ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿಯಾಗಿರುವ ಫೌಜಿಯಾ ತರುನ್ನುಮ್ ಕುರಿತು ಅಪಮಾನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿ, ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಅರ್ಜಿದಾರರ ಪರ ವಕೀಲರು, ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ಸೂಚಿಸಿರುವಂತೆ ಅರ್ಜಿದಾರರು ಜಿಲ್ಲಾಧಿಕಾರಿ ಬಳಿಗೆ ತೆರಳಿ ಕ್ಷಮೆಯಾಚಿಸಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.
ಸರ್ಕಾರದ ಪರ ವಕೀಲರು, ಕ್ಷಮೆ ಕೇಳಲು ತೆರಳುವಾಗ ಅರ್ಜಿದಾರರು ದೊಡ್ಡ ರ್ಯಾಲಿ ನಡೆಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ಬಲಬಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿ ಮೇ 29ರಂದು ಹೊರಡಿಸಿದ್ದ ಮಧ್ಯಂತರ ಆದೇಶ ವಿಸ್ತರಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಕಳೆದ ಮೇ 24ರಂದು ಬಿಜೆಪಿಯ ಕಲಬುರಗಿ ಚಲೋ ಪ್ರತಿಭಟನೆ ವೇಳೆ ಮಾತನಾಡಿದ್ದ ರವಿಕುಮಾರ್, ಜಿಲ್ಲಾಡಳಿತವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವದಿಂದ ಕಾರ್ಯನಿರ್ವಹಿಸುತ್ತಿದೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ. ಜಿಲ್ಲಾಧಿಕಾರಿ ಮೇಡಂ ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐಎಎಸ್ ಅಧಿಕಾರಿಯೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಇದರಿಂದ ಕಲಬುರಗಿಯ ಸ್ಟೇಷನ್ ಬಜಾರ್ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅದನ್ನು ರದ್ದುಪಡಿಸಲು ರವಿಕುಮಾರ್ ಮೇ 28 ರಂದು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಕಲಬುರಗಿ ಡಿಸಿ ಕುರಿತು ವಿವಾದಿತ ಹೇಳಿಕೆ ಆರೋಪ: ಬಿಜೆಪಿ ಎಂಎಲ್ಸಿ ರವಿಕುಮಾರ್ ವಿರುದ್ಧ ಕೇಸ್