ಬೆಂಗಳೂರು: ಶಾಸಕ ಶಿವರಾಮ್ ಹೆಬ್ಬಾರ್‌ಗೂ ನಮ್ಮ ಪಕ್ಷಕ್ಕೂ ಮುಗಿದ ಅಧ್ಯಾಯ. ಅವರು ಈಗ ನಮ್ಮ ಪಕ್ಷದವರಲ್ಲ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೆ, ಹೆಬ್ಬಾರ್ ಅವರು ಕುಳಿತೇ ಇರುತ್ತಾರೆ. ಅವರನ್ನು ನಾವು ಕೈ ಬಿಟ್ಟಿದ್ದೇವೆ. ಶಿವರಾಮ್ ಹೆಬ್ಬಾರ್‌ಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದರು.
ಜಾತಿ ಗಣತಿ ವರದಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯನವರು ಟೋಪಿ ಹಾಕಿಕೊಂಡು ಏಕೆ ಜಾತಿ ಗಣತಿ ವರದಿ ಹಿಂದೆ ಬಿದ್ದಿದ್ದಾರೋ ಗೊತ್ತಿಲ್ಲ. ಇದು ಹತ್ತು ವರ್ಷಗಳ ಹಿಂದೆ ಮಾಡಿರುವ ಸಮೀಕ್ಷೆ. ಈಗ ಜನಸಂಖ್ಯೆ ಹೆಚ್ಚಾಗಿದೆ. ಸಮೀಕ್ಷೆ ಮಾಡಿದಾಗ ಆರು ಕೋಟಿ ಇದ್ದರು. ಈಗ ಏಳು ಕೋಟಿ ಜನ ಇದ್ದಾರೆ. ಒಂದು ಕೋಟಿ ಜನರು ಸಮುದ್ರಕ್ಕೆ ಬೀಳಬೇಕಾ?. ಮುಸ್ಲಿಮರು ನಂ.1 ಎಂದಾದರೆ ಅಲ್ಪಸಂಖ್ಯಾತ ಮಾನ್ಯತೆ ಏಕೆ ಎಂದು ಪ್ರಶ್ನಿಸಿದರು.
ವಕ್ಫ್ ಕಾಯ್ದೆ ಜಾರಿಗೆ ಬಿಡಲ್ಲ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಗರಂ ಆದ ಅಶೋಕ್, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡಲ್ಲ ಎನ್ನಲು ಜಮೀರ್ ಯಾರು?, ಕಂಡ ಜಾಗವನ್ನೆಲ್ಲ ವಕ್ಫ್ದು ಅಂತ ಹೇಳಲು ಬೋರ್ಡ್ಗೆ ಯುಪಿಎ ಸರ್ಕಾರ ಹೇಗೆ ಅಧಿಕಾರ ಕೊಟ್ಟಿತು?. ಪಾರ್ಲಿಮೆಂಟ್ ನಿರ್ಧಾರ ಅದು. ಮಾಡಲೇಬೇಕು. ಅಂಬೇಡ್ಕರ್ ಸಂವಿಧಾನ ಇದು. ಮಾಡಿಯೇ ಮಾಡಿಸ್ತೇವೆ. ಕಾಂಗ್ರೆಸ್ ಎಷ್ಟು ಸಾರಿ ಸಂವಿಧಾನ ಬದಲಾವಣೆ ಮಾಡಿಲ್ಲ. ವಕ್ಫ್ ಕಾಯ್ದೆ ಜಾರಿ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು.
ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊಲೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರಿಗೇ ಆಗಲಿ ಕೊಲೆ ಬೆದರಿಕೆ ಹಾಕಬಾರದು. ಹಿಂದುತ್ವದ ಪರ ಮಾತನಾಡುವ, ಹೋರಾಡುವ ಯಾರಿಗೇ ಆಗಲಿ ನಮ್ಮ ಬೆಂಬಲ ಇರಲಿದೆ. ಯತ್ನಾಳ್ ಅವರಿಗೆ ಕೊಲೆ ಬೆದರಿಕೆ ಹಾಕಿರುವುದನ್ನು ಖಂಡಿಸುತ್ತೇವೆ ಎಂದರು.
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿ ಕೇಳಿದ್ದೆವು. ಆದರೆ, ಕರ್ನಾಟಕದಲ್ಲಿ ತೆರಿಗೆ ದಾಳಿ ಆಗುತ್ತಿದೆ. ಭಯೋತ್ಪಾದಕರಂತೆ ತೆರಿಗೆ ದಾಳಿ ಮಾಡಲಾಗುತ್ತಿದೆ. ನಮ್ಮನ್ನ ಮನುವಾದಿಗಳು ಅಂತಾರೆ. ಆ ಮನು ಹೇಗಿದ್ದ ಎಂಬುದೇ ಗೊತ್ತಿಲ್ಲ. ಫೋಟೋ ಕೂಡ ನೋಡಿಲ್ಲ. ಇವ್ರು ಬಾಬರ್, ಅಕ್ಬರ್, ತುಘಲಕ್ ವಂಶಸ್ಥರು. ರಾಜ್ಯದಲ್ಲಿ ಶರಿಯಾ ಕಾನೂನು ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ವೀಲ್‌ಚೇರ್ ನಲ್ಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಫಾಸ್ಟ್ ಟ್ರ್ಯಾಕ್ ಅಲ್ಲಿದ್ದಾರೆ. ಅಧಿಕಾರ ಕಿತ್ತುಕೊಳ್ಳಲು ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಮಹಿಳಾ ಪೊಲೀಸ್ ಗುಂಡಿಟ್ಟು ಕೊಂದಿರುವುದನ್ನು ಸ್ವಾಗತಿಸಿದ ಅಶೋಕ್ ಅವರು, ಯಾರೇ ಆಗಲೀ ಕೆಟ್ಟ ಕೆಲಸ ಮಾಡಿದರೆ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಎಂದು ಹೇಳಿದರು.
ಏ.16 ರಿಂದ 2ನೇ ಹಂತದ ಜನಾಕ್ರೋಶ ಯಾತ್ರೆ: ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ 2ನೇ ಹಂತದ ಜನಾಕ್ರೋಶ ಯಾತ್ರೆ ಆರಂಭವಾಗಲಿದೆ. ಬೆಳಗಾವಿಯಲ್ಲಿ ಏಪ್ರಿಲ್ 16ಕ್ಕೆ ಕಾರ್ಯಕ್ರಮವಿದೆ. ಏ.17 ಕ್ಕೆ ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ನಡೆಯಲಿದೆ. ಏಪ್ರಿಲ್ 21 ರಿಂದ ಮೂರನೇ ಹಂತದ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಒಂದು ಕಪಟ ನಾಟಕ: ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿ ಹೋರಾಟಕ್ಕೆ ಮುಂದಾಗುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಒಂದು ಕಪಟ ನಾಟಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ನಡೆಸಿರುವ ಜನಾಕ್ರೋಶ ಯಾತ್ರೆಯನ್ನು ನೋಡಿ ಕಾಂಗ್ರೆಸ್‌ನವರು ಸಹ ಕೇಂದ್ರದ ವಿರುದ್ಧ ಏಪ್ರಿಲ್ 17ರಂದು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್‌ನವರ ಈ ಹೋರಾಟ ಒಂದು ನಾಟಕ ಅಷ್ಟೇ. ರಾಜ್ಯದ ಜನರಿಗೆ ಈ ಸರ್ಕಾರ ಅಭಿವೃದ್ಧಿ ನೀಡುತ್ತಿಲ್ಲ. ಬೆಲೆ ಏರಿಕೆ ಈ ಸರ್ಕಾರದ ಸಾಧನೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಅಷ್ಟೇ ಎಂದರು.
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ಕಾಂಗ್ರೆಸ್‌ನವರು ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿದ್ದರು. ಹಾಗಾಗಿ, ಇವರಿಗೆ ಕೇಂದ್ರದ ವಿರುದ್ಧ ಹೋರಾಟ ಮಾಡಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದೆ. ಅವರ ಪ್ರಯತ್ನ ಸಫಲವಾಗಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಹಣಕಾಸು ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಸರಿಯಾಗಿ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪದೇ ಪದೇ ಕೇಂದ್ರದ ವಿರುದ್ಧ ದೂರುವುದನ್ನೆ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ ವರದಿಯಿಂದ ಜಾತಿ, ಜಾತಿಗಳ ಮಧ್ಯೆ ಒಡಕು: ಆರ್.ಅಶೋಕ್ - CASTE CENSUS