ರಾಮನಗರ: ಕೊಂಡ ಹಾಯುವಾಗ ಅರ್ಚಕರೊಬ್ಬರು ಆಯತಪ್ಪಿ ಕೆಂಡದಲ್ಲಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಡಿಹಳ್ಳಿ ಸಮೀಪ ಇರುವ ಪಟ್ಟದಾಲಮ್ಮ ದೇವರ ಕೊಂಡೋತ್ಸವದಲ್ಲಿ ಈ ಘಟನೆ ನಡೆದಿದೆ. ಭಾನುವಾರ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ಅರ್ಚಕ ಗಂಭೀರವಾಗಿ ಗಾಯಗೊಂಡಿದ್ದಾರೆ. 50 ವರ್ಷದ ಕರಿಯಪ್ಪ ಗಾಯಗೊಂಡಿರುವ ಅರ್ಚಕ. ಗ್ರಾಮದ ಪಟ್ಟದಾಲಮ್ಮ ದೇವಿಯ ಕೊಂಡ ಹಾಯುವಾಗ ಈ ಘಟನೆ ಜರುಗಿದೆ. ಗಾಯಾಳು ಅರ್ಚಕನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇತಿಹಾಸ ಪ್ರಸಿದ್ಧ ದೇಗುಲ: ಪಟ್ಟದಾಲಮ್ಮ ದೇಗುಲ ಇತಿಹಾಸ ಪ್ರಸಿದ್ಧ ದೇವಾಲಯ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪ್ರತಿ ವರ್ಷ ಕೊಂಡೋತ್ಸವಕ್ಕೆ ಆಗಮಿಸುತ್ತಾರೆ. ಈ ದೇಗುಲದಲ್ಲಿ ಯಾವುದೇ ಹರಕೆ ಇಟ್ಟುಕೊಂಡರೂ ಕೂಡ ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಕೂಡ ಆಗಮಿಸುತ್ತಾರೆ. ಪ್ರತಿ ವರ್ಷದಂತೆ ಇಂದು ನಡೆದ ಕೊಂಡೋತ್ಸವ ಕಾರ್ಯಕ್ರಮದಲ್ಲಿ ಅರ್ಚಕರು ಆಯತಪ್ಪಿ ಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಂಡಕ್ಕೆ ಬೀಳುವ ಅರ್ಚಕರ ಸಂಖ್ಯೆ ಹೆಚ್ಚಳ: ಪ್ರತಿ ವರ್ಷ ಕನಕಪುರ ತಾಲೂಕಿನಲ್ಲಿ ವಿವಿಧೆಡೆ ನಡೆಯುವ ಜಾತ್ರಾ ಮಹೋತ್ಸವ ವೇಳೆ ಕೊಂಡದಲ್ಲಿ ನಡೆಯುವಾಗ ಆಯತಪ್ಪಿ ಬೀಳುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ವರ್ಷ ಕೂಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊಂಡದಲ್ಲಿ ಹಲವು ಅರ್ಚಕರು ಬಿದ್ದು ಗಾಯಗೊಂಡ ಪ್ರಕರಣಗಳು ವರದಿಯಾಗಿದ್ದವು. ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಭದ್ರತೆ ತೆಗೆದುಕೊಳ್ಳಬೇಕಿದೆ ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ಇದನ್ನೂ ಓದಿ: Watch.. ಮುಳ್ಳಿನ ಪೊದೆಗೆ ಹಾರುವ ಭಕ್ತರು ; ಇದು ಮಾರಮ್ಮನ ಜಾತ್ರೆಯ ವಿಶೇಷ