ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಕಾರ್ತಿಕೇಶ್ ನೀಡಿರುವ ದೂರಿನ ಅನ್ವಯ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತಾಯಿ ಪಲ್ಲವಿ ಹಾಗೂ ಸಹೋದರಿ ಕೃತಿ ಅವರ ಮೇಲೆ ಶಂಕೆ ವ್ಯಕ್ತಪಡಿಸಿ ಕಾರ್ತಿಕೇಶ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ವಿವರ: ''ನಮ್ಮ ತಾಯಿ ಪಲ್ಲವಿ ಅವರು ಒಂದು ವಾರದಿಂದಲೂ ತಂದೆ ಓಂ ಪ್ರಕಾಶ್‌ಗೆ ಕೊಲೆ ಬೆದರಿಕೆ ಹಾಕುತ್ತಿದ್ದರಿಂದ, ತಂದೆಯವರು ಅವರ ಸಹೋದರಿ ಸರೀತಾ ಕುಮಾರಿ ಅವರ ಮನೆಗೆ ಹೋಗಿದ್ದರು. 2 ದಿನಗಳ ಹಿಂದಷ್ಟೇ ನನ್ನ ಸಹೋದರಿ ಕೃತಿ, ಸರಿತಾ ಕುಮಾರಿಯವರ ಮನೆಗೆ ತೆರಳಿ ನಮ್ಮ ತಂದೆಯನ್ನು ಮರಳಿ ಮನೆಗೆ ಬರುವಂತೆ ಪೀಡಿಸಿ ಕರೆದುಕೊಂಡು ಬಂದಿದ್ದಳು. ಹೀಗಿರುವಾಗ ಭಾನುವಾರ ನಾನು ದೊಮ್ಮಲೂರಿನಲ್ಲಿರುವ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನಲ್ಲಿರುವಾಗ ಸಂಜೆ 5 ಗಂಟೆಗೆ ನಮ್ಮ ಪಕ್ಕದ ಮನೆಯ ನಿವಾಸಿಯಾದ ಜಯಶ್ರೀ ಶ್ರೀಧರನ್ ಅವರು ಕರೆಮಾಡಿ 'ನಿಮ್ಮ ತಂದೆ ಓಂ ಪ್ರಕಾಶ್ ಅವರ ದೇಹ ಕೆಳಗಡೆ ಬಿದ್ದಿದೆ'' ಎಂದು ತಿಳಿಸಿದರು ಎಂದು ದೂರಿನಲ್ಲಿ ಕಾರ್ತಿಕೇಶ್ ವಿವರಿಸಿದ್ದಾರೆ.
ಇದನ್ನೂ ಓದಿ: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆ
''ನಾನು ಸಂಜೆ 5:45ರ ಸುಮಾರಿಗೆ ಮನೆಗೆ ತೆರಳಿ ನೋಡಿದಾಗ ಮನೆ ಬಳಿ ಪೊಲೀಸರು, ಸಾರ್ವಜನಿಕರು ಇದ್ದರು. ನನ್ನ ತಂದೆ ಓಂ ಪ್ರಕಾಶ್ ಅವರ ತಲೆಗೆ ಮತ್ತು ಮೈತುಂಬ ರಕ್ತಸಿಕ್ತವಾಗಿದ್ದು, ದೇಹದ ಪಕ್ಕದಲ್ಲಿ ಒಡೆದಿರುವ ಬಾಟಲ್ ಹಾಗೂ ಚಾಕು ಇತ್ತು. ನಂತರ ಮೃತದೇಹವನ್ನು ಸೈಂಟ್ ಜಾನ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ನನ್ನ ತಾಯಿ ಪಲ್ಲವಿ ಹಾಗೂ ತಂಗಿ ಕೃತಿ ಅವರು ಖಿನ್ನತೆಯಿಂದ ಬಳಲುತ್ತಿದ್ದು, ಪ್ರತಿನಿತ್ಯ ತಂದೆಯೊಂದಿಗೆ ಜಗಳವಾಡುತ್ತಿದ್ದರು'' ಎಂದು ದೂರಿನಲ್ಲಿ ವಿವರಿಸಿರುವ ಕಾರ್ತಿಕೇಶ್, ''ತಾಯಿ ಮತ್ತು ಸಹೋದರಿಯೇ ನನ್ನ ತಂದೆಯನ್ನು ಹತ್ಯೆಗೈದಿರುವ ಶಂಕೆಯಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು'' ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಾಯುವ ಗಂಟೆಗೂ ಮುನ್ನ ಓಂ ಪ್ರಕಾಶ್ ಜೊತೆ ಮಾತನಾಡಿದ್ದ ಇನ್ಸ್‌ಪೆಕ್ಟರ್ ಹೇಳಿದ್ದೇನು?
ಸದ್ಯ ಪಲ್ಲವಿ ಹಾಗೂ ಅವರ ಪುತ್ರಿ ಕೃತಿ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯಾಹ್ನದ ನಂತರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಿವೃತ್ತ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಹತ್ಯೆ ಪ್ರಕರಣ ; ಇಂದು ಅಂತಿಮ ವಿಧಿ ವಿಧಾನ