ಬೆಂಗಳೂರು: ರಾಜ್ಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನಔಷಧಿ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಆದೇಶ ಅತ್ಯಂತ ಜನವಿರೋಧಿ ನಡೆಯಾಗಿದ್ದು, ಇದು ರಾಜಕೀಯ ಪ್ರೇರಿತ ನಿರ್ಧಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಡವರು, ಜನಸಾಮಾನ್ಯರಿಗೆ ಅಗ್ಗದ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಒದಗಿಸುತ್ತಿರುವ ಜನ ಔಷಧಿ ಕೇಂದ್ರಗಳಿಗೆ ಅವಕಾಶ ನೀಡದಿರಲು ಕಾರಣವೇನು? ಸರ್ಕಾರಿ ಆಸ್ಪತ್ರೆಗಳ ವೈದ್ಯರು ಜೆನೆರಿಕ್ ಔಷಧಿ ಚೀಟಿ ಬರೆಯುವುದಕ್ಕೂ ಜನಔಷಧಿ ಕೇಂದ್ರಗಳಿಗೆ ಅವಕಾಶ ನೀಡದಿರುವುದಕ್ಕೂ ಸಂಬಂಧವೇನು? ಎಂದು ಪ್ರಶ್ನಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಗಳಲ್ಲಿ ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ ಎನ್ನುವ ಕಾರಣಕ್ಕೆ ಬೇರೆ ಹೋಟೆಲ್ ಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎನ್ನಲು ಸಾಧ್ಯವೇ?. ಜನರು ತಮಗೆ ಸಕಾಲಕ್ಕೆ, ಕೈಗೆಟಕುವ ಬೆಲೆಗೆ, ಉತ್ತಮ ಗುಣಮಟ್ಟದ ಔಷಧಿ ಎಲ್ಲಿ ಸಿಗುತ್ತದೋ ಅಲ್ಲಿ ಖರೀದಿ ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಕ್ಕರೆ ಅದನ್ನೇ ಪಡೆಯುತ್ತಾರೆ. ಅದಕ್ಕಾಗಿ ಜನಔಷಧಿ ಕೇಂದ್ರಗಳನ್ನು ಮುಚ್ಚುವ ಅವಶ್ಯಕತೆ ಏನಿದೆ? ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ರಾಜ್ಯ ಸರ್ಕಾರ ಕಾರ್ಪೊರೇಟ್ ಔಷಧ ಕಂಪನಿಗಳು, ಖಾಸಗಿ ಮೆಡಿಕಲ್ ಶಾಪ್ ಗಳ ಲಾಬಿಗೆ ಮಣಿದು ಜನ ಔಷಧಿ ಕೇಂದ್ರಗಳಿಗೆ ಅವಕಾಶ ನೀಡುತ್ತಿಲ್ಲವೋ ಅಥವಾ ಪ್ರಧಾನಮಂತ್ರಿಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಿದೆ ಎಂಬ ಅಸೂಯೆಯೋ?. ಈಗ ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಬರೆದುಕೊಟ್ಟ ಚೀಟಿಯಲ್ಲಿರುವ ಔಷಧಿ ಸ್ಟಾಕ್ ಇಲ್ಲದಿದ್ದರೆ ಪಾಪ ಬಡವರು ಏನು ಮಾಡಬೇಕು? ಅದರಿಂದ ಏನಾದರೂ ಅನಾಹುತ ಆದರೆ ಅದಕ್ಕೆ ಯಾರು ಹೊಣೆ? ಎಂದು ಕೇಳಿದ್ದಾರೆ.
ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಜನರಿಗೆ ಒಳ್ಳೆಯದಾಗುವ ಕೆಲಸ ಮಾಡುವ ಮನಸ್ಸಿಲ್ಲ. ಇನ್ನೊಬ್ಬರು ಮಾಡಿದರೆ ಅದನ್ನೂ ಸಹಿಸಲ್ಲ. ಪಾಪಿ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಶಾಪ ತಟ್ಟದೇ ಇರದು ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಇಂಧನ ಸಚಿವ ಕೆ.ಜೆ.ಜಾರ್ಜ್ ಸಾಹೇಬರು ಗೃಹಲಕ್ಷ್ಮೀ ಹಣವನ್ನು ತಿಂಗಳು ತಿಂಗಳು ಕರೆಕ್ಟಾಗಿ ಕೊಡೋಕೆ ಅದೇನು ಸಂಬಳಾನಾ ಅಂತ ಕರ್ನಾಟಕದ ಮಹಿಳೆಯರ ಸ್ವಾಭಿಮಾನವನ್ನೇ ಪ್ರಶ್ನೆ ಮಾಡಿ ಅವಮಾನ ಮಾಡಿದ್ದರು. ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಹೇಬರು ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಇದೇನಾ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಖಟಾಖಟ್ ಖಟಾಖಟ್ ಮಾಡೆಲ್?. ನಾಡಿನ ತಾಯಂದಿರಿಗೆ, ಅಕ್ಕ-ತಂಗಿಯರಿಗೆ ನಂಬಿಕೆ ದ್ರೋಹ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಹಿಳೆಯರ ಶಾಪ ತಟ್ಟದೇ ಇರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಒಂದೇ ಮಳೆಗೆ ಬ್ರಾಂಡ್ ಬೆಂಗಳೂರು ನಿಜ ಬಣ್ಣ ಬಯಲು: ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಡಿ - BENGALURU RAIN