ವರದಿ: ಮಹೇಶ್
ಮೈಸೂರು: ಎರಡು ಮಕ್ಕಳ ತಾಯಿ 2020ರಲ್ಲಿ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗ್ತಾಳೆ. ಈ ಬಗ್ಗೆ ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸುತ್ತಾರೆ. ಆದರೆ ಸಿಕ್ಕ ಅಪರಿಚಿತ ಶವ ಈತನ ಪತ್ನಿಯದಾಗಿದ್ದು, ಈತನೇ ಕೊಲೆ ಆರೋಪಿ ಎಂದು ಎರಡು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಾನೆ. ಅಚ್ಚರಿ ಎಂಬಂತೆ ಪತಿ ಜೈಲಿನಿಂದ ಬೇಲ್ ಮೇಲೆ ಬಿಡುಗಡೆಯಾದ ಬಳಿಕ ಪತ್ನಿ ತನ್ನ ಪ್ರಿಯಕರನ ಜೊತೆ ಪ್ರತ್ಯಕ್ಷಳಾಗಿದ್ದಾಳೆ!
ಹೌದು, ಈ ಸಿನಿಮೀಯ ಕತೆ ಮೈಸೂರಿನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ಆದಿವಾಸಿ ನಿವಾಸಿ ಸುರೇಶ್ ಅಲಿಯಾಸ್ ಕುರುಬರ ಸುರೇಶ್ ಅವರು ತಪ್ಪು ಮಾಡದೆಯೂ ಶಿಕ್ಷೆ ಅನುಭವಿಸಿದವರು. ಇವರ ಪತ್ನಿ ಮಲ್ಲಿಗೆ ಮೃತಪಟ್ಟಿದ್ದಾಳೆಂದು ನಂಬಿ ಶವ ಸಂಸ್ಕಾರ ಮಾಡಲಾಗಿತ್ತು. ಆದರೆ ಇದೀಗ ಪ್ರಿಯಕರನ ಜೊತೆ ಮಹಿಳೆ ಸಿಕ್ಕಿಬಿದ್ದಿದ್ದಾಳೆ.
2020ರಲ್ಲಿ ತನ್ನ ಸಂಬಂಧಿ ಪ್ರಿಯಕರ ಗಣೇಶ ಎಂಬುವರ ಜೊತೆ ಮಲ್ಲಿಗೆ ಮನೆಯಿಂದ ಓಡಿ ಹೋಗಿದ್ದರು. ಬಳಿಕ ಪತಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಬೆನ್ನಲ್ಲೇ ಬೆಟ್ಟದಪುರದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಈ ಶವದ ಮೇಲಿನ ಬಟ್ಟೆಗಳನ್ನು ಆಧರಿಸಿ ಈಕೆ ತಮ್ಮ ಮಗಳೇ ಎಂದು ಅವರ ತಾಯಿ ಗುರುತಿಸಿ ಕೊಲೆ ಪ್ರಕರಣ ದಾಖಲಿಸಿದ್ದರು. ಇದರಿಂದಾಗಿ ಪ್ರಕರಣ ಜಟಿಲವಾಗಿತ್ತು.
'2020ರಲ್ಲಿ ಬ್ಯಾಂಕಿಗೆ ಹೋಗಿ ಬರುವುದಾಗಿ ಹೇಳಿ ಮಲ್ಲಿಗೆ ಮನೆಯಿಂದ ಹೋಗಿ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದೆವು. ಆದರೆ, ದೂರು ಪಡೆದ ಪೊಲೀಸರು ಮಲ್ಲಿಗೆಯನ್ನು ಹುಡುಕುವುದಾಗಿ ನಮ್ಮನ್ನು ಕರೆದುಕೊಂಡು ಸುತ್ತಿಸಿದರು. ಆದರೂ ಪೊಲೀಸರಿಗೆ ಹುಡುಕಲು ಸಾಧ್ಯವಾಗಿಲಿಲ್ಲ. ಬಳಿಕ 2020ರಲ್ಲಿ ಬೆಟ್ಟದಪುರದಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಈ ಬಗ್ಗೆ ನನ್ನ ವಿರುದ್ಧ ದೂರು ದಾಖಲಾಯಿತು' ಅಂತಾರೆ ಸುರೇಶ್
ಗಣೇಶ್ನ ಹಳೇ ನಂಬರ್ ರಿಂಗ್ ಆಗಿತ್ತು: 'ಮಲ್ಲಿಗೆ ಪ್ರಿಯಕರ ಗಣೇಶ್ನ ಹಳೇ ನಂಬರ್ಗೆ ಕರೆ ಮಾಡಿದ್ದಾಗ ಫೋನ್ ರಿಂಗ್ ಆಗಿತ್ತು. ನಂತರ ಗಣೇಶ್ ಸಿಮ್ ಬದಲಿಸಿ, ಹೊಸ ಸಿಮ್ ತೆಗೆದುಕೊಂಡಿದ್ದಾನೆ ಎಂಬುದು ತಿಳಿಯಿತು. ನಾನು ಗಣೇಶ್ನನ್ನು ತಿತಿಮತಿ ಕಾಡಿನಲ್ಲಿ ಹತ್ಯೆ ಮಾಡಿದ್ದೇನೆಂದು ಪೊಲೀಸರು ನನ್ನ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಪೊಲೀಸರು ಒಂದು ಕೊಲೆ ಕೇಸ್ ಜೊತೆಗೆ ಮತ್ತೊಂದು ಕೊಲೆ ಕೇಸ್ನಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಹೆದರಿಕೆಯಾಗಿತ್ತು' ಎಂದು ಸುರೇಶ್ ಆಗಿನ ಪರಿಸ್ಥಿತಿ ವಿವರಿಸಿದರು.
'ತನಿಖೆ ಸಂದರ್ಭದಲ್ಲಿ ಒಬ್ಬೊಬ್ಬ ಪೊಲೀಸ್ ಒಂದೊಂದು ರೀತಿ ನನ್ನ ಬಗ್ಗೆ ಆರೋಪ ಮಾಡುತ್ತಿದ್ದರು. ಇವನೇ ಕೊಲೆ ಮಾಡಿದ್ದಾನೆ ಎಂದು ಹೇಳುತ್ತಿದ್ದರು. ಆದರೆ ನನ್ನ ಹೆಂಡತಿಯನ್ನು ಪತ್ತೆ ಮಾಡಲು ಯಾರು ಸಹಾಯ ಮಾಡಲಿಲ್ಲ' ಎಂದು ಅಳಲು ತೋಡಿಕೊಂಡಿದ್ದಾರೆ.
ಜೈಲಿನಿಂದ ಹೊರ ಬಂದ ಬಳಿಕ ಗೊತ್ತಾಯಿತು: ಮಲ್ಲಿಗೆ ಮೃತಪಟ್ಟಿದ್ದಾಳೆಂದು ಎಲ್ಲರೂ ನಂಬಿದ್ದರು. ನನ್ನ ಮಕ್ಕಳು ಕೂಡ ಹೇಗೆ ಮತ್ತು ಎಲ್ಲಿ ಏನು ಮಾಡಿದೆ ಎಂದು ನನ್ನನ್ನು ಕೇಳುತ್ತಿದ್ದರು. ನಾನು ಜೈಲಿನಿಂದ ಬಿಡುಗಡೆಯಾದ ಆರು ತಿಂಗಳ ಬಳಿಕ ಮಲ್ಲಿಗೆ ಬದುಕಿರುವ ಬಗ್ಗೆ ದೃಢಪಟ್ಟಿತು. ಆಗ ಇವರನ್ನು ಬಿಡಬಾರದು ಎಂದು ನಿರ್ಧರಿಸಿದೆ ಅಂತಾರೆ ಸುರೇಶ್
ಏ.1 ರಂದು ಪ್ರಿಯಕರನ ಜೊತೆ ಮಹಿಳೆ ಲಾಕ್: '2025ರ ಏಪ್ರಿಲ್ 1ರಂದು ಹೋಟೆಲ್ವೊಂದರಲ್ಲಿ ಮಲ್ಲಿಗೆ ಹಾಗೂ ಆಕೆಯ ಪ್ರಿಯಕರ ಗಣೇಶ್ ಊಟ ಮಾಡುತ್ತಿದ್ದರು. ನನ್ನ ಸ್ನೇಹಿತರು ಗಾಡಿ ಇನ್ಶೂರೆನ್ಸ್ ಮಾಡಿಸುವ ಸಲುವಾಗಿ ಮಡಿಕೇರಿಗೆ ಹೋಗುತ್ತಿದ್ದರು. ಆ ವೇಳೆ, ಮಲ್ಲಿಗೆ ಮತ್ತು ಗಣೇಶ್ನನ್ನು ನೋಡಿದ್ದಾರೆ. ನಂತರ ಅವರ ವಿಡಿಯೋವನ್ನು ತೆಗೆದುಕೊಂಡಿದ್ದಾರೆ. ಬಳಿಕ ಅವರಿಬ್ಬರು ಸುಳ್ಯ - ಪುತ್ತೂರು ಬಸ್ ಏರಿ ಪರಾರಿಯಾಗಲು ಯತ್ನಿಸಿದ್ದರು. ಆದರೆ, ನಮ್ಮ ಸ್ನೇಹಿತರು ಅವರಿಬ್ಬರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ' ಎಂದು ಸುರೇಶ್ ಘಟನೆ ಬಗ್ಗೆ ವಿವರಿಸಿದರು.
ಜೈಲು ಜೀವನ ಯಾರಿಗೂ ಬೇಡ: ಜೈಲುವಾಸಕ್ಕಿಂತ ಸತ್ತು ಹೋಗುವುದೇ ವಾಸಿ, ಅಲ್ಲಿರುವುದು ತುಂಬಾ ಕಷ್ಟ.. ಕೆ.ಆರ್.ನಗರ ಜೈಲಿನಲ್ಲಿದ್ದೆ. ಅಲ್ಲಿನ ನೋವು ಅನುಭವಿಸಿದವರಿಗೇ ಗೊತ್ತು. ದೂರು ನೀಡಿದವರಿಗೇ ತೊಂದರೆ ಕೊಟ್ಟರೆ ನಮ್ಮ ವ್ಯವಸ್ಥೆಯ ಮೇಲೆ ನಂಬಿಕೆ ಹೋಗುತ್ತದೆ. ಯಾರದ್ದೋ ಮೃತದೇಹಕ್ಕೆ ನನ್ನನ್ನು ಹೊಣೆ ಮಾಡಿದರೆ ಹೇಗೆ?. ನ್ಯಾಯಾಲಯದಲ್ಲಿ ಕೇಸ್ ರೀ ಒಪನ್ಗೆ ಆದೇಶ ಮಾಡಿದರೂ ಕೂಡಾ ಪೊಲೀಸರು ಬದುಕಿರುವ ಪತ್ನಿಯನ್ನು ಹಿಡಿದುಕೊಡಲು ಸಾಧ್ಯವಾಗಲಿಲ್ಲ. ಮತ್ತೆ ನಾವು ಯಾರ ಬಳಿ ಹೋಗಿ ನ್ಯಾಯ ಕೇಳುವುದು ಎಂದು ಸುರೇಶ್ ಬೇಸರ ಹೊರಹಾಕಿದರು.
ಮಹಿಳೆಯೊಬ್ಬರು ನನ್ನ ಹೆಂಡತಿಗೆ ತುಂಬಾ ಪರಿಚಯವಿದ್ದರು. ಅವರನ್ನು ಆಗಲೇ ಸರಿಯಾಗಿ ವಿಚಾರಣೆ ಮಾಡಿದ್ದರೆ ನಾನು ಇಷ್ಟೊಂದು ಸಂಕಷ್ಟ ಪಡಬೇಕಾದ ಪರಿಸ್ಥಿತಿಯೇ ಬರುತ್ತಿರಲಿಲ್ಲ ಎಂದು ತುಸು ಖಿನ್ನರಾದರು.
ನನ್ನ ತಾಯಿಗೆ ಕಿವಿ ಕೇಳದಂತಾಗಿದೆ: ತಪ್ಪು ಮಾಡಿದ ಪೊಲೀಸರಿಗೆ ಹಾಗೂ ನನ್ನ ಹೆಂಡತಿ ಮಲ್ಲಿಗೆ ಶಿಕ್ಷೆ ಕೊಡುವ ಬಗ್ಗೆ ನ್ಯಾಯಾಲಯ ತೀರ್ಮಾನ ಮಾಡಬೇಕು. ನನಗೆ ನ್ಯಾಯ ಸಿಗಬೇಕು. ನ್ಯಾಯಾಲಯದ ತೀರ್ಪಿಗೆ ನಾವು ಕಾಯುತ್ತಿದ್ದೇವೆ. ಈಗ ನನ್ನ ಮಕ್ಕಳ ಬದುಕು ಹಾಳಾಯಿತು, ನನ್ನ ತಾಯಿ ಇದೇ ದುಃಖದಲ್ಲಿ ಕೆಳಗೆ ಬಿದ್ದು ಕಿವಿ ಸಂಪೂರ್ಣವಾಗಿ ಕೇಳದಂತಾಗಿದೆ.
ಮಾತು ಕೊಟ್ಟಂತೆ ಅತ್ತೆಯನ್ನು ಸಾಕುತ್ತಿರುವೆ: ನನ್ನ ಅತ್ತೆಗೆ ಒಬ್ಬ ಗಂಡು ಮಗ, ಓರ್ವ ಹೆಣ್ಣು ಮಗಳಿದ್ದರು. 24 ವಯಸ್ಸಿಗೆ ಗಂಡು ಮಗ ಸಾವನ್ನಪ್ಪಿದ. ಇದರಿಂದಾಗಿ ಅತ್ತೆಯನ್ನು ಸಾಕುವವರು ಯಾರೂ ಇರಲಿಲ್ಲ. ಆದ್ದರಿಂದ ಅವರು ನನಗೆ ಮಗಳನ್ನು ಕೊಟ್ಟು ಮದುವೆ ಮಾಡುವ ವೇಳೆ ನಿಮ್ಮನ್ನು ಸಾಕುವುದಾಗಿ ಅತ್ತೆಗೆ ಮಾತು ಕೊಟ್ಟಿದ್ದೆ. ಅದರಂತೆ ಅತ್ತೆಯನ್ನ ನೋಡಿಕೊಳ್ಳುತ್ತಿರುವೆ ಎಂದು ಸುರೇಶ್ ತಿಳಿಸಿದ್ದಾರೆ.
ಸುಳ್ಳು ಕೇಸ್ ದಾಖಲಿಸಿ ನನ್ನ ಮಗನನ್ನು ಜೈಲಿಗೆ ಹಾಕಿದ್ದರು: ಸುರೇಶ್ ತಂದೆ ವಿ.ಗಾಂಧಿ ಮಾತನಾಡಿ, ನನ್ನ ಸೊಸೆ ಸತ್ತಿಲ್ಲ, ಬದುಕಿದ್ದಾಳೆ ಎಂದು ಮುಂಚೆಯೇ ನಮಗೆ ಗೊತ್ತಿತ್ತು. ಸುಳ್ಳು ಕೇಸ್ ದಾಖಲಿಸಿ ನನ್ನ ಮಗನನ್ನು ಜೈಲಿಗೆ ಹಾಕಿದ್ದರು. ಇದು ಪೊಲೀಸರು ಮಾಡಿದ ದೊಡ್ಡ ತಪ್ಪು. ಪೊಲೀಸರಿಗೆ ಸೊಸೆ ಮಲ್ಲಿಗೆಯನ್ನು ಹುಡುಕಿ ಕೊಡುವಂತೆ ಮನವಿ ಮಾಡಿದರೆ, ಹುಡುಕುತ್ತಿರಲಿಲ್ಲ. ನಾವು ದುಡ್ಡು ಕೊಟ್ಟು ಮಲ್ಲಿಗೆಯನ್ನು ಹುಡುಕಲು ಪೊಲೀಸರನ್ನು ಕರೆದುಕೊಂಡು ಹೋಗಬೇಕಿತ್ತು. ನಾವು ದುಡಿದು ತಿನ್ನುವವರು, ಪೆಟ್ರೋಲ್ಗೆ, ಗಾಡಿಗೆ ದುಡ್ಡು ಕೊಟ್ಟು ನಮ್ಮನ್ನು ಕರೆದುಕೊಂಡು ಹೋಗಿ ಎಂದು ಪೊಲೀಸರು ನಮಗೆ ಹೇಳುತ್ತಿದ್ದರು ಎಂದು ದೂರಿದರು.
ಸೊಸೆ ಮಲ್ಲಿಗೆ ಕಾಣಿಸಿದರೆ ನಮಗೆ ತಿಳಿಸಿ ಎಂದು ನಾವು ನಮ್ಮ ಸ್ನೇಹಿತರಿಗೆ ಫೋಟೋ ಕಳುಹಿಸಿಕೊಟ್ಟಿದ್ದೆವು. ಏ.1 ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಲ್ಲಿಗೆ ಮಡಿಕೇರಿಯಲ್ಲಿ ಪತ್ತೆಯಾಗಿದ್ದಾಳೆ. ನಂತರ ದೂರು ಕೊಟ್ಟು, ಮಲ್ಲಿಗೆ ಮತ್ತು ಗಣೇಶ್ನನ್ನು ಪೊಲೀಸರು ವಶಕ್ಕೆ ಒಪ್ಪಿಸಲಾಯಿತು. ಮರು ದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನನ್ನ ಮಗ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಲು ಕಾರಣರಾದ ಪೊಲೀಸ್ ಸಿಬ್ಬಂದಿಗೂ ಸೂಕ್ತ ಕಾನೂನು ಕ್ರಮ ಆಗಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದರು.
ನಮಗೆ ದುಡಿಯಲು ಆಗುವುದಿಲ್ಲ, ಸಾಲ ಕಟ್ಟಬೇಕು: ಸುರೇಶ್ ತಾಯಿ ಮುತ್ತಮ್ಮ ಮಾತನಾಡಿ, ನನ್ನ ಮಗ ಎರಡು ವರ್ಷ ಜೈಲಿನಲ್ಲಿದ್ದ. ನಮ್ಮ ಬಳಿ ಹಣ ಇಲ್ಲದ ಕಾರಣ ಮಗನನ್ನು ಜೈಲಿನಿಂದ ಬಿಡಿಸಲು ಸಾಧ್ಯವಾಗಲಿಲ್ಲ. ಸೊಸೆ ಹುಡುಕಾಡಲು ಮತ್ತು ಕೇಸ್ ವಿಷಯವಾಗಿ ಸಾಕಷ್ಟು ಖರ್ಚು ಮಾಡಿ ಸಾಲವಾಗಿದೆ. ಆ ಬಳಿಕ ನಾವು ವಕೀಲ ಪಾಂಡು ಪೂಜಾರಿ ಅವರನ್ನು ಸಂಪರ್ಕಿಸಿ ಮಗನನ್ನು ಜೈಲಿನಿಂದ ಬಿಡಿಸಿದ್ದೇವೆ. ನಮಗೆ ದುಡಿಯಲು ಆಗುವುದಿಲ್ಲ, ಸಾಲ ಕಟ್ಟಬೇಕು. ಈ ಸಂಕಷ್ಟದ ಸಮಯದಲ್ಲಿ ನನಗೆ ಸರಿಯಾಗಿ ಕಿವಿಯೂ ಕೇಳದಂತಾಗಿದೆ ಎಂದರು.
ಸೊಸೆ ನಮ್ಮ ಮನೆ ಬಿಟ್ಟು ಹೋಗಿ ಎರಡ್ಮೂರು ವರ್ಷ ಆಗಿದೆ. ಆಕೆಗೆ ನಾವು ಯಾವುದೇ ತೊಂದರೆ ಕೊಟ್ಟಿಲ್ಲ, ತನ್ನಿಷ್ಟಕ್ಕೆ ತಾನೇ ಹೋಗಿದ್ದಾಳೆ. ನನ್ನ ಮಗನನ್ನು ಪತಿಯಾಗಿ ಪಡೆಯಲು ಅವಳು ಏಳು ಜನ್ಮದ ಪುಣ್ಯ ಮಾಡಿರಬೇಕು. ನನ್ನ ಸೊಸೆ ಹೀಗೆ ಮಾಡಬಾರದಿತ್ತು, ಈಗ ಮೊಮ್ಮಕ್ಕಳನ್ನು ನಾವೇ ನೋಡಿಕೊಳ್ಳಬೇಕು. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ, ಇದಕ್ಕೆ ಪರಿಹಾರ ಕೊಡುವ ಬಗ್ಗೆ ಕೋರ್ಟ್ ತೀರ್ಮಾನ ಮಾಡಬೇಕು ಎಂದು ಸುರೇಶ್ ತಾಯಿ ಮನವಿ ಮಾಡಿದರು.
ವಕೀಲ ಪಾಂಡು ಪೂಜಾರಿ 'ಈಟಿವಿ ಭಾರತ'ಗೆ ಹೇಳಿದ್ದೇನು