ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಸಾವಯವ ಮಾವು ಮತ್ತು ಹಲಸಿನ ಹಣ್ಣಿನ ತಳಿಗಳು, ಅವುಗಳಿಂದ ಮಾಡಿದ ಅಡುಗೆ ಮತ್ತು ಇತರ ಮೌಲ್ಯವರ್ಧಿತ ಪದಾರ್ಥಗಳನ್ನು ಗ್ರಾಹಕರಿಗೆ ಪರಿಚಯಿಸಲು ಲಾಲ್‌ಬಾಗ್‌ನಲ್ಲಿ ಮೂರು ದಿನಗಳ ಕಾಲ ಸಾವಯವ ಮಾವು ಮತ್ತು ಹಲಸು ಹಣ್ಣು ಹಾಗೂ ಸಸಿಗಳ ಮಾರಾಟ, ಪ್ರದರ್ಶನ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಜೈವಿಕ್ ಕೃಷಿಕ್ ಸೊಸೈಟಿಯಿಂದ ಲಾಲ್ಬಾಗ್ನ ಡಾ.ಎಂ.ಎಚ್. ಮರೀಗೌಡ ಸಭಾಂಗಣದಲ್ಲಿ ಮೇ.23 ರಿಂದ 25 ರವರೆಗೂ ಮೇಳ ನಡೆಯಲಿದೆ.
ಮೇಳಕ್ಕೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್ ಮೇಳ ಉದ್ಘಾಟಿಸಿದರು. ಬಳಿಕ ಕೃಷಿಕರು ನೈಸರ್ಗಿಕವಾಗಿ ಬೆಳೆದ ಮಾವು ಮತ್ತು ಹಲಸಿನ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಹಾಗೂ ಆಹಾರ ಮಳಿಗೆಗಳಿಗೆ ಭೇಟಿ ನೀಡಿ ಸಾವಯವ ಕೃಷಿ ಮಾಡುತ್ತಿರುವ ರೈತರ ಅನುಭವಗಳ ಮಾಹಿತಿ ಪಡೆದುಕೊಂಡರು.
ನಂತರ ಮಾತನಾಡಿದ ಅವರು, ಬೆಂಗಳೂರಿನ ಜನರಿಗೆ ಸಾವಯವ ಆಹಾರದ ಬಗ್ಗೆ ಜಾಗೃತಿ ಮೂಡಿಸಿ ಕರ್ನಾಟಕದಲ್ಲಿ ಸಾವಯವ ಕೃಷಿ ಮಾಡುತ್ತಿರುವ ಸುಮಾರು 1.5 ಲಕ್ಷಕ್ಕೂ ಅಧಿಕ ಸಾವಯವ ಕೃಷಿಕರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು. ರೈತರು ಬೆಳೆದ ನೈಸರ್ಗಿಕ ವಸ್ತುಗಳಿಗೆ ಹೆಚ್ಚು ಹೆಚ್ಚು ಬೇಡಿಕೆ ಬಂದರೆ ಇನ್ನು ಅಧಿಕ ಕೃಷಿಕರು ಸಾವಯವ ಕೃಷಿ ಮಾಡಲು ಮುಂದೆ ಬರುತ್ತಾರೆ. ಇದರಿಂದ ಪರಿಸರಕ್ಕೂ ಒಳ್ಳೆಯಾದಾಗುತ್ತೆ ಮತ್ತು ಸಾರ್ವಜನಿಕರಿಗೂ ಶುದ್ಧ ಆಹಾರ ದೊರೆಯುವಂತಾಗುತ್ತದೆ ಎಂದು ಹೇಳಿದರು. ಜತೆಗೆ, ನಗರದ ಮನೆಗೆ ಮನೆಗೆ ಶುದ್ಧ ಆಹಾರ ತಲುಪುವಂತೆ ಸುಲಭವಾಗಲು 'ಜೈವಿಕ್ ಬಾಸ್ಕೆಟ್' ಆನ್ಲೈನ್ ಸೇವೆ ಉದ್ಘಾಟಿಸಿದರು.

ಮೇಳದಲ್ಲಿನ ವಿಶೇಷಗಳು: ಬಗೆ ಬಗೆಯ ಮಾವು ಮತ್ತು ಹಲಸು ಹಣ್ಣುಗಳು ಗ್ರಾಹಕರ ಗಮನ ಸೆಳೆದರೆ, ಸಸಿಗಳು ರೈತರ ಗಮನಸೆಳೆಯುತ್ತಿವೆ. 30 ರೂ. ನಿಂದ 450 ರೂ.ವರೆಗಿನ ಬೆಲೆಯ ಸಸಿಗಳು ಮಾರಾಟವಾಗುತ್ತಿವೆ. ಅಷ್ಟೇ ಅಲ್ಲ, ಚಂದ್ರ ಹಲಸು, ಬೀಜ ರಹಿತ ಹಲಸು, ಕೆಂಪು ಹಲಸು, ಹಳದಿ ಹಲಸು, ಸಣ್ಣ ಮತ್ತು ಉದ್ದನೆಯ ಹಲಸು, ದುಂಡು ಹಲಸು ಹೀಗೆ ಬಗೆ ಬಗೆಯ ಹಲಸಿನ ಹಣ್ಣುಗಳು ಮಾರಾಟವಾಗುತ್ತಿವೆ.

ಪಲ್ಯ, ಸಾರು, ಚಿಪ್ಸ್ ಮಾಡುವ ಎಳೆಯ ಹಲಸಿನಕಾಯಿಗಳಿಂದ ಸ್ವಾದಿಷ್ಟವಾದ ತೊಳೆಗಳನ್ನು ಹೊಂದಿದ ಭಾರಿ ಗಾತ್ರದ ಹಣ್ಣುಗಳಿದ್ದವು. ಬಿಡಿಸಿದ ಚಂದ್ರ ಹಲಸು ಹಣ್ಣು ಕೆ.ಜಿ.ಗೆ 400 ರೂ.ವರೆಗೆ ಮಾರಾಟವಾಗುತ್ತಿದ್ದು, ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದರು.

ದುಬಾರಿ ಬೆಲೆಯ ಜಪಾನ್ ಮೂಲದ ಮಿಯಾಝಕಿ ಮಾವು ಗ್ರಾಹಕರ ಗಮನ ಸೆಳೆಯುತ್ತಿತ್ತು. ಇದು ಒಂದು ಹಣ್ಣು ಬರೋಬ್ಬರಿ ಒಂದು ಕೆ.ಜಿ. ತೂಗಲಿದ್ದು, ಕೆ.ಜಿ.ಗೆ 2 ಸಾವಿರ ರೂ.ನಂತೆ ಮಾರಾಟವಾಗುತ್ತಿತ್ತು. ಅಪ್ಪೆಮಿಡಿ, ಟಿಪ್ಪು ಸುಲ್ತಾನ್ ಕಾಲದ ಮಾವಿನ ತಳಿಗಳು, ಧಾರವಾಡ ಮತ್ತಿತರ ಭಾಗಗಳ ರೈತರು ಬೆಳೆದ ಸಾವಯವ ಮಾವು ವಿಶೇಷವಾಗಿದ್ದವು. 25ಕ್ಕೂ ಹೆಚ್ಚು ಹಲಸು ಮತ್ತು ಮಾವಿನ ತಳಿಗಳು ಮೇಳದಲ್ಲಿದ್ದವು. ಹಲಸಿನ ಐಸ್‌ಕ್ರೀಂ, ಚಿಪ್ಸ್, ಚಾಕೋಲೆಟ್, ಹಪ್ಪಳ, ಹಲ್ವಾ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿ ಮಳಿಗೆಗಳು ಕೂಡ ಇದ್ದವು.
ವಿಶೇಷವಾಗಿ ರಂಗಸ್ವಾಮಿ ಫಾರ್ಮ್ನಲ್ಲಿ ಬೆಳೆದಿರುವ ಮಿಯಾಝಾಕಿ ಮಾವು, ರೆಡ್ ಐವರಿ , ಬನಾನಾ ಮಾವು ಹಾಗೂ ಬೀಜ ರಹಿತ ಹಲಸು ಹಣ್ಣುಗಳು ಮತ್ತು ತೇಜ ನರ್ಸರಿಯ ಮಿಯಾಝಾಕಿ ಮಾವು ಕಾರ್ಯದರ್ಶಿಗಳ ಗಮನ ಸೆಳೆದವು.

ವಿವಿಧ ಸಸಿಗಳ ಮಾರಾಟ: ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸಿದ ಕಸಿ ಮಾಡಿದ ಮಾವಿನ ಸಸಿಗಳು, ನೇರಳೆ, ಸೀಬೆ ಸಸಿಗಳು ಮಾರಾಟವಾಗುತ್ತಿದ್ದವು. ಜತೆಗೆ ಖಾಸಗಿ ನರ್ಸರಿಗಳಿಂದಲೂ ಬಗೆ ಬಗೆಯ ಹಲಸು ಮತ್ತು ಮಾವಿನ ಸಸಿಗಳು ಮಾರಾಟವಾಗುತ್ತಿವೆ.

ರಾಗಿ ಐಸ್‌ಕ್ರೀಂ: ಋತುಮಾನದ ಹಣ್ಣುಗಳ ಜತೆಗೆ ಮಾವು ಮತ್ತು ಹಲಸಿನ ಉತ್ಪನ್ನಗಳಾದ ಹಲಸಿನ ಹಪ್ಪಳ, ಮಾವಿನಕಾಯಿ ಉಪ್ಪಿನಕಾಯಿ, ಮಾವಿನ ಹಣ್ಣಿನ ಜಾಮ್, ಮಾವು, ಹಲಸು ಐಸ್ ಕ್ರೀಮ್, ರಾಗಿ, ವೀಳ್ಯದೆಲೆ ಐಸ್ ಕ್ರೀಂ ಹೀಗೆ ಹಲವು ವಿಶೇಷಗಳು ಮೇಳದಲ್ಲಿವೆ.
ಅಪರೂಪದ ಮಾವಿನ ತಳಿಗಳು: ಮಿಯಾಪಸಂದ್, ಕಾನಾಪಸಂದ್, ಚೋಟು, ಬಾಬಾ, ಕಾಜೂ, ಮೈಸೂರು ಬಾದಾಮಿ, ಮಿಥೆ ಮಿಯಾ ಪಸಂದ್, ಮಲ್ಲಿಕಾ, ಆಮ್ಲೆಟ್ ಮುಂತಾದ ಮಾವಿನ ತಳಿಗಳು ಪ್ರದರ್ಶನಕ್ಕಿದ್ದವು.

ಈ ವೇಳೆ ಜೈವಿಕ್ ಕೃಷಿಕ್ ಸೊಸೈಟಿಯ ಗೌರವಾಧ್ಯಕ್ಷರಾದ ಡಾ. ರಾಮಕೃಷ್ಣಪ್ಪ, ಜಂಟಿ ನಿರ್ದೇಶಕರಾದ ಡಾ. ವಿಶ್ವನಾಥ್, ಡಾ. ಎಂ. ಜಗದೀಶ್, ಹೆಚ್ಚುವರಿ ನಿರ್ದೇಶಕ ಕೆ.ಎಂ. ಪರಶಿವಮೂರ್ತಿ, ಉಪ ನಿರ್ದೇಶಕಿ ಕ್ಷಮಾ ಪಾಟೀಲ್, ಜೈವಿಕ್ ಕೃಷಿಕ್ ಸೊಸೈಟಿಯ ಡಾ. ರಾಮಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಮಾವು ಬೆಳೆದ ರೈತರು: ಮಿಯಾಝಾಕಿ ಬಂಪರ್ ಬೆಳೆಯಿಂದ ದಿಲ್ ಖುಷ್!
ಇದನ್ನೂ ಓದಿ: ಕೊಪ್ಪಳದಲ್ಲಿ ಮಾವು ಮೇಳ: ಮಿಯಾ ಜಾಕಿ ಕೇಸರ್, ಆಪೂಸ್ ಖರೀದಿಗೆ ಮುಗಿಬಿದ್ದ ಜನ