ವಿಶೇಷ ವರದಿ: ಹೆಚ್.ಬಿ.ಗಡ್ಡದ
ಹುಬ್ಬಳ್ಳಿ: ಪ್ರಧಾನ ಮಂತ್ರಿ ಇ-ಬಸ್ (ಪಿಎಂ ಇ-ಬಸ್) ಸೇವಾ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆಯ ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ಆಯ್ಕೆಯಾಗಿದೆ. ಈ ಎರಡು ನಗರಗಳಿಗೆ ತಲಾ 100 ವಿದ್ಯುತ್ ಬ್ಯಾಟರಿ ಚಾಲಿತ ಬಸ್‌ಗಳ ಪೂರೈಕೆಯಾಗಲಿದ್ದು, ಎಲೆಕ್ಟ್ರಿಕ್ ಬಸ್‌ಗಳು ಹುಬ್ಬಳ್ಳಿ - ಬೆಳಗಾವಿ ನಗರಗಳಲ್ಲಿ ಸಂಚರಿಸಲಿವೆ.
ಈ ಎರಡು ನಗರಗಳು ಬೆಳೆದಂತೆ ನಗರ ಸಾರಿಗೆಗೆ ಒತ್ತುಕೊಡುವುದು ಸಾರಿಗೆ ಇಲಾಖೆಯ ಪ್ರಮುಖ ಆದ್ಯತೆ. ಹೀಗಾಗಿ ವಾಯುವ್ಯ ಸಾರಿಗೆ ಸಂಸ್ಥೆ ನಷ್ಟದಿಂದ ತಪ್ಪಿಸಿಕೊಳ್ಳಲು ಎಲೆಕ್ಟ್ರಿಕ್ ಬಸ್ಗಳಿಗೆ ಆಸಕ್ತಿ ವಹಿಸಲಾಗಿತ್ತು. 2017-18ರಿಂದಲೂ ವಾಕರಸಾ ಸಂಸ್ಥೆ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಕಾರ್ಯಗತಗೊಂಡಿರಲಿಲ್ಲ.
2023-24ರಲ್ಲಿ ಟೆಂಡರ್ ಪ್ರಕ್ರಿಯೆ ಕೈಗೊಂಡಿತ್ತಾದರೂ ವಾಕರಸಾ ಸಂಸ್ಥೆ ಮತ್ತು ಟೆಂಡರ್‌ದಾರರ ಮಧ್ಯೆ ದರಗಳಲ್ಲಿ ಭಾರಿ ವ್ಯತ್ಯಾಸ ಉಂಟಾಗಿತ್ತು. 1ಕಿಮೀ ಗೆ 20-25 ರೂ. ದುಬಾರಿಯಾಗುತ್ತಿತ್ತು. ಇದು ಸಂಸ್ಥೆಗೆ ದೊಡ್ಡ ಹೊರೆಯಾಗಲಿದೆ ಎಂದುಕೊಂಡು ಯೋಜನೆ ಕೈ ಬಿಟ್ಟ ವಾಕರಸಾ ಸಂಸ್ಥೆಯು ಪಿಎಂಇ-ಬಸ್ ಸೇವಾ ಯೋಜನೆಗೆ ಮೊರೆ ಹೋಗಿತ್ತು. ಇದೀಗ ಕೇಂದ್ರ ಸರ್ಕಾರ ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಿಗೆ ಅನುಮೋದನೆ ನೀಡಿದ್ದು, ಮೂಲಸೌಕರ್ಯ ಒದಗಿಸಲು ಸಜ್ಜು ಮಾಡಿಕೊಳ್ಳುವಂತೆ ಸಲಹೆ ಮಾಡಿದೆ.
