ETV Bharat / state

ಬೆಳಗಾವಿ ಡಿಸಿಸಿ ಬ್ಯಾಂಕ್ ಕದನ: 9 ಮಂದಿ ಅವಿರೋಧ ಆಯ್ಕೆ, 7 ಕ್ಷೇತ್ರಗಳಲ್ಲಿ ಚುನಾವಣೆ!

ಬೆಳಗಾವಿ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿರುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 9 ಜನರು ಅವಿರೋಧ ಆಯ್ಕೆಯಾಗಿದ್ದಾರೆ.

nine-candidates-elected-unopposed-in-belagavi-dcc-bank-election
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಗೆಲುವಿನ ಸಂಭ್ರಮಾಚರಣೆ (ETV Bharat)
author img

By ETV Bharat Karnataka Team

Published : October 13, 2025 at 5:37 PM IST

6 Min Read
Choose ETV Bharat

ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಡಿಸಿಸಿ ಬ್ಯಾಂಕ್​ ಚುನಾವಣೆ ರಂಗೇರಿದ್ದು, 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರೆ, ಉಳಿದ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ 5 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ ಹಲವು ಅಭ್ಯರ್ಥಿಗಳು ನಾಮಪತ್ರ ವಾಪಸ್​ ಪಡೆದಿದ್ದರಿಂದ ಐವರು ಅವಿರೋಧ ಆಯ್ಕೆ ಘೋಷಣೆ ಆಯಿತು.

ಹೌದು, ಇಡೀ ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ಚುನಾವಣೆಯಲ್ಲಿ ಚಿಕ್ಕೋಡಿ ತಾಲೂಕಿನಿಂದ ಗಣೇಶ ಹುಕ್ಕೇರಿ, ಗೋಕಾಕ್​ನಲ್ಲಿ ಅಮರನಾಥ್ ಜಾರಕಿಹೊಳಿ, ಸವದತ್ತಿಯಲ್ಲಿ ವಿರೂಪಾಕ್ಷ ಮಾಮನಿ, ಯರಗಟ್ಟಿಯಿಂದ ವಿಶ್ವಾಸ ವೈದ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಈ ನಾಲ್ವರ ಅವಿರೋಧ ಆಯ್ಕೆ ಮೊನ್ನೆಯೇ ಖಚಿತವಾಗಿತ್ತು. ಇದರ ಜೊತೆಗೆ ಇಂದು ಇತರೆ ಕ್ಷೇತ್ರದಿಂದ ಚನ್ನರಾಜ ಹಟ್ಟಿಹೊಳಿ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದ ಹಿನ್ನೆಲೆಯಲ್ಲಿ ಚನ್ನರಾಜ ಅವರೂ ಅವಿರೋಧ ಆಯ್ಕೆಯಾಗಿದ್ದಾರೆ.

ಅದೇ ರೀತಿ, ಕಾಗವಾಡದಿಂದ ರಾಜು ಕಾಗೆ, ಖಾನಾಪುರದಿಂದ ಅರವಿಂದ ಪಾಟೀಲ, ಬೆಳಗಾವಿಯಲ್ಲಿ ರಾಹುಲ್ ಜಾರಕಿಹೊಳಿ ಹಾಗೂ ಮೂಡಲಗಿಯಲ್ಲಿ ನೀಲಕಂಠ ಕಪ್ಪಲಗುದ್ದಿ ಅವರ ವಿರುದ್ಧ ನಾಮಪತ್ರ ಸಲ್ಲಿಸಿದವರು ವಾಪಸ್​​ ಪಡೆದ ಹಿನ್ನೆಲೆಯಲ್ಲಿ ಈ ನಾಲ್ವರ ಅವಿರೋಧ ಆಯ್ಕೆ ನಿಶ್ಚಿತವಾಗಿದೆ. ಒಟ್ಟು ಅವಿರೋಧ ಆಯ್ಕೆ ಆದ 9 ಅಭ್ಯರ್ಥಿಗಳ ಪೈಕಿ 7 ಬಾಲಚಂದ್ರ ಜಾರಕಿಹೊಳಿ ಪೆನಲ್, ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ. ಅವಿರೋಧ ಆಯ್ಕೆಯಾದವರು ಆಗಮಿಸಿ ತಮ್ಮ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಡಿಸಿಸಿ ಬ್ಯಾಂಕ್ ಮುಂದೆ ಗೆದ್ದವರ ಅಭಿಮಾನಿಗಳು ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ (ETV Bharat)

ಇಂದು ಒಟ್ಟಾರೆ 20 ನಾಮಪತ್ರಗಳನ್ನು ವಾಪಸ್​​ ಪಡೆಯಲಾಗಿದೆ. ಇದರೊಂದಿಗೆ, 7 ತಾಲೂಕುಗಳಲ್ಲಿ ನಡೆಯಲಿರುವ ಚುನಾವಣಾ ಕಣದಲ್ಲಿ ಒಟ್ಟು 14 ಮಂದಿ ಸ್ಪರ್ಧಿಗಳಿದ್ದಾರೆ.

ಕಣದಲ್ಲಿರುವ ಪ್ರಮುಖರು:

ಹುಕ್ಕೇರಿ: ರಮೇಶ ಕತ್ತಿ-ರಾಜೇಂದ್ರ ಪಾಟೀಲ

ಅಥಣಿ: ಲಕ್ಷ್ಮಣ ಸವದಿ-ಮಹೇಶ ಕುಮಠಳ್ಳಿ

ನಿಪ್ಪಾಣಿ: ಅಣ್ಣಾಸಾಹೇಬ ಜೊಲ್ಲೆ-ಉತ್ತಮ ಪಾಟೀಲ

ಬೈಲಹೊಂಗಲ: ಮಹಾಂತೇಶ ದೊಡ್ಡಗೌಡರ-ಡಾ.ವಿಶ್ವನಾಥ ಪಾಟೀಲ

ಕಿತ್ತೂರು: ನಾನಾಸಾಹೇಬ ಪಾಟೀಲ-ವಿಕ್ರಮ್ ಇನಾಮದಾರ್

ರಾಮದುರ್ಗ: ಮಲ್ಲಣ್ಣ ಯಾದವಾಡ-ಎಸ್.ಎಸ್.ಢವಣ

ರಾಯಬಾಗ: ಅಪ್ಪಾಸಾಹೇಬ ಕುಲಗುಡೆ-ಬಸನಗೌಡ ಆಸಂಗಿ

ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ತಾಯಿ ಗಿರಿಜಾ ಹಟ್ಟಿಹೊಳಿ ಅವರ ಆಶೀರ್ವಾದ ಪಡೆದರು.

ಗೆಲುವಿನ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ''ನಮ್ಮ ಪೆನಲ್​​ನಿಂದ ಇತರ ಕ್ಷೇತ್ರದಿಂದ ಚನ್ನರಾಜ ಹಟ್ಟಿಹೊಳಿ ಸೇರಿ ಒಟ್ಟು 7 ಜನರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಇನ್ನುಳಿದಂತೆ ಗಣೇಶ ಹುಕ್ಕೇರಿ ಸ್ವತಂತ್ರ ಅಭ್ಯರ್ಥಿ, ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ರಾಜು ಕಾಗೆ ಗೆದ್ದಿದ್ದಾರೆ. ಇನ್ನುಳಿದಂತೆ 7 ತಾಲೂಕುಗಳಿಗೆ ಅ.19ರಂದು ಚುನಾವಣೆ ನಡೆಯಲಿದೆ'' ಎಂದರು.

nine-candidates-elected-unopposed-in-belagavi-dcc-bank-election
ಗೆಲುವಿನ ಸಂಭ್ರಮದಲ್ಲಿ ಚನ್ನರಾಜ ಹಟ್ಟಿಹೊಳಿ (ETV Bharat)

''ಅ.19ರಂದು ಚುನಾವಣೆ ನಡೆದರೂ ಕೂಡ ಅ.18ರವರೆಗೆ ಒಳಗಿಂದೊಳಗೆ ಹೊಂದಾಣಿಕೆ ಪ್ರಕ್ರಿಯೆ ಮುಂದುವರೆಯುತ್ತದೆ. ಆವಾಗ ಏನೇನಾಗುತ್ತದೆ ಎಂದು ನೋಡೋಣ''ಎಂದ ಬಾಲಚಂದ್ರ ಜಾರಕಿಹೊಳಿ, ಕುರುಬ, ಅಹಿಂದ ಸಮುದಾಯಕ್ಕೆ ಒಂದೂ ಸ್ಥಾನ ಸಿಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಉಣ್ಣೆ ಉದ್ಯಮದಿಂದ ಒಂದು ಸ್ಥಾನ ಬರುತ್ತಿತ್ತು. ಅದು ರದ್ದಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಚರ್ಚಿಸಿದ್ದೇವೆ. ಹಾಲುಮತ ಸಮಾಜಕ್ಕೆ ಯಾವುದೇ ರೂಪದಲ್ಲಿ ಇದೇ ಆಡಳಿತ ಮಂಡಳಿಯಲ್ಲಿ ಒಂದು ಸ್ಥಾನ ನೂರಕ್ಕೆ ನೂರರಷ್ಟು ನೀಡುತ್ತೇವೆ'' ಎಂದರು.

ನಾಲ್ಕು ತಿಂಗಳು ಪಟ್ಟ ಶ್ರಮದ ಫಲ: ''ಜೂನ್​ನಿಂದ ಸತತವಾಗಿ ನಾಲ್ಕು ತಿಂಗಳು ಖಾನಾಪುರದಿಂದ ಚುನಾವಣೆ ಪ್ರಚಾರ ಆರಂಭ ಮಾಡಿ ನಿಪ್ಪಾಣಿಗೆ ಮುಕ್ತಾಯ ಮಾಡಿದೆವು. ಇಷ್ಟು ಬೇಗ ಯಾಕೆ ಪ್ರಚಾರ ಶುರು ಮಾಡಿದಿರಿ ಅಂತಾ ಕೆಲವರು ಕೇಳಿದರು. ಆದರೂ ನಾಲ್ಕು ತಿಂಗಳು ಜಿಲ್ಲೆಯ ಎಲ್ಲ ಸೊಸೈಟಿಗಳನ್ನು ಭೇಟಿಯಾಗಿ ವಿನಂತಿ ಮಾಡಿಕೊಂಡಿದ್ದೆವು‌‌. ನಾಲ್ಕು ತಿಂಗಳು ಪಟ್ಟ ಶ್ರಮ, ಪ್ರಯತ್ನದ ಫಲ ಮತ್ತು ಜಿಲ್ಲೆಯ ಎಲ್ಲ ನಾಯಕರ ಸಹಕಾರದಿಂದ ನಮ್ಮ 7 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಎಲ್ಲರನ್ನೂ ಕೂಡಿಸಿದ್ದರಿಂದ ಇದು ಸಾಧ್ಯವಾಗಿದೆ'' ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸೋಲು, ಗೆಲುವು ಇದ್ದಿದ್ದೆ: ''ಯಾವುದೇ ಒಂದು ಚುನಾವಣೆ ಸೋಲುವುದರಿಂದ ಪ್ರಪಂಚ ಮುಳುಗುವುದಿಲ್ಲ. ಒಂದು ಚುನಾವಣೆ ಗೆಲ್ಲುವುದರಿಂದ ಪ್ರಪಂಚವನ್ನೇ ಗೆದ್ದಂತೆ ಅಲ್ಲ. ಸೋಲು, ಗೆಲುವು ಇದ್ದಿದ್ದೆ. ಜಿಲ್ಲೆಯ ಎಲ್ಲ ಮುಖಂಡರು ಮತ್ತು ಜನರು ನಮ್ಮ ಕುಟುಂಬ ಮತ್ತು ಬೆಂಬಲಿಗರಿಗೆ ಆಶೀರ್ವಾದ ಮಾಡಿದ್ದಾರೆ. ಇನ್ನು ತಂತ್ರಗಾರಿಕೆ ಎಲ್ಲರೂ ಮಾಡುತ್ತಾರೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಯಾರು ಏನೇ ಮಾಡಿದರೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದ ಬಳಿಕ ನಮ್ಮ ಪೆನಲ್​ನಿಂದ ಯಾರೂ ನಮ್ಮನ್ನು ಬಿಟ್ಟು ವಿರೋಧಿಗಳ ಕಡೆ ಹೋಗುವುದಿಲ್ಲ. ಬ್ಯಾಂಕ್ ಆಡಳಿತ ಸುಸೂತ್ರವಾಗಿ ನಡೆಸುತ್ತೇವೆ. ನಮ್ಮ ಕಡೆ ಬ್ಯಾಂಕ್ ಬಂದರೆ ಹಾಳಾಗುತ್ತದೆ ಎಂದು ವಿರೋಧಿಗಳು ನಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅದನ್ನು ನಾವು ಸವಾಲಾಗಿ ಸ್ವೀಕರಿಸಿದ್ದು, ಅವರಗಿಂತ ಚೆನ್ನಾಗಿ ಆಡಳಿತ ಮಾಡಿ ತೋರಿಸುತ್ತೇವೆ'' ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

nine-candidates-elected-unopposed-in-belagavi-dcc-bank-election
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಗೆಲುವಿನ ಸಂಭ್ರಮಾಚರಣೆ (ETV Bharat)

ಅಧ್ಯಕ್ಷರಾದವರ ಕೈಯಲ್ಲಿ ಲಗಾಮು: ''ಅಥಣಿ, ಹುಕ್ಕೇರಿ, ನಿಪ್ಪಾಣಿ, ರಾಮದುರ್ಗ, ಬೈಲಹೊಂಗಲ, ಕಿತ್ತೂರ, ರಾಯಬಾಗ ತಾಲೂಕುಗಳಲ್ಲಿ ಚುನಾವಣೆ ನಡೆಯಲಿದೆ. ಇನ್ನೇನು ಸಮಾಧಾನದಿಂದ ಚುನಾವಣೆ ಆಗಲಿದೆ. ಮತದಾರರಿಗೆ ಏನೇನು ಸಂದೇಶ ಹೋಗಬೇಕೋ ಅದು ಹೋಗಿದೆ. ಇವುಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ನಾವು ಪ್ರಯತ್ನಿಸುತ್ತೇವೆ. ಈಗ ಯಾರು ಎಷ್ಟೇ ಜಿಗಿದಾಡಿ ಚುನಾವಣೆ ಮಾಡಿದರೂ ಎಲ್ಲರೂ ಒಂದೇ ಕಡೆ ಕುಳಿತುಕೊಳ್ಳಬೇಕು. ಯಾರು ಅಧ್ಯಕ್ಷರಾಗುತ್ತಾರೆಯೋ ಅವರ ಕೈಯಲ್ಲಿ ಲಗಾಮು ಇರುತ್ತದೆ. ಆಗ ಎಲ್ಲರೂ ಸುಮ್ಮನಿರುತ್ತಾರೆ'' ಎಂದರು.

ಸರಿಯಾಗಿ ಕೆಲಸ ಮಾಡುವಂತೆ ಸಲಹೆ ನೀಡುತ್ತೇವೆ: ಜಾರಕಿಹೊಳಿ ಸಹೋದರರ ಕೈಯಲ್ಲೇ ಡಿಸಿಸಿ ಬ್ಯಾಂಕ್ ಆಡಳಿತ ನಡೆಯುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ''ಡಿಸಿಸಿ ಬ್ಯಾಂಕ್ ಚುನಾವಣೆ ಗೆದ್ದು, ಆಡಳಿತ ಮಂಡಳಿ ರಚಿಸಿ, ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡುವವರೆಗೆ ನಮ್ಮ ಕರ್ತವ್ಯ ಇರುತ್ತದೆ. ದಿನನಿತ್ಯ ಎಲ್ಲವನ್ನೂ ನಮಗೆ ಮಾಡಲು ಸಮಯ ಇರುವುದಿಲ್ಲ. ತಪ್ಪಿದ್ದಲ್ಲಿ ಬುದ್ಧಿ ಹೇಳಬೇಕಾಗುತ್ತದೆ. ಎಲ್ಲಿಯೂ ತಪ್ಪದಂತೆ ಸರಿಯಾಗಿ ಕೆಲಸ ಮಾಡುವಂತೆ ಸಲಹೆ ನೀಡುತ್ತೇವೆ'' ಎಂದು ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಜಾರಕಿಹೊಳಿ ಬ್ರದರ್ಸ್ ಕೂಡಿಕೊಂಡು ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸೋಲಿಸುತ್ತಾರೆ ಎಂಬ ಚರ್ಚೆ ವಿಚಾರಕ್ಕೆ ಉತ್ತರಿಸಿ, ''ಒಂದು ವರ್ಷದ ಹಿಂದೆ ಅವರಿಗೆ ನಮಗೆ ಲೋಕಸಭೆ ಚುನಾವಣೆ ನಡೆಯಿತು. ಆದರೂ ಅದನ್ನೆಲ್ಲಾ ಮರೆತು ಸಹಕಾರ ಕ್ಷೇತ್ರದಲ್ಲಿ ನಾವೆಲ್ಲಾ ಒಂದಾಗಿ ಹೋಗುತ್ತಿದ್ದೇವೆ. ನಾವೇ ಸೋಲಿಸುತ್ತೇವೆ ಅಂತಾ ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಾವು ಮತ್ತು ಸತೀಶ ಜಾರಕಿಹೊಳಿ ಅವರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ನೂರಕ್ಕೆ ನೂರು ಅಣ್ಣಾಸಾಹೇಬ ಜೊಲ್ಲೆ ಗೆಲ್ಲುತ್ತಾರೆ'' ಎಂದು ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

''ಕಿತ್ತೂರು ತಾಲೂಕಿನಲ್ಲಿ ಗೊಂದಲ ಇರುವುದು ನಿಜ. ವಿಕ್ರಮ್ ಇನಾಮದಾರ್ ಕಡೆ 15, ಬಾಬಾಸಾಹೇಬ ಪಾಟೀಲ ಸಹೋದರ ನಾನಾಸಾಹೇಬ ಕಡೆ 14 ನಿರ್ದೇಶಕರಿದ್ದಾರೆ. ಒಂದು ಸೀಟ್ ಮೇಲೆ ಗೆಲುವು ನಿಂತಿದೆ. ಇನ್ನು ಬೈಲಹೊಂಗಲದಲ್ಲಿ ಯಾವುದೇ ಮಾತುಕತೆ ಆಗಿಲ್ಲ. ಹುಕ್ಕೇರಿಯಲ್ಲೂ ನಾವು ಫೈಟ್ ಮಾಡುತ್ತಿದ್ದೇವೆ'' ಎಂದು ಅವರು ಹೇಳಿದರು.

ನಮ್ಮದು ಸ್ವತಂತ್ರ ಬಣ ಎಂದ ಪ್ರಕಾಶ ಹುಕ್ಕೇರಿ: ತಮ್ಮ ಅವಿರೋಧ ಆಯ್ಕೆ ಆಗುತ್ತಿದ್ದಂತೆ ಶಾಸಕ ಗಣೇಶ ಹುಕ್ಕೇರಿ ತಂದೆ ವಿಧಾನಪರಿಷತ್​ ಸದಸ್ಯ ಪ್ರಕಾಶ ಹುಕ್ಕೇರಿ ಅವರ ಜೊತೆಗೆ ಆಗಮಿಸಿ ಸರ್ಟಿಫಿಕೆಟ್​ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ನೀಡಲು ಪ್ರಾಮಾಣಿಕ ಕೆಲಸ ಮಾಡುವಂತೆ ಸಲಹೆ ನೀಡುತ್ತೇನೆ. ನಮ್ಮ ವಿರುದ್ಧ ಸ್ಪರ್ಧೆ ಮಾಡಬೇಡಿ ಅಂತಾ ನಾವು ಯಾರಿಗೂ ಹೇಳಿರಲಿಲ್ಲ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನಮಗೆ ಸಂಬಂಧಿಸಿಲ್ಲ. ನಾವು ಕೇವಲ ಚಿಕ್ಕೋಡಿ ತಾಲೂಕಿನ ಅಭಿವೃದ್ಧಿ ಬಗ್ಗೆ ಮಾತ್ರ ವಿಚಾರ ಮಾಡುತ್ತೇವೆ. ನಮ್ಮದು ಯಾರ ಪೆನಲ್​ ಅಲ್ಲ. ಯಾರ ಬೆನ್ನುಹತ್ತದೇ ಸ್ವತಂತ್ರವಾಗಿ ಗಣೇಶ ಆರಿಸಿ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಅಶೋಕ ಪಟ್ಟಣ (ETV Bharat)

ಗೆದ್ದ ಖುಷಿಯಲ್ಲಿ ರಾಜು ಕಾಗೆ: ಅವಿರೋಧ ಆಯ್ಕೆಯಾದ ಬಳಿಕ ಮಾತನಾಡಿದ ರಾಜು ಕಾಗೆ, ''ನಾನು ಸಹಕಾರ ರಂಗದಲ್ಲಿ ಇದೇ ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದ್ದೆ. ಕಾಗವಾಡ ತಾಲೂಕು ಆಗಿದ್ದರಿಂದ ಒಂದು ಅವಕಾಶ ಸಿಕ್ಕಿತು. ಮಾಜಿ ಸಚಿವ ಶ್ರೀಮಂತ ಪಾಟೀಲ್ ಮಗ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರು. ಸತೀಶ್ ಜಾರಕಿಹೊಳಿ‌ಗೆ ವಿನಂತಿ ಮಾಡಿಕೊಂಡಿದ್ದೆ. ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಮನವಿ ಮಾಡಿಕೊಂಡಿದ್ದಕ್ಕೆ ನಾಮಪತ್ರ ವಾಪಸ್​​ ಪಡೆದಿದ್ದಾರೆ. ಜಿಲ್ಲೆಯ ಎಲ್ಲ ನಾಯಕರು ಕೂಡಿ ನನಗೆ ಅವಕಾಶ ಕೊಟ್ಟಿದ್ದಾರೆ. ನಮ್ಮದು ಯಾವ ಪೆನಲ್, ಪಕ್ಷ ಹಾಗೂ ಪಂಗಡ ಇಲ್ಲ. ನಾವು ಎತ್ತಿಕೊಂಡವರ ಕೂಸು'' ಎಂದರು.

ಅಶೋಕ ಪಟ್ಟಣ ಹೇಳಿದ್ದೇನು?: ರಾಮದುರ್ಗದಿಂದ ನಾಮಪತ್ರ ವಾಪಸ್​​ ಪಡೆದ ಬಳಿಕ‌ ಮಾತನಾಡಿದ ಶಾಸಕ ಅಶೋಕ ಪಟ್ಟಣ, ''ಕಾರಣಾಂತರದಿಂದ ನಾಮಪತ್ರ ಹಿಂದಕ್ಕೆ ತೆಗೆದುಕೊಂಡಿದ್ದೇನೆ. ಮುಂದೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ‌. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸೋತರೆ ಮಂತ್ರಿ ಪಟ್ಟಕ್ಕೆ ಮುಳುವಾಗಬಹುದು. ‌ಸಚಿವ ಸಂಪುಟ ವಿಸ್ತರಣೆ ಆದರೆ ನನಗೂ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ'' ಎಂದರು.‌ ರಾಮದುರ್ಗದಿಂದ ಹಾಲಿ ನಿರ್ದೇಶಕ ಎಸ್.ಎಸ್.ಢವಣ ಹಾಗೂ ಮಲ್ಲಣ್ಣ ಯಾದವಾಡ ಕಣದಲ್ಲಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಾಮಪತ್ರ ಸಲ್ಲಿಕೆಯಲ್ಲಿ ಗಾಂಧಿ ಟೋಪಿ ನೆನಪು: ಟೋಪಿ ಧರಿಸಿಯೇ ಅಭ್ಯರ್ಥಿಗಳಿಂದ ಉಮೇದುವಾರಿಕೆ