ಬೆಂಗಳೂರು: ಡಾ.ಎಂ.ಎ.ಸಲೀಂ ಅವರನ್ನು ಕರ್ನಾಟಕ ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾ ನಿರೀಕ್ಷಕರು (ಡಿಜಿ ಮತ್ತು ಐಜಿಪಿ) ಆಗಿ ನೇಮಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಸುಪ್ರೀಂ ಕೋರ್ಟ್ನ ನಿಯಮಗಳನ್ನು ಉಲ್ಲಂಘಿಸಿ ಡಾ.ಎಂ.ಎ.ಸಲೀಂ ಅವರನ್ನು ಡಿಜಿ ಮತ್ತು ಐಜಿಪಿಯನ್ನಾಗಿ ನೇಮಕ ಮಾಡಿ ಹೊರಡಿಸಿರುವ ಆದೇಶ ರದ್ದುಪಡಿಸಲು ಕೋರಿ ವಕೀಲರಾದ ವಕೀಲೆ ಸುಧಾ ಕಟ್ವಾ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.
ಅರ್ಜಿಯಲ್ಲೇನಿದೆ ? ರಾಜ್ಯ ಸರ್ಕಾರ ಸಲೀಮ್ ಅವರನ್ನು ಡಿಜಿಐಜಿಪಿಯನ್ನಾಗಿ ನೇಮಕ ಮಾಡಿ ಮೇ 5ರಂದು ಹೊರಡಿಸಿರುವ ಅಧಿಸೂಚನೆ ಸುಪ್ರೀಂಕೋರ್ಟ್ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರಕಾಶ್ ಸಿಂಗ್ ಅವರ ಪ್ರಕರಣ ಮತ್ತು ನಂತರದ ಆದೇಶಗಳಲ್ಲಿ, ನಿಯಮಿತ ಡಿಜಿಪಿ ಯನ್ನು ಕೇಂದ್ರೀಯ ಲೋಕಸೇವಾ ಆಯೋಗದಿಂದ (ಯುಪಿಎಸ್ಸಿ) ಮೂರು ಹಿರಿಯ ಅಧಿಕಾರಿಗಳ ಪ್ಯಾನಲ್ನಿಂದ ಆಯ್ಕೆ ಮಾಡಬೇಕು. ಇದು ಮೆರಿಟ್, ಸೇವಾ ಹಿರಿತನ ಮತ್ತು ಅನುಭವದ ಆಧಾರದ ಮೇಲೆ ಇರಬೇಕು ಮತ್ತು ಅವರಿಗೆ ಕನಿಷ್ಠ ಎರಡು ವರ್ಷಗಳ ಅಧಿಕಾರಾವಧಿ ಇರಬೇಕು. ಜತೆಗೆ, 'ಕಾರ್ಯಕಾರಿ' ಅಥವಾ 'ಪ್ರಭಾರ' ಡಿಜಿಪಿಗಳ ನೇಮಕಾತಿ ಮಾಡುವುದಕ್ಕೆ ಸುಪ್ರೀಂಕೋರ್ಟ್ ನಿಷೇಧಿಸಿದೆ. ಅಂತಹ ಪರಿಕಲ್ಪನೆಯೇ ಇಲ್ಲವಾಗಿದೆ.
ಸಲೀಂ ಅವರನ್ನು ನೇಮಕ ಮಾಡಿರುವ ಸಂಬಂಧ ಯುಪಿಎಸ್ಸಿಯಿಂದ ಮಾಹಿತಿ ಹಕ್ಕು ಕಾಯಿದೆಯಡಿ(ಆರ್ಟಿಐ) ಮಾಹಿತಿ ಪಡೆಯಲಾಗಿದ್ದು, ನೇಮಕ ಪ್ರಕ್ರಿಯೆಯಲ್ಲಿ ಲೋಪವಿದೆ ಎಂಬ ಅಂಶ ಗೊತ್ತಾಗಿದೆ.
ಹೀಗಾಗಿ ರಾಜ್ಯ ಸರ್ಕಾರ ಯುಪಿಎಸ್ಸಿ ಎಂಪ್ಯಾನೆಲ್ ಪ್ರಕ್ರಿಯೆಯನ್ನು ಉಲ್ಲಂಘಿಸಿ ಪ್ರಭಾರ ಡಿಜಿಪಿಯನ್ನು ನೇಮಕ ಮಾಡಿದೆ. ಇದು ರಾಜಕೀಯ ಪರಿಗಣನೆಗಳ ಆಧಾರದ ಮೇಲೆ ಇದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಜೊತೆಗೆ, ಪ್ರಭಾರ ನೇಮಕಾತಿ ತಕ್ಷಣವೇ ಹಿಂತೆಗೆದುಕೊಳ್ಳಬೇಕು. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಕಟ್ಟುನಿಟ್ಟಾಗಿ ನಿಯಮಿತ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಲಾಗಿದೆ.
ಇದನ್ನೂ ಓದಿ: ಸಹೋದ್ಯೋಗಿಗಳಿಗೆ ಸುದೀರ್ಘ ಪತ್ರ ಬರೆದ ನೂತನ ಡಿಜಿ & ಐಜಿಪಿ ಡಾ ಎಂ.ಎ. ಸಲೀಂ