ಪಿಎಂ ಇ- ಬಸ್ ಏಕೆ?: ಹವಾಮಾನ ವೈಪರೀತ್ಯ ಹಾಗೂ ಇಂಗಾಲ ಹೊರಸೂಸುವಿಕೆ - ತಡೆಯುವುದು ಹಾಗೂ ಏರುತ್ತಿರುವ ಜಾಗತಿಕ ತಾಪಮಾನ ನಿಯಂತ್ರಿಸಲು ಎಲೆಕ್ಟ್ರಿಕ್ ಚಾಲಿತ ಬಸ್‌ಗಳ ಸೇವೆಗೆ ಕೇಂದ್ರ ಸರಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಇದರ ಭಾಗವಾಗಿ ಸಾರಿಗೆ ಸಂಸ್ಥೆಗಳಿಗೆ ಸಬ್ಸಿಡಿ ಆಧಾರಿತ ಎಲೆಕ್ಟ್ರಿಕ್ ಬಸ್ ಒದಗಿಸುವುದೇ ಪಿಎಂ ಇ-ಬಸ್ ಸೇವಾ ಯೋಜನೆ.
ಸಬ್ಸಿಡಿ ಲಾಭ ಪಡೆಯುವ ಸಲುವಾಗಿ ವಾಕರಸಾ ಸಂಸ್ಥೆ ಮೂರು ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ, ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಿಗೆ ತಲಾ 100 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲಿದೆ. ಎಲೆಕ್ಟ್ರಿಕ್ ಬಸ್‌ಗಳನ್ನು ಉತ್ಪಾದಿಸುವ ಕಂಪನಿಗಳನ್ನ ಸರ್ಕಾರವೇ ಗೊತ್ತುಪಡಿಸಲಿದ್ದು, ಕಂಪನಿಯು ಗ್ರಾಸ್ ಕಾಸ್ಟ್ ಕಾಂಟ್ರ್ಯಾಕ್ಟ್ (ಜಿಸಿಸಿ) ಮಾದರಿಯಲ್ಲಿ ಬಸ್‌ಗಳ ಸೇವೆ ನೀಡಲಿವೆ.
ವಾಕರಸಾ ಸಂಸ್ಥೆ ಎಂಡಿ ಪ್ರಿಯಾಂಗ ಏನಂತಾರೆ?: ಪಿಎಂ ಇ -ಬಸ್ ಯೋಜನೆ ಕುರಿತಂತೆ ವಾಕರಸಾ ಸಂಸ್ಥೆ ಎಂಡಿ ಪ್ರಿಯಾಂಗ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, "ಪಿಎಂ ಇ- ಸೇವಾ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದಕ್ಕೆ ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ಆಯ್ಕೆಯಾಗಿದೆ. ಇದರಿಂದ ಹುಬ್ಬಳ್ಳಿ - ಧಾರವಾಡಕ್ಕೆ 100 ಬಸ್ ಹಾಗೂ ಬೆಳಗಾವಿ ನಗರಕ್ಕೆ 100 ಬಸ್ ಹಂಚಿಕೆಯಾಗಲಿವೆ. ಜಿಸಿಸಿ ಮಾದರಿಯಲ್ಲಿ ಕೇಂದ್ರ ಸರ್ಕಾರವೇ ಬಸ್ ಖರೀದಿಸಿ ಕೊಡಲಿದೆ. ಸಂಸ್ಥೆಯಿಂದ ಡಿಪೋ ಹಾಗೂ ಬಸ್ ಚಾರ್ಜಿಂಗ್ ಬೇಕಾದಂತೆ ಸೌಲಭ್ಯ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಸ್ಥಳ ಗುರುತಿಸಲಾಗಿದೆ. ಅದರ ಡಿಪಿಆರ್ ಕೂಡ ಸಲ್ಲಿಕೆ ಮಾಡಲಾಗಿದೆ. ಅದಕ್ಕೆ ಅನುಮೋದನೆ ಸಿಗುವ ವಿಶ್ವಾಸವಿದೆ" ಎಂದರು.
ಏನಿದು ಜಿಸಿಸಿ ಮಾದರಿ?: ಬಸ್ ಸಂಚಾರ ಸೇವೆ, ಡ್ರೈವರ್‌ಗಳು, ಚಾರ್ಜಿಂಗ್ ಸ್ಟೇಷನ್‌ಗಳನ್ನು ಗುತ್ತಿಗೆ ಕಂಪನಿಯೇ ನಿರ್ವಹಿಸಲಿದೆ. ವಿದ್ಯುತ್ ಸಂಪರ್ಕ ಮತ್ತು ಜಾಗವನ್ನು ವಾಕರಸಾ ಸಂಸ್ಥೆ ಒದಗಿಸಲಿದೆ. ಕಿಮೀ ಲೆಕ್ಕದಲ್ಲಿ ಸಂಸ್ಥೆಯು ಕಂಪನಿಗೆ ಹಣ ಪಾವತಿಸಲಿದೆ. ಕಂಡಕ್ಟರ್ಗಳನ್ನು ವಾಕರಸಾ ಸಂಸ್ಥೆ ಒದಗಿಸಲಿದೆ.
ಸಬ್ಸಿಡಿ ಎಷ್ಟು?: "ಪಿಎಂ ಇ-ಬಸ್ ಸೇವಾ ಯೋಜನೆಯಡಿ ಕೇಂದ್ರ ಸರ್ಕಾರವು ಕಿಮೀಗೆ 24 ರೂ.ಸಬ್ಸಿಡಿ ಮೊತ್ತ ನೀಡಲಿದೆ. ಉಳಿದ ಮೊತ್ತವನ್ನು ವಾಕರಸಾ ಸಂಸ್ಥೆಗಳು ಭರಿಸಲಿವೆ. ಈ ಹಿಂದೆ ಫೇಮ್ ಯೋಜನೆಯಲ್ಲಿ ವಾಹನ ಒದಗಿಸುವ ಕಂಪನಿಗಳಿಗೆ 75-80 ರೂ.ದರ ನೀಡಬೇಕಿತ್ತು. ಇದು ಹೊರೆಯಾಗಲಿದೆ ಎಂದು ಸಂಸ್ಥೆಯು ಯೋಜನೆಯನ್ನೇ ಕೈ ಬಿಟ್ಟಿತ್ತು. ಈಗ ಸರ್ಕಾರವೇ 24 ರೂ. ಸಬ್ಸಿಡಿ ನೀಡುವುದರಿಂದ ಹೊರೆ ತಗ್ಗಲಿದ್ದು, ಸಂಸ್ಥೆಗೂ ಹೊರೆಯಾಗದು. ಹೀಗಾಗಿ ಪಿಎಂ ಇ-ಬಸ್ ಸೇವಾ ಯೋಜನೆಯಡಿ ಬಸ್ ಸೇವೆ ಪಡೆಯಲಿದ್ದೇವೆ" ಎಂದು ಪ್ರಿಯಾಂಗ ತಿಳಿಸಿದರು.
ಹೊಸ ಡಿಪೋ ಎಲ್ಲೆಲ್ಲಿ?: "ಟೆಂಡರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಂಪನಿ ಬಸ್‌ಗಳನ್ನು ಒದಗಿಸಲಿವೆ. ಹೀಗಾಗಿ ಹುಬ್ಬಳ್ಳಿ ಗೋಕುಲ್ ರೋಡ್ ಹಾಗೂ ಬೆಳಗಾವಿ ಬಸ್ ನಿಲ್ದಾಣದ ಹಿಂದುಗಡೆ ಜಾಗ ಗುರುತಿಸಲಾಗಿದೆ. ಮುಂದಿನ ಹಂತದ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಾಗಿದೆ. ಮೂಲ ಸೌಕರ್ಯಗಳು ಏನೆಲ್ಲ ಬೇಕು ಎಂಬ ಮಾಹಿತಿ ಜೊತೆಗೆ ಹೆಸ್ಕಾಂನಿಂದಲೂ ಅನುಮತಿ ಪಡೆಯಲಾಗಿದೆ. ಸರ್ಕಾರ ಅನುಮತಿ ನೀಡಿದ ತಕ್ಷಣ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿ - ತುಳಜಾಪುರ ನಡುವೆ ರಾಜಹಂಸ ಬಸ್ ವ್ಯವಸ್ಥೆ