ಹುಬ್ಬಳ್ಳಿ: ರಕ್ತನಾಳ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಜನರ ಜೀವನ ಶೈಲಿ ಹಾಗೂ ದುಶ್ಚಟಗಳಿಂದ ವಿವಿಧ ಕಾಯಿಲೆಗಳು ಹೆಚ್ಚಾಗುತ್ತಿವೆ. ಅದರಂತೆ, ವಾಸ್ಕ್ಯುಲರ್ ಕಾಯಿಲೆಯೂ ಕೂಡ ಹಲವರನ್ನು ಕಾಡುತ್ತಿದೆ.
ಇಂದು ನ್ಯಾಷನಲ್ ವಾಸ್ಕ್ಯುಲರ್ ಡೇ. 1994ರಿಂದ ಆಗಸ್ಟ್ 6ರಂದು ರಾಷ್ಟ್ರೀಯ ವಾಸ್ಕ್ಯುಲರ್ ಡೇ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಇದೀಗ 30ನೇ ರಾಷ್ಟ್ರೀಯ ವಾಸ್ಕ್ಯುಲರ್ ಡೇ ಆಚರಿಸಲಾಗುತ್ತಿದೆ. ಪ್ರತೀ ವರ್ಷ ಒಂದೊಂದು ಥೀಮ್ನೊಂದಿಗೆ ಈ ದಿನಾಚರಣೆ ನಡೆಯುತ್ತದೆ. ಈ ವರ್ಷದ ಥೀಮ್ 'Ambutation Free World'.
ಆಧುನಿಕ ದಿನಮಾನಗಳಲ್ಲಿ ಬಹಳಷ್ಟು ಯುವಕರು ಧೂಮಪಾನದ ಚಟಕ್ಕೆ ಒಳಗಾಗುತ್ತಿದ್ದಾರೆ. ವ್ಯಾಯಾಮದ ಕೊರತೆಯಿಂದ ರಕ್ತನಾಳದ ಕಾಯಿಲೆಗಳಿಗೂ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಈ ದಿಸೆಯಲ್ಲಿ ರಕ್ತನಾಳ ಸಂಬಂಧಿ ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ತಜ್ಞ ವೈದ್ಯರಾದ ಡಾ.ಶಶಾಂಕ್ ಕರಿ ಹೇಳಿದರು.
ರಕ್ತನಾಳ ತೊಂದರೆಯಿಂದ ಮನುಷ್ಯನಿಗೆ ಆನೆ ಕಾಲು, ಊದಿಕೊಂಡ ಕಾಲು, ಉಬ್ಬಿರುವ ರಕ್ತನಾಳಗಳು, ನಿರ್ಬಂಧಿಸಿದ ಅಪಧಮನಿ (ಬ್ಲಾಕ್ ಆರ್ಟರಿ) ಸೇರಿದಂತೆ ಅನೇಕ ತೊಂದರೆಗಳಾಗುತ್ತಿವೆ. ಇವುಗಳನ್ನು ನಿರ್ಲಕ್ಷ್ಯ ವಹಿಸಿದರೆ ಜೀವಕ್ಕೆ ಅಪಾಯ ಉಂಟು ಮಾಡುತ್ತವೆ. ಇಂತಹ ರೋಗಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ ಕೂಡ ಲಭ್ಯವಿದೆ
ಕಾಯಿಲೆ ಲಕ್ಷಣಗಳು: ಕಾಲಿನಲ್ಲಿ ಮೊದಲು ನೋವು ಕಾಣಿಸಿಕೊಳ್ಳುತ್ತದೆ. ನಂತರ ಬಾಹು ಬಂದು ಗಾಯಗಳಾಗಿ, ಗ್ಯಾಂಗರಿನ್ ಆಗುತ್ತದೆ. ರಕ್ತನಾಳಗಳು ಉಬ್ಬುವುದು ಈ ರೋಗದ ಪ್ರಮುಖ ಲಕ್ಷಣ. ಇದರ ಜೊತೆಗೆ ಸುಸ್ತು, ಕೈಕಾಲುಗಳು ಆಡಿಸಲು ಆಗದೇ ಇರುವುದು, ಆನೆ ಕಾಲಿನಂತಾಗುವುದು ಈ ರೋಗದ ಇತರೆ ಲಕ್ಷಣಗಳಾಗಿವೆ ಎಂದು ಡಾ.ಶಶಾಂಕ್ ಕರಿ ತಿಳಿಸಿದರು.
ತಡೆಗಟ್ಟುವುದು ಹೇಗೆ?: ಶುದ್ದ ಆಹಾರ ಹಾಗೂ ನೀರು ಸೇವನೆಯಿಂದ ಈ ರೋಗವನ್ನು ತಡೆಗಟ್ಟಬಹುದು. ನಿರಂತರ ವ್ಯಾಯಾಮ, ಯೋಗ, ಧ್ಯಾನ ಮಾಡುವುದರಿಂದಲೂ ಒತ್ತಡ ಕಡಿಮೆ ಮಾಡಿಕೊಂಡರೆ ರೋಗ ಬಾರದಂತೆ ತಡೆಯಬಹುದು.
"ಇತ್ತೀಚಿನ ದಿನಗಳಲ್ಲಿ ಸಿಗರೇಟ್ ಸೇದುವುದರಿಂದ ರೋಗ ಉಲ್ಬಣವಾಗುತ್ತಿದೆ. ಇದು ನೇರವಾಗಿ ರಕ್ತನಾಳಗಳಿಗೆ ಹೊಡೆತ ಕೊಡುತ್ತದೆ. ಯುವಕರು ದುಶ್ಚಟಗಳಿಂದ ದೂರವಿದ್ದರೆ ರೋಗ ತಡೆಗಟ್ಟಬಹುದು" ಎಂದು ಡಾ.ಶಶಾಂಕ್ ಕರಿ ಹೇಳಿದರು.
ಇದನ್ನೂ ಓದಿ: ಮೂಳೆ ಸವೆತ ಮತ್ತು ಮಂಡಿನೋವು: ತಡೆಗಟ್ಟಲು ಇದೆ ತ್ರಿಸೂತ್ರ - how to prevent bone erosion