸಿಸಿ ಬ್ಯಾಂಕಿಗೆ ಎಂಟ್ರಿ; ಜಾರಕಿಹೊಳಿ ಪೆನಲ್ ಸೇರಿ ನಾಮಪತ್ರ ಸಲ್ಲಿಸಿದ ಹೆಬ್ಬಾಳ್ಕರ್ ಸಹೋದರ

ಜಾರಕಿಹೊಳಿ ಪೆನಲ್​ನ 6 ಅಭ್ಯರ್ಥಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

Rahul-and-Amarnath-file-nominations-for-dcc-bank-elections
ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದರು (ETV Bharat)
author img

By ETV Bharat Karnataka Team

Published : October 11, 2025 at 4:43 PM IST

5 Min Read
Choose ETV Bharat

ಬೆಳಗಾವಿ : ಜಾರಕಿಹೊಳಿ ಮನೆತನದ ಎರಡು ಕುಡಿಗಳು ಡಿಸಿಸಿ ಬ್ಯಾಂಕ್ ಚುನಾವಣೆ ಅಖಾಡಕ್ಕೆ ಧುಮಿಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಇವರ ಜೊತೆಗೆ ಕೂಡಿಕೊಂಡು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೌದು, ಜಾರಕಿಹೊಳಿ ಪೆನಲ್​ನ 6 ಅಭ್ಯರ್ಥಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಗೋಕಾಕ್ ಕ್ಷೇತ್ರದಿಂದ ಅಮರನಾಥ್ ಜಾರಕಿಹೊಳಿ, ಮೂಡಲಗಿ ನೀಲಕಂಠ ಕಪ್ಪಲಗುದ್ದಿ, ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ, ಹುಕ್ಕೇರಿಯಿಂದ ರಾಜೇಂದ್ರ ಪಾಟೀಲ, ರಾಮದುರ್ಗದಿಂದ ಎಸ್.ಎಸ್. ಢವಣ, ಇತರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಸಿದರು. ಮೊನ್ನೆ 7 ಸೇರಿ ಒಟ್ಟು 13 ಅಭ್ಯರ್ಥಿಗಳು ಇವರ ಪೆನಲ್​​ನಿಂದ ಕಣಕ್ಕೆ ಇಳಿದಂತಾಗಿದೆ.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿದರು (ETV Bharat)

ನಾಮಪತ್ರ ಸಲ್ಲಿಕೆಗೆ ಸಾವಿರಾರು ಸಂಖ್ಯೆಯಲ್ಲಿ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಐವರು ಸಹೋದರರ ಭಾವಚಿತ್ರ ಹಿಡಿದು ಘೋಷಣೆ ಕೂಗಿ ಕಾರ್ಯಕರ್ತರು ಅಭಿಮಾನ ಪ್ರದರ್ಶಿಸಿದರು.

ನಾಮಪತ್ರ ಸಲ್ಲಿಕೆ ಬಳಿಕ ಬಾಲಚಂದ್ರ ಜಾರಕಿಹೊಳಿ ಅವರು ಮಾಧ್ಯಮದವರ ಜೊತೆಗೆ ಮಾತನಾಡಿದರು. ಈ ವೇಳೆ ಜಾರಕಿಹೊಳಿ ಮನೆತನದ ಎರಡನೇ ಜನರೇಶನ್ ಚುನಾವಣಾ ಅಖಾಡಕ್ಕೆ ಧುಮಿಕಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, 'ಕುಟುಂಬ ರಾಜಕಾರಣ ನಮ್ಮ ಕುಟುಂಬಕ್ಕೆ ಮಾತ್ರ ಸಂಬಂಧಿಸಿಲ್ಲ. ಜಿಲ್ಲೆಯಲ್ಲಿ 50 ವರ್ಷದ ಇತಿಹಾಸ ತೆಗೆದು ನೋಡಿ‌. ಎಲ್ಲಾ ಕುಟುಂಬಗಳಲ್ಲೂ ಅವರು, ಅವರ ಮಕ್ಕಳು ರಾಜಕೀಯದಲ್ಲಿ ಮುಂದುವರೆದಿದ್ದಾರೆ‌. ಮುಂದಿನ ಜನರೇಶನ್ ಬೆಳೆಯಬೇಕು ಅಲ್ಲವೇ. ಎಲ್ಲರೂ ನಿಮ್ಮನ್ನೇ ನಂಬಿಕೊಂಡ ಜನರು, ಸಂಘಟನೆಗಳು ಇರುತ್ತವೆ. ನಾವು ಮಾಡಿದ ರಥ ಅಲ್ಲೆ ಬಿಟ್ಟು ಹೋಗಲು ಆಗಲ್ಲ. ಅದನ್ನು ಎಳೆದುಕೊಂಡು ಹೋಗುವವರು ಬೇಕಾಗುತ್ತದೆ. ಜನ ಎಲ್ಲಿಯವರೆಗೆ ಆಶೀರ್ವದಿಸಿ ಗೆಲ್ಲಿಸುತ್ತಾರೆ ಅಲ್ಲಿಯವರೆಗೆ ಅಧಿಕಾರದಲ್ಲಿ ಇರುತ್ತೇವೆ. ಯಾವಾಗ ಜನ ಬೇಡ ಎನ್ನುತ್ತಾರೆ ಆಗ ಮನೆಯಲ್ಲಿ ಕೂರುತ್ತೇವೆ' ಎಂದರು‌‌.

Rahul-and-amarnath-file-nominations-for-dcc-bank-elections
ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದರು (ETV Bharat)

ನಾನು ಸ್ಪರ್ಧಿಸಲ್ಲ, ಅಧ್ಯಕ್ಷ ಆಗುವುದಿಲ್ಲ ಅಂತಾ ಹೇಳಿದ್ದೆ. ಆದರೆ, ಅನಿವಾರ್ಯ ಪರಿಸ್ಥಿತಿಯಿಂದ ಗೋಕಾಕಿನಿಂದ ಅಮರನಾಥ್ ಸ್ಪರ್ಧಿಸುತ್ತಿದ್ದಾರೆ. ರಾಜೇಂದ್ರ ಅಂಕಲಗಿ ಆರು ತಿಂಗಳ ಹಿಂದೆ ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ ಅವರ ಹೆಸರು ಘೋಷಿಸಿದ್ದರು. ಡಿಸಿಸಿ ಬ್ಯಾಂಕಿಗೆ ಲಿಂಗಾಯತರೇ ಅಧ್ಯಕ್ಷ ಆಗುತ್ತಾರೆ ಎಂದು ಸ್ಪಷ್ಟಪಡಿಸಿದರು.

ಲಿಂಗಾಯತರೇ ಏಕೆ ಅಧ್ಯಕ್ಷ?: ಲಿಂಗಾಯತರನ್ನೇ ಏಕೆ ಅಧ್ಯಕ್ಷರನ್ನಾಗಿ ಮಾಡುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, 'ಡಿಸಿಸಿ ಬ್ಯಾಂಕಿಗೆ ಲಿಂಗಾಯತರ ದೊಡ್ಡ ಸೇವೆ, ಕೊಡುಗೆ ಇದೆ. ಮುರಗೋಡ ಮಹಾಂತ ಅಜ್ಜನವರ ಆಶೀರ್ವಾದದಿಂದ ಬ್ಯಾಂಕ್ ಕಟ್ಟಿದ್ದು, ಹೆಚ್ಚಿನ ಸೇವೆ ಸಲ್ಲಿಸಿದ್ದು, ಶ್ರಮ ಪಟ್ಟಿದ್ದಾರೆ. ಹಾಗಾಗಿ, ಲಿಂಗಾಯತರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಹಾಲು ಒಕ್ಕೂಟಕ್ಕೆ ನಾನು ಅಧ್ಯಕ್ಷನಾಗಿದ್ದೇನೆ. ಎಲ್ಲ ಸಮಾಜದವರು ಇರಬೇಕು ಅಂತ ಈ ನಿರ್ಧಾರಕ್ಕೆ ಬಂದಿದ್ದೇವೆ' ಎಂದರು.

ರಾಹುಲ್, ಅಮರನಾಥ್ ಮತ್ತು ಚನ್ನರಾಜ ಹಟ್ಟಿಹೊಳಿ ಅವರ ಸ್ಪರ್ಧೆ ಕೊನೆ ಕ್ಷಣದವರೆಗೂ ಗೌಪ್ಯತೆ ಕಾಯ್ದುಕೊಂಡಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, 'ಅದೇ ರಾಜಕಾರಣ ಅಂತಾರೆ. ಚನ್ನರಾಜ 2020ರಲ್ಲಿ ನಿಲ್ಲುತ್ತೇವೆ ಎಂದಿದ್ದರು. ಈ ಬಾರಿ ಬೆಳಗಾವಿ, ಖಾನಾಪುರದಿಂದ ಸ್ಪರ್ಧಿಸಲು ಬಯಸಿದ್ದರು. ಆಗ ಸತೀಶ್ ಜಾರಕಿಹೊಳಿ ಅವರ ಮಾತಿನಂತೆ ಹಿಂದೆ ಸರಿದಿದ್ದರು. ಮೂರು ಕಡೆ ಬಿಟ್ಟು ಕೊಟ್ಟಿದ್ದರು. ಈ ಬಾರಿ ಅವರಿಗೆ ಅವಕಾಶ ಕೊಡಿಸಬೇಕು ಅಂತ ಚರ್ಚಿಸಿ ಕಣಕ್ಕೆ ಇಳಿಸಿದ್ದೇವೆ' ಎಂದು ಹೇಳಿದರು.

Fans
ಅಭಿಮಾನಿಗಳು (ETV Bharat)

ನಿಪ್ಪಾಣಿಯಲ್ಲಿ ಉತ್ತಮ ಪಾಟೀಲ ಅವರಿಗೆ ಸ್ಪರ್ಧೆ ಮಾಡಬೇಡಿ, ನಮಗೆ ಸಹಕಾರ ಕೊಡಿ ಎಂದು ನಾನು ಹತ್ತು ಬಾರಿ ಮನವಿ ಮಾಡಿಕೊಂಡಿದ್ದೇನೆ. ಇನ್ನು ವೀರಕುಮಾರ ಪಾಟೀಲ ಮೂಲಕ ಸತೀಶ್ ಜಾರಕಿಹೊಳಿ ಅವರು ಕೂಡ ಚುನಾವಣೆಗೆ ನಿಲ್ಲಬೇಡಿ, ನಾವು ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಅಂತಾ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಮಾತು ಕೇಳದೇ ಸ್ಪರ್ಧಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಒಪ್ಪಿಗೆ ಪಡೆದಿಲ್ಲ. ಆ ರೀತಿ ಅವರ ಹೆಸರನ್ನು ಉತ್ತಮ ಪಾಟೀಲ ಹೇಳಬಾರದು ಎಂದರು.

ಕಿತ್ತೂರಿನಲ್ಲಿ ವಿಕ್ರಮ್ ಇನಾಮದಾರ್ ನಮ್ಮ ಅಭ್ಯರ್ಥಿ. ಅವರನ್ನು ಗೆಲ್ಲಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಬಾಬಾಸಾಹೇಬ ಪಾಟೀಲ ಕಾಂಗ್ರೆಸ್ ಶಾಸಕರು. ಹಾಗಾಗಿ, ಅವರ ಸಹೋದರನನ್ನು ನಿಲ್ಲಿಸಿದ್ದಾರೆ. ಯರಗಟ್ಟಿಗೆ ಹೋಗಬೇಡಿ ಅಲ್ಲಿ ವಿಶ್ವಾಸ ವೈದ್ಯ ನಮ್ಮ ಅಭ್ಯರ್ಥಿ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದರು. ಆ ಪ್ರಕಾರ ನಾವು ಅಲ್ಲಿ ಪ್ರಚಾರ ಮಾಡಲಿಲ್ಲ. ಅವರಿಗೆ ಏನು ಅನುಕೂಲ ಮಾಡಬೇಕು ಮಾಡಿದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅಥಣಿಯಿಂದ ಮಹೇಶ ಕುಮಠಳ್ಳಿ, ಕಾಗವಾಡದಿಂದ ಶ್ರೀನಿವಾಸ ಪಾಟೀಲ ನಾಮಪತ್ರ ಸಲ್ಲಿಸುವಾಗ ನಮ್ಮನ್ನು ಒಂದು ಮಾತು ಕೇಳಿಲ್ಲ‌‌. ವೈಯಕ್ತಿಕವಾಗಿ ಅವರು ಸ್ಪರ್ಧಿಸಿದ್ದಾರೆ. ಚಿಕ್ಕೋಡಿ, ಅಥಣಿ, ಕಾಗವಾಡ ನಮಗೆ ಸಂಬಂಧ ಇಲ್ಲ. 13 ಅಭ್ಯರ್ಥಿಗಳನ್ನು ಮಾತ್ರ ನಿಲ್ಲಿಸುತ್ತೇವೆ ಅಂತಾ ಹೇಳಿದ್ದೆವು. ಅವರು ನಮ್ಮ ಪೆನಲ್ ಅಭ್ಯರ್ಥಿಗಳಲ್ಲ ಎಂದು ಸ್ಪಷ್ಟಪಡಿಸಿದರು‌.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಲಕ್ಷ್ಮಣ ಸವದಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಅವರು ಸವದಿ, ಕಾಗೆ ಇಬ್ಬರೇ ಅಂತಾ ಹೇಳಿದರು. ಚಿಕ್ಕೋಡಿಯಲ್ಲಿ ಗಣೇಶ ಹುಕ್ಕೇರಿ ಒಬ್ಬರೇ ಎಂದಿದ್ದಾರೆ. ನಾವು ಸತೀಶ್ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿಕೊಂಡು 13 ಜನರನ್ನು ನಿಲ್ಲಿಸಿದ್ದೇವೆ. ಹಾಗಾಗಿ, ನಮ್ಮ ಸೀಟ್ ಹೆಚ್ಚು ಬರುತ್ತವೆ ಎಂದು ತಿರುಗೇಟು ಕೊಟ್ಟರು.

ಸೂರ್ಯ, ಚಂದ್ರರಿಗೆ ಗ್ರಹಣ ಹಿಡಿದಾಗ ಪೂಜೆ ಮಾಡಬೇಕಾಗುತ್ತದೆ ಎಂಬ ಲಕ್ಷ್ಮಣ ಸವದಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಹೆಸರು ಚಂದ್ರ ಇದೆ. ನಾನು ದೇವರು ಇದ್ದ ಹಾಗೆ, ಜನರು ಬಂದು ನನಗೆ ಪೂಜೆ ಮಾಡುತ್ತಾರೆ. ಆದರೆ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಚುನಾವಣೆ ಅಂದ ಮೇಲೆ ಇಂಥ ಮಾತು ಬರುತ್ತವೆ. ಅಥಣಿ, ಕಾಗವಾಡ, ಚಿಕ್ಕೋಡಿ ನಮಗೆ ಸಂಬಂಧ ಇಲ್ಲ. ಎಲ್ಲವನ್ನೂ ಸರಳ ಮಾಡಲು ಪ್ರಯತ್ನಿಸುತ್ತೇವೆ. ಆಗಲಿಲ್ಲ ಎಂದರೆ ಅನಿವಾರ್ಯವಾಗಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದರು.

ಹುಕ್ಕೇರಿ ಕೆಇಬಿ ಚುನಾವಣೆ ಡಿಸಿಸಿ ಬ್ಯಾಂಕಿಗೆ ಹೋಲಿಕೆ ಮಾಡಬೇಡಿ. ಅದು ಆ ತಾಲೂಕಿಗೆ ಸೀಮಿತವಾದ ಚುನಾವಣೆ. ಇದು ಜಿಲ್ಲಾ ಮಟ್ಟದ್ದು. ಅ. 19 ರಂದು ಬರುವ ಫಲಿತಾಂಶ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತದೆ. ಇನ್ನು ಹುಕ್ಕೇರಿಯಲ್ಲಿ ರಾಜೇಂದ್ರ ಪಾಟೀಲ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದೇವೆ. ನಾಳೆಯಿಂದ ಕೆಲಸ ಶುರು ಮಾಡುತ್ತೇವೆ. ಮತದಾರರು ಕೊಟ್ಟ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದ ಅವರು, ರಾಮದುರ್ಗದಲ್ಲಿ ಎಸ್. ಎಸ್. ಢವಣ ನಮ್ಮ ಅಭ್ಯರ್ಥಿ. ಅಶೋಕ ಪಟ್ಟಣ, ಮಹಾದೇವಪ್ಪ ಯಾದವಾಡ ಏನು ಮಾಡುತ್ತಾರೋ ನಮಗೆ ಗೊತ್ತಿಲ್ಲ.‌ ಢವಣ ಗೆಲ್ಲಿಸಲು ನಾವು ಶ್ರಮಿಸುತ್ತೇವೆ. ಇನ್ನು ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.

ಚನ್ನರಾಜ ಹಟ್ಟಿಹೊಳಿ ಅವರು ಮೊನ್ನೆ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್ ಆಗಿದ್ದಾರೆ. ಸಹಕಾರ ಕ್ಷೇತ್ರಕ್ಕೆ ಬರಬೇಕು. ಕೆಲಸ ಮಾಡುವ ಆಸೆ ಇದೆ. ಬೆಳಗಾವಿ ಜಿಲ್ಲೆಯ ಬಹಳಷ್ಟು ಜನರು ಸಹಕಾರ ಕ್ಷೇತ್ರದಿಂದ ಬಂದು ಎತ್ತರದ ಮಟ್ಟಕ್ಕೆ ಬೆಳೆದಿದ್ದಾರೆ. ಎಂ. ಕೆ. ಹುಬ್ಬಳ್ಳಿ ಫ್ಯಾಕ್ಟರಿ ಸುಧಾರಣೆ ಮಾಡಲು ಹೊರಟಿದ್ದಾರೆ. ರೈತರಿಗೆ ಎಷ್ಟು ಒಳ್ಳೆಯ ಕೆಲಸ ಮಾಡುತ್ತಾರೆ ಮಾಡಲಿ ಎಂದು ಹೇಳಿದರು.

ಬಹಳಷ್ಟು ಕಡೆ ಅವಿರೋಧ ಆಗುವ ಸಾಧ್ಯತೆ ಇತ್ತು. ಆದರೆ, ಕೆಲವೊಂದು ಜನರು ಅಲ್ಲೆಲ್ಲಾ ಯಾರನ್ನೋ ಕರೆದುಕೊಂಡು ಬಂದು ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎನ್ನುವುದು ಅವರಿಗೂ ಗೊತ್ತಿದೆ. ಆದರೂ ನಮ್ಮ ಅಭ್ಯರ್ಥಿಗಳಿಗೆ ತೊಂದರೆ ಕೊಡಬೇಕು ಅಂತಾ ಈ ರೀತಿ ಮಾಡುತ್ತಿದ್ದಾರೆ. ಏನೇ ಆದರೂ ನಮ್ಮ 13 ಅಭ್ಯರ್ಥಿಗಳು ನೂರಕ್ಕೆ ನೂರು ಗೆಲ್ಲುತ್ತಾರೆ. ಒಳ್ಳೆಯ ಅಭ್ಯರ್ಥಿಗಳನ್ನು ತಂದು ಅವರಿಗಿಂತ ಚನ್ನಾಗಿ ಬ್ಯಾಂಕ್ ನಡೆಸಿ ತೋರಿಸುತ್ತೇವೆ ಎಂದರು.

ಇದನ್ನೂ ಓದಿ : DCC ಬ್ಯಾಂಕ್ ಚುನಾವಣೆ: ನಾಮಪತ್ರ ಸಲ್ಲಿಸಿದ ಸವದಿ, ಕಾಗೆ ಜೋಡೆತ್ತು: ನಮ್ಮಿಬ್ಬರದ್ದು ಒಂದು ಬಣ ಎಂದ ಸವದಿ