ಶಿವಮೊಗ್ಗ : ಶಿವಮೊಗ್ಗದ ಭದ್ರಾವತಿ ಆಕಾಶವಾಣಿ ಕೇಂದ್ರದ ಪ್ರಸಾರ ವಿಸ್ತರಣೆಯಂತೆ ರಾಜ್ಯದ ಕೋಲಾರ, ಬೀದರ್ ಹಾಗೂ ಉಡುಪಿಯಲ್ಲೂ ವಿಸ್ತರಣೆ ಮಾಡಲಾಗುತ್ತದೆ ಎಂದು ಕೇಂದ್ರದ ಪ್ರಸಾರ ಭಾರತಿ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ತಿಳಿಸಿದ್ದಾರೆ.
ಶಿವಮೊಗ್ಗ ನಗರದ ದೂರದರ್ಶನದ ಮರು ಪ್ರಸಾರ ಕೇಂದ್ರ ಹಾಗೂ ಭದ್ರಾವತಿ ಆಕಾಶವಾಣಿಯ ಪ್ರಸಾರ ವಿಸ್ತರಣೆ ಮಾಡುವ ಕೆನಾಡದಿಂದ ಆಮದು ಮಾಡಿಕೊಂಡ 10 KV ಯ ನೂತನ ಟ್ರಾನ್ಸ್ ಮೀಟರ್ ಪೂಜಾ ಕಾರ್ಯಕ್ರಮ ಹಾಗೂ ದೂರದರ್ಶನ ಕೇಂದ್ರದಲ್ಲಿ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೊಂದು ಐತಿಹಾಸಿಕ ದಿನವಾಗಿದೆ. ಸಂಸದ ರಾಘವೇಂದ್ರರ ನಿರಂತರ ಪ್ರಯತ್ನದಿಂದ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಅಳವಡಿಕೆ ಕೆಲಸ ಆಗುತ್ತಿದೆ. 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಅಳವಡಿಕೆಗೆ ತುಂಬಾ ಸಂತೋಷದಿಂದ ಚಾಲನೆ ನೀಡಿದ್ದೇನೆ ಎಂದರು.
ಸಂಸದರು ಶಿವಮೊಗ್ಗದಲ್ಲಿ ವಿವಿಐಪಿ ಸ್ಟೂಡಿಯೋ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ವಿವಿಐಪಿ ಸ್ಟೂಡಿಯೋ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ 2500 ಕೋಟಿ ಹಣವನ್ನು ಪ್ರಸರಣ ಕೇಂದ್ರಗಳಿಗೆ ನೀಡಿದ್ದಾರೆ. ಆಕಾಶವಾಣಿ ಇಂದಿಗೂ ತನ್ನ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ದೇಶದ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದೆ ಎಂದರು.
ಜನ ಸಾಮಾನ್ಯರಿಗೆ ಸಂಪರ್ಕ ಸಾಧನವಾಗಿ ಆಕಾಶವಾಣಿ ಕೆಲಸ ಮಾಡುತ್ತಿದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಜನರಿಗೆ ಮಾಹಿತಿ ನೀಡುತ್ತಿದೆ. ಆಕಾಶವಾಣಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಸಂಸದ ರಾಘವೇಂದ್ರ ಅವರು, ಭದ್ರಾವತಿಯ ಆಕಾಶವಾಣಿಗೆ 1 ಕೆವಿ ಸಾಮರ್ಥ್ಯದಿಂದ 10 ಕೆವಿ ಸಾಮರ್ಥ್ಯದ ಟ್ರಾನ್ಸ್ಮೀಟರ್ ಅಳವಡಿಕೆ ಮಾಡಲಾಗುತ್ತಿದೆ. ಒಂದು ಕಾಲದಲ್ಲಿ ಆಕಾಶವಾಣಿ ಮನೆಮನೆಯ ಮಾಧ್ಯಮವಾಗಿತ್ತು. ಗುಡ್ಡಗಾಡು ಪ್ರದೇಶದ ಸಂಪರ್ಕ ಸಾಧನ ಕೇಂದ್ರವಾಗಿ ರೇಡಿಯೋ ಇಂದು ಇದೆ. ಹತ್ತು ಕೋಟಿ ವೆಚ್ಚದಲ್ಲಿ ಈ ಅಭಿವೃದ್ದಿ ಕೆಲಸ ಆಗುತ್ತಿದೆ ಎಂದರು. ಇದೇ ವೇಳೆ ಕೇಂದ್ರ ಸಚಿವರಿಗೆ ದೂರದರ್ಶನ ಮರು ಪ್ರಸಾರ ಕೇಂದ್ರದಲ್ಲಿ ಆಕಾಶವಾಣಿಯ ಒಂದು ಸ್ಟೂಡಿಯೋ ತೆರೆಯಬೇಕೆಂದು ವಿನಂತಿಸಿಕೊಂಡರು.
ಭದ್ರಾವತಿ ಆಕಾಶವಾಣಿ ಕೇಂದ್ರ ವಜ್ರಮಹೋತ್ಸವ ಆಚರಿಸುತ್ತಿದೆ. ಜನರ ಜ್ಞಾನವನ್ನು ವೃದ್ದಿಸುವ ಕೆಲಸವನ್ನು ಆಕಾಶವಾಣಿ ಮಾಡುತ್ತಿದೆ. ಬಡವರು ಕೂಡ ಕಾರ್ಯಕ್ರಮ ಕೇಳಲು ಒಂದು ಉತ್ತಮ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ಇದನ್ನೂ ಓದಿ : ಈ ಬಾರಿಯ ಕೇಂದ್ರ ಬಜೆಟ್‌ಲ್ಲಿ ಸಿಗುತ್ತಾ ಶಿವಮೊಗ್ಗ to ಚನ್ನಗಿರಿ ರೈಲು ಯೋಜನೆಗೆ ಗ್ರೀನ್ ಸಿಗ್ನಲ್? - UNION BUDGET 2025