ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ನಾಡಿನ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಯಾತ್ರಿಕನೊಬ್ಬನ ಮೇಲೆ ಕೊಠಡಿ ನಿರ್ವಾಹಕರ ಗುಂಪೊಂದು ಅಮಾನವೀಯವಾಗಿ ಹಲ್ಲೆ ನಡೆಸಿದೆ. ಈ ಘಟನೆ ಜೂನ್ 7ರಂದು ನಡೆದಿದೆ. ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವಕನೊಬ್ಬ ಆದಿ ಸುಬ್ರಹ್ಮಣ್ಯ ಪ್ರದೇಶದಲ್ಲಿ ವಸತಿಗಾಗಿ ಕೊಠಡಿಯೊಂದನ್ನು ವೀಕ್ಷಿಸಿದ್ದಾನೆ. ಆದರೆ, ಕಾರಣಾಂತರಗಳಿಂದ ಆ ಕೊಠಡಿಯನ್ನು ಬಾಡಿಗೆಗೆ ಪಡೆಯಲು ನಿರಾಕರಿಸಿ, ಅಲ್ಲಿಂದ ಹೊರನಡೆದಿದ್ದಾನೆ. ಇದೇ ಕಾರಣಕ್ಕೆ ಕೆರಳಿದ ಕೊಠಡಿ ನಿರ್ವಾಹಕರ ತಂಡ, ಯುವಕನನ್ನು ಅಡ್ಡಗಟ್ಟಿ ವಾಗ್ವಾದಕ್ಕಿಳಿದಿದೆ. ಕೊಠಡಿ ನೋಡಿ ಸುಮ್ಮನೆ ಹೋಗುತ್ತೀಯಾ ಎಂದು ದರ್ಪದಿಂದ ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು ಯುವಕನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಯುವಕನ ಕೆನ್ನೆಗೆ ಬಾರಿಸುವ ದೃಶ್ಯಗಳು ವೀಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
'ಅಕ್ರಮ ಬಾಡಿಗೆ ದಂಧೆಯ ಕರಾಳ ಮುಖ': ಈ ಘಟನೆಯಿಂದಾಗಿ ಸುಬ್ರಹ್ಮಣ್ಯದಲ್ಲಿ ತೆರೆಮರೆಯಲ್ಲಿ ವಾಣಿಜ್ಯ ಮಾಫಿಯಾ ನಡೆಯುತ್ತಿದೆಯೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಇದೊಂದು ಕೇವಲ ಒಂದು ಆಕಸ್ಮಿಕ ಜಗಳವಲ್ಲ, ಬದಲಿಗೆ ಸುಬ್ರಹ್ಮಣ್ಯದಲ್ಲಿ ಬೇರೂರುತ್ತಿರುವ ಅಕ್ರಮ ಬಾಡಿಗೆ ದಂಧೆಯ ಕರಾಳ ಮುಖವನ್ನು ಅನಾವರಣಗೊಳಿಸಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹೊರಗಿನಿಂದ ಬಂದ ಕೆಲವರು ಇಲ್ಲಿನ ಕೆಲವು ಕೊಠಡಿಗಳನ್ನು ಗುತ್ತಿಗೆಗೆ ಪಡೆದು, ಹೆಚ್ಚಿನ ಬಾಡಿಗೆಗೆ ನೀಡುವ ಮೂಲಕ ಯಾತ್ರಿಕರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ. ತಮ್ಮ ವ್ಯವಹಾರಕ್ಕೆ ಅಡ್ಡಿಯಾದರೆ ಅಥವಾ ನಿರೀಕ್ಷಿತ ಲಾಭ ಬಾರದಿದ್ದರೆ, ಈ ರೀತಿ ಗೂಂಡಾಗಿರಿಗೆ ಇಳಿಯುತ್ತಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇಂತಹ ಮಾಫಿಯಾಗಳು ಪುಣ್ಯ ಕ್ಷೇತ್ರದ ಹೆಸರಿಗೂ ಮಸಿ ಬಳಿಯುತ್ತಿವೆ.
ಸಾರ್ವಜನಿಕರ ಆಕ್ರೋಶ ಮತ್ತು ಆಗ್ರಹ: ಶಾಂತಿ, ನೆಮ್ಮದಿ ಮತ್ತು ಭಕ್ತಿಗಾಗಿ ದೇಶ-ವಿದೇಶಗಳ ನಾನಾ ಭಾಗಗಳಿಂದ ಬರುವ ಯಾತ್ರಿಕರಿಗೆ ಇಲ್ಲಿ ರಕ್ಷಣೆ ಇಲ್ಲವಾಗಿದೆ. ಹಣದಾಸೆಗೆ ಅಮಾಯಕರ ಮೇಲೆ ಹಲ್ಲೆ ನಡೆಸುವುದು ಯಾವ ನ್ಯಾಯ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ನೂತನ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಮಧ್ಯ ಪ್ರವೇಶಿಸಿ, ಹಲ್ಲೆ ನಡೆಸಿದ ಗೂಂಡಾಗಳನ್ನು ಬಂಧಿಸಬೇಕು. ಈ ಘಟನೆಯ ಹಿಂದೆ ಇರುವ ಅಕ್ರಮ ಕೊಠಡಿ ದಂಧೆಕೋರರ ಜಾಲವನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಕುಕ್ಕೆ ಸುಬ್ರಹ್ಮಣ್ಯದ ಪಾವಿತ್ರ್ಯತೆಯನ್ನು ಉಳಿಸಿ, ಯಾತ್ರಿಕರಿಗೆ ಸುರಕ್ಷಿತ ಮತ್ತು ನಿರ್ಭೀತ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಭಕ್ತಾದಿಗಳು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನಿಗೆ ಹಲ್ಲೆ ಮಾಡಿದ ಆರೋಪಿ ಶಂಕರ್ ಎಂಬಾತನ ವಿರುದ್ದ ದಿನಾಂಕ ಜೂನ್ 10ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ:31/2025 ಕಲಂ:126(2),115(2),352 BNS ರಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ನಡೆಯುತ್ತಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ: ಭಕ್ತರಿಗೆ ಬೆಳಗಿನ ಉಪಹಾರ ವ್ಯವಸ್ಥೆಗೆ ಚಾಲನೆ - KUKKE SUBRAHMANYA MORNING PRASAD