ಉಳ್ಳಾಲ(ದಕ್ಷಿಣ ಕನ್ನಡ): ಖಾಸಗಿ ಸಂಸ್ಥೆಯ ವಿದ್ಯಾರ್ಥಿಗಳಿದ್ದ ದೇರಳಕಟ್ಟೆ ಜಂಕ್ಷನ್ನಿನಲ್ಲಿರುವ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ತಗಲಿದ್ದು, ಕಟ್ಟಡದೊಳದ್ದ 140 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.
ಇಂದು ಸಂಜೆ 7.45 ರ ಹೊತ್ತಿಗೆ ಕಟ್ಟಡದ ನೆಲಮಹಡಿಯಲ್ಲಿರುವ ಸ್ವಿಚ್ ಬೋರ್ಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ ಹರಡಲು ಆರಂಭವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸ್ಥಳೀಯರು ಎದುರುಗಡೆಯಿದ್ದ ಪೆಟ್ರೋಲ್ ಪಂಪ್ ನಿಂದ ಬೆಂಕಿ ನಂದಿಸಲು ಉಪಯೋಗಿಸುವ ಸಾಮಗ್ರಿಗಳ ಸಹಾಯದಿಂದ ಬೆಂಕಿ ನಂದಿಸಲು ಆರಂಭಿಸಿದ್ದಾರೆ. ತಕ್ಷಣ ಕಟ್ಟಡದ ಮೇಲಿದ್ದ 140 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರ ತಂದಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ತಡವಾಗಿ ಆಗಮಿಸಿದ್ದರಿಂದಾಗಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಅದಾಗಲೇ ಭಾಗಶ: ಬೆಂಕಿಯನ್ನು ನಂದಿಸುವಲ್ಲಿ ಸ್ಥಳೀಯರು ಸಫಲರಾಗಿದ್ದು, ವಿದ್ಯಾರ್ಥಿಗಳರೆಲ್ಲರನ್ನೂ ಶಿಕ್ಷಣ ಸಂಸ್ಥೆ ಬೇರೆ ವಿದ್ಯಾರ್ಥಿ ನಿಲಯಗಳಿಗೆ ಸ್ಥಳಾಂತರಿಸಿದ್ದಾರೆ. ವೇಣುಗೋಪಾಲ್ ಶೆಟ್ಟಿ ಎಂಬವರಿಗೆ ಸೇರಿದ ವೆಂಕಟ್ ರೆಸಿಡೆನ್ಸಿ ಐದು ಮಹಡಿಯ ಕಟ್ಟಡದ ಕೆಳಗಿನ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಕೆಳಗಿನ ವಿದ್ಯುತ್ ಬೋರ್ಡ್ಗಳೆಲ್ಲವೂ ಸಂಪೂರ್ಣ ಸುಟ್ಟುಹೋಗಿವೆ.

ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. 140 ವಿದ್ಯಾರ್ಥಿಗಳನ್ನು ಖಾಸಗಿ ಸಂಸ್ಥೆಯವರೇ ಸ್ಥಳಾಂತರ ಮಾಡಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಪುಟ್ಟರಾಜು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಅಗ್ನಿ ಶಾಮಕ ದಳ ಹಾಗೂ ಕೊಣಾಜೆ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾದರು.