ಬಳ್ಳಾರಿ: ಜಿಲ್ಲೆಯ ಕುಡತಿನಿ ಗ್ರಾಮ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೂರನೇ ಘಟಕವು ಬಾಯ್ಲರ್ ಟ್ಯೂಬ್ನ ಸೋರಿಕೆ, ಇತರ ತಾಂತ್ರಿಕ ಸಮಸ್ಯೆಯಿಂದ ಸುಮಾರು ಮೂರು ದಿನಗಳಿಂದ ಕಾರ್ಯ ನಿರ್ವಹಿಸದೇ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಕೇಂದ್ರದಲ್ಲಿ 500 ಮೆಗಾವ್ಯಾಟ್ನ ಎರಡು ಘಟಕಗಳು, 750 ಮೆಗಾವ್ಯಾಟ್ನ ಒಂದು ಘಟಕವಿದೆ. ಕೇಂದ್ರದ ಮೂರು ಘಟಕಗಳಿಂದ ನಿತ್ಯ 1,750 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ, ಮೂರು ದಿನಗಳಿಂದ 3ನೇ ಘಟಕವು ಸ್ಥಗಿತಗೊಂಡಿರುವುದರಿಂದ, ಪ್ರಸ್ತುತ 1,000 ಮೆ.ವ್ಯಾ. ವಿದ್ಯುತ್ ಮಾತ್ರ ಉತ್ಪಾದನೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್‌ಗೆ ಭಾರಿ ಬೇಡಿಕೆಯಿದ್ದು, ಇಂತಹ ಸನ್ನಿವೇಶದಲ್ಲಿ ಬಿಟಿಪಿಎಸ್ ನಲ್ಲಿ ವಾರದಲ್ಲಿ ಎರಡು ಬಾರಿ 3ನೇ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಿದ್ಯುತ್ ಉತ್ಪಾದನೆಯಲ್ಲಿ ನಿರಂತರ ತೊಡಕಾಗಿದೆ. ಒಂದೆಡೆ, ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿ ಜಲವಿದ್ಯುತ್ ಉತ್ಪಾದನೆಯು ಕುಸಿತವಾಗಿದೆ. ವಿದ್ಯುತ್‌ಗಾಗಿ ಶಾಖೋತ್ಪನ್ನ ಕೇಂದ್ರಗಳನ್ನೇ ಅವಲಂಬಿಸಲಾಗಿದ್ದು, ನಿಗಮವು ಅಗತ್ಯ ವಿದ್ಯುತ್ ಬೇಡಿಕೆಯನ್ನು ಪೂರೈಸಲಾಗದೇ ಒತ್ತಡದಲ್ಲಿ ಸಿಲುಕಿದೆ.
ಅಧಿಕಾರಿ ಪ್ರತಿಕ್ರಿಯೆ: ಘಟಕವೊಂದರಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡ ಬಗ್ಗೆ ಬಿಟಿಪಿಎಸ್ ಹಿರಿಯ ತಾಂತ್ರಿಕ ನಿರ್ದೇಶಕ ಕೃಷ್ಣಮೂರ್ತಿ ಪ್ರತಿಕ್ರಿಯಿಸಿದ್ದು, ''ಬಿಟಿಪಿಎಸ್ನ 3ನೇ ಘಟಕದಲ್ಲಿ ಬಾಯ್ಲರ್ ಟ್ಯೂಬ್ನ ಸೋರಿಕೆ, ಇತರ ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆಯು ತಾತ್ಕಲಿಕವಾಗಿ ಸ್ಥಗಿತಗೊಂಡಿದೆ. ಘಟಕವನ್ನು ದುರಸ್ತಿಗೊಳಿಸಿ, ಶೀಘ್ರದಲ್ಲೇ ಪುನರ್ ಆರಂಭಿಸಲಾಗುವುದು'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಾವೇರಿ: ವಂದೇ ಭಾರತ್ ರೈಲು ಟಿಕೆಟ್ ಬುಕ್ಕಿಂಗ್‌ಗೆ ಪ್ರಯಾಣಿಕರ ಪರದಾಟ