Bihar Election Results 2025

ETV Bharat / state

RSS ಬ್ಯಾನ್​ ಮಾಡಲು ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ: ಆರ್. ಅಶೋಕ್

ಆರ್.ಎಸ್ ಎಸ್ ಬ್ಯಾನ್ ಮಾಡಲು ಮೂರು ಬಾರಿ ಪ್ರಯತ್ನ ಮಾಡಲಾಯಿತು. ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

BENGALURU  R ASHOK  RSS ಬ್ಯಾನ್  ಅಶ್ವಥ್ ನಾರಾಯಣ್
ವಿಪಕ್ಷ ನಾಯಕ ಆರ್. ಅಶೋಕ್ (ETV Bharat)
author img

By ETV Bharat Karnataka Team

Published : October 12, 2025 at 3:45 PM IST

3 Min Read
Choose ETV Bharat

ಬೆಂಗಳೂರು: "ಆರ್.ಎಸ್ ಎಸ್ ಬ್ಯಾನ್ ಮಾಡಲು ಮೂರು ಬಾರಿ ಪ್ರಯತ್ನ ಮಾಡಿದರು. ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ" ಎ‌ಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ನಗರದಲ್ಲಿಂದು RSS ಪಥಸಂಚಲನದ ಬಳಿಕ RSS ಬ್ಯಾನ್ ಮಾಡುವ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, "ಆರ್.ಎಸ್ ಎಸ್ ಬ್ಯಾನ್ ಮಾಡಲು ಮೂರು ಬಾರಿ ಪ್ರಯತ್ನ ಮಾಡಿದರೂ ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಅವರೇ RSS, ದೇಶದ ಬಹುತೇಕ ರಾಜ್ಯಪಾಲರು RSS. ಇಡೀ ದೇಶವೇ RSS ಇದ್ದಾಗ ಕಾಂಗ್ರೆಸ್ ರಾಷ್ಟ್ರೀಯ ಪಾರ್ಟಿ ಆಗಿ ಉಳಿದಿಲ್ಲ. ರಾಹುಲ್ ಗಾಂಧಿ RSS ಬಗ್ಗೆ ಮಾತಾನಾಡುತ್ತಾರೆ ಅಂದರೆ ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ. ಇಂತಹವರಿಗೆ RSS ಬಗ್ಗೆ ಮಾತಾಡುವ ಅರ್ಹತೆ ಇಲ್ಲ. ರಾಷ್ಟ್ರ ಪ್ರೇಮ ಮೂಡಿಸುವ ಸಂಸ್ಥೆ RSS. ಇವರಿಗೆ ರಾಷ್ಟ್ರಪ್ರೇಮ ಇಲ್ಲ, ಕಾಂಗ್ರೆಸ್​ಗೆ ವೋಟಿನ ಪ್ರೇಮ ಮಾತ್ರ ಇದೆ" ಎಂದು ವಾಗ್ದಾಳಿ ನಡೆಸಿದರು.

ವಿಪಕ್ಷ ನಾಯಕ ಆರ್. ಅಶೋಕ್ (ETV Bharat)

ಬಳಿಕ ಡಿಕೆಶಿ-ಮುನಿರತ್ನ ಜಟಾಪಟಿ ವಿಚಾರವಾಗಿ, "ಸರ್ಕಾರದ ದುಡ್ಡಿನಲ್ಲಿ ಮಾಡುತ್ತಿರುವ ಕಾರ್ಯಕ್ರಮ ಅದು. ಸರ್ಕಾರಿ ಕಾರ್ಯಕ್ರಮ‌. ಲೋಕಲ್​ MLA, MPನ ಕರೆಯದೇ ಅವಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಶಾಸಕರಿಗೆ ಗೌರವ ಕೊಡದೇ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದು ಕಾಂಗ್ರೆಸ್​ನ ಸಂಸ್ಕೃತಿ ಹಾಗೂ ಗೂಂಡಾಗಿರಿ ತೋರಿಸುತ್ತದೆ. ಎರಡು ವರ್ಷ ಮಾತ್ರ ಇರ್ತೀರ ನೀವು, ಯಾಕೆ ಗೂಂಡಾಗಿರಿ ಮಾಡ್ತೀರ?. ಕಾಂಗ್ರೆಸ್ ಔಟ್ ಗೋಯಿಂಗ್ ಪಾರ್ಟಿ ಅಂತ ಜನ ತೀರ್ಮಾನ ಮಾಡಿದ್ದಾರೆ" ಎಂದು ವ್ಯಂಗ್ಯವಾಡಿದರು.

"ಕಾಂಗ್ರೆಸ್​​​​ ಮುಕ್ತ ಭಾರತ ಮಾಡುವುದು ನಮ್ಮ ಅಜೆಂಡಾ. ಮುನಿರತ್ನ ಮೇಲೆ ಆಗಿರುವ ಹಲ್ಲೆ ಪ್ರಜಾಪ್ರಭುತ್ವದ ಮೇಲೆ ಆಗಿರುವ ಹಲ್ಲೆ. ನಾವು ಮುನಿರತ್ನಗೆ ಬೆಂಬಲ ಕೊಡ್ತೀವಿ. ಪೊಲೀಸರು ಅವರಿಗೆ ರಕ್ಷಣೆ ಕೊಡಬೇಕು" ಎಂದು ಆಗ್ರಹಿಸಿದರು.

ಡಿಕೆಶಿ ಕ್ರಮ ಖಂಡನೀಯ-ಅಶ್ವತ್ಥ ನಾರಾಯಣ್: ಡಿಕೆಶಿ ವರ್ಸಸ್ ಮುನಿರತ್ನ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್, "ಬೆಂಗಳೂರಿನ ಆರು ಭಾಗಗಳಲ್ಲಿ ಡಿ.ಕೆ. ಶಿವಕುಮಾರ್​ ಅವರು ಕಾರ್ಯಕ್ರಮ ಮಾಡುತ್ತಿದ್ದಾರೆ ಒಳ್ಳೆಯದು. ಈ ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿನಿಗೆ ಅವಮಾನ ಮಾಡುವುದು, ಹಲ್ಲೆ ಮಾಡುವುದು, ತಿರಸ್ಕಾರ ಮಾಡುವುದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಆಹ್ವಾನ ಕೊಡಲ್ಲ. ಈ ರೀತಿ ಕಾರ್ಯಕ್ರಮ ಮಾಡೋದು ಯಾವ ರೀತಿಯಾಗಿ ಪ್ರಜಾಪ್ರಭುತ್ವನ ಎತ್ತಿ ಹಿಡಿದ ಹಾಗಾಗುತ್ತದೆ?. ಪ್ರಜಾಪ್ರಭುತ್ವದ ಆಶಯಗಳನ್ನು ನೀವು ಕಡೆಗಣಿಸಿದಂತಾಗುತ್ತದೆ. ತಿರಸ್ಕಾರ ಮಾಡಿದ ಹಾಗೆ. ಈ ರೀತಿ ಅವಮಾನ ಮಾಡೋದು ಯಾವುದೇ ಪ್ರಯತ್ನಗಳು ಆಗಬಾರದು" ಎಂದರು.

"ಈ ರೀತಿ ನಡವಳಿಕೆ ಇದ್ದರೆ ಕಾಂಗ್ರೆಸ್​ ಕಾರ್ಯಕರ್ತರಿಗೆ ನೀವು ಸಡಿಲ ಬಿಟ್ಟು ಅವರು ಮನ ಬಂದಂತೆ ಮಾಡೋಕೆ ಇದು ಅವರ ಕಾರ್ಯಕ್ರಮ ಅಲ್ಲ. ಜನರ ಕಾರ್ಯಕ್ರಮ, ಸರ್ಕಾರದ ಕಾರ್ಯಕ್ರಮ ಇದು. ನಿಮ್ಮ ಕಾರ್ಯಕರ್ತರರಿಗೆ ಸ್ಪಷ್ಟ ಸಂದೇಶ ಕೊಡಬೇಕು ಅಂತ ನಾನು ಉಪಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುತ್ತೇನೆ. ಇವತ್ತಿನ ಕಾರ್ಯಕ್ರಮ ಮಹತ್ವ ಕಳೆದುಕೊಂಡಿದೆ. ಇಲ್ಲಿ ಬರೀ ವೈಯಕ್ತಿಕ ಪ್ರತಿಷ್ಠೆ, ದ್ವೇಷ, ವೈಮನಸ್ಸು, ವ್ಯತ್ಯಾಸಗಳು ಎದ್ದು ಕಾಣುತ್ತಿವೆ. ನಿಮ್ಮ ನಡೆ ಸರಿಯಲ್ಲ. ಡಿ.ಕೆ. ಶಿವಕುಮಾರ್​ ಕಾಂಗ್ರೆಸ್​ ಪಾರ್ಟಿ ವರ್ಸಸ್​​ ಮುನಿರತ್ನ ಬಿಜೆಪಿ ಅಂತ ಆಗುತ್ತೆ. ನಿಮ್ಮ ಕಾರ್ಯಕ್ರಮವನ್ನು ನೀವೇ ಸೋಲಿಸುತ್ತೀರಾ. ನಿಮಗೆ ಸಾಕಷ್ಟು ಅನುಭವ ಇದೆ. ನಿಮ್ಮಂತಹವರಿಂದಲೇ ಈ ರೀತಿ ಎಡವಟ್ಟು ಆದರೆ ಹೇಗೆ. ನಿಮ್ಮ ಕಾರ್ಯಕ್ರಮ ಯಶಸ್ವಿಯಾಗಬೇಕು ಅಂದರೆ ಎಲ್ಲರಿಗೂ ಆಹ್ವಾನ ಕೊಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾರು ಮುನಿರತ್ನ ಅವರ ಮೇಲೆ ಹಲ್ಲೆ ಮಾಡಿದ್ದಾರೆ, ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು" ಎಂದು ಒತ್ತಾಯಿಸಿದರು.

    .

ಉದ್ಧಟತನದ ಪರಮಾವಧಿ: ಇದೇ ವಿಚಾರವಾಗಿ ಎಕ್ಸ್​ಪೋಸ್ಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, "ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಳೇಗಾರಿಕೆ ಸಂಸ್ಕೃತಿಗೆ ಜಾಗವಿಲ್ಲ. ಉಪಮುಖ್ಯಮಂತ್ರಿ ಡಿಕೆಶಿ ಅವರು ಜನಪ್ರತಿನಿಧಿಯನ್ನು ಅಪಮಾನಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿಸಿದ್ದಾರೆ. ಶಾಸಕ ಮುನಿರತ್ನ ಅವರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕ ಮುನಿರತ್ನರನ್ನೇ ಆಹ್ವಾನಿಸದೆ, ಶಾಸಕರೊಂದಿಗೆ ಉಡಾಫೆಯಿಂದ ವರ್ತಿಸಿವುದು ಹಾಗೂ ಅವರು ಧರಿಸಿದ್ದ ಆರ್​.ಎಸ್.ಎಸ್. ಗಣವೇಶವನ್ನು ಅಪಮಾನಿಸಿರುವುದು ಉದ್ಧಟತನದ ಪರಮಾವಧಿಯಾಗಿದೆ" ಎಂದು ಖಂಡಿಸಿದ್ದಾರೆ.

"ಡಿ.ಕೆ. ಶಿವಕುಮಾರ್ ಅವರ ಈ ನಡೆ ಸರ್ವಾಧಿಕಾರಿತನವನ್ನು ಪ್ರತಿಬಿಂಬಿಸಿದೆ. ಅಧಿಕಾರ ಶಾಶ್ವತವಲ್ಲ, ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ನೀಡುವ ಭಿಕ್ಷೆ ಎಂಬ ಪರಿಜ್ಞಾನವಿಲ್ಲದೆ ನಡೆದುಕೊಳ್ಳುತ್ತಿರುವ ಅವರ ವರ್ತನೆ ಅತ್ಯಂತ ಖಂಡನೀಯ. ನಿಮ್ಮ ನಡೆ, ನುಡಿ, ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ, ತಕ್ಕ ಉತ್ತರದ ಪಾಠವನ್ನು ಇಷ್ಟರಲ್ಲೇ ನಿಮಗೆ ಕಲಿಸಲಿದ್ದಾರೆ" ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ ಆರ್​ಎಸ್​ಎಸ್​ ಚಟುವಟಿಕೆ ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಪರಿಶೀಲನೆ