ಹಾವೇರಿ: ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಸುದ್ದಿ ಸುಳ್ಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಸ್ಪಷ್ಟನೆ ನೀಡಿದ್ದಾರೆ.
ಬ್ಯಾಡಗಿ ಮಹಿಳೆಯ ಪ್ರಕರಣ ಕುರಿತಂತೆ ಹಾವೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳೆ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂಬ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ನಮ್ಮ ಪೊಲೀಸ್ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ವಿಚಾರಣೆ ವೇಳೆ ಮಹಿಳೆ ಮೇಲೆ ಗ್ಯಾಂಗ್ ರೇಪ್ ಆಗಿಲ್ಲ ಎಂಬ ವಿಷಯ ಗೊತ್ತಾಗಿದೆ. ಮಾಧ್ಯಮಗಳ ವರದಿಯಂತೆ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಆಗಿಲ್ಲ. ಆದರೆ, ಮಹಿಳೆ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂಬ ವರದಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರ ಆಗಿದೆ. ಮಹಿಳೆ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು, ತೀವ್ರ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಗೊತ್ತಾಗಿದೆ ಎಂದು ತಿಳಿಸಿದರು.
ಇದೊಂದು ಹಣಕಾಸಿನ ವಿಚಾರಗಾಗಿ ನಡೆದ ವೈಯಕ್ತಿಕ ಹಾಗೂ ಮಹಿಳೆಯರ ನಡುವಿನ ಜಗಳವಾಗಿದೆ. ಫರಿದಾಬಾನು ಮತ್ತು ನಬಿವುಲ್ಲಾ ಎಂಬುವರು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಮಹಿಳೆ ಅತ್ಯಾಚಾರದ ಕಥೆಕಟ್ಟಿದ್ದಳು. ಆಸ್ಪತ್ರೆಗೆ ದಾಖಲಾಗಿದ್ದ ಆ ಮಹಿಳೆಯನ್ನು ನಮ್ಮ ಮಹಿಳಾ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ವಿವರರವಾಗಿ ವಿಚಾರಣೆ ಮಾಡಿದಾಗ ಆ ಮಹಿಳೆ ತನ್ನ ಮೇಲೆ ಯಾವುದೇ ಗ್ಯಾಂಗ್ ರೇಪ್ ಆಗಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾಳೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆದಿದೆ. ಮೆಡಿಕಲ್ ಟೆಸ್ಟ್ ಕೂಡ ಮಾಡಲಾಗಿದೆ. ಮೆಡಿಕಲ್ ರಿಪೋರ್ಟ್ ಬರೋದು ಪೆಂಡಿಂಗ್ ಇದೆ. ಮೆಡಿಕಲ್ ರಿಪೋರ್ಟ್ ಆಧರಿಸಿ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಎಸ್ಪಿ ಅಂಶುಕುಮಾರ್ ಪ್ರಕರಣದ ಕುರಿತು ವಿವರಿಸಿದರು.
ಆಸ್ಪತ್ರೆಗೆ ದಾಖಲಾದ ಮಹಿಳೆಯು ತನ್ನ ಮೇಲೆ ಹಲ್ಲೆ ನಡೆದಿದೆ, ಅಲ್ಲದೇ ಐದು ಜನ ದ್ವಿಚಕ್ರ ವಾಹನಗಳಲ್ಲಿ ಬಂದು ತನ್ನನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ್ದಾರೆಂದು ವೈದ್ಯರ ಮುಂದೆ ಹೇಳಿಕೆ ನೀಡಿದ್ದಳು. ಅದರಂತೆ ಮಾಧ್ಯಮಗಳಲ್ಲೂ ವರದಿ ಪ್ರಸಾರವಾಯಿತು. ಈ ವರದಿ ಬೆನ್ನಲ್ಲೇ ಪೊಲೀಸರು ವಿಚಾರಣೆ ಕೈಗೊಂಡಾಗ ಆ ಮಹಿಳೆ ಸತ್ಯ ಘಟನೆಯನ್ನು ಬಾಯ್ಬಿಟ್ಟಿದ್ದಾಳೆ. ಹಲ್ಲೆ ಮಾಡಿದ ಆ ಇಬ್ಬರು ಮಹಿಳೆಯರನ್ನು ಜೈಲಿಗೆ ಕಳಿಸುವ ಉದ್ದೇಶದಿಂದ ಈ ಗ್ಯಾಂಗ್ ರೇಪ್ ಕಥೆ ಕಟ್ಟಿದ್ದಳು. ಸದ್ಯ ಆ ಮಹಿಳೆ ಗ್ಯಾಂಗ್ ರೇಪ್ ಆಗಿಲ್ಲವೆಂದು ಹೇಳುವ ಮೂಲಕ ಸರಿಯಾದ ದೂರು ನೀಡಿದ್ದಾರೆ. ಅದರನ್ವಯ ಇಬ್ಬರು ಮಹಿಳೆಯರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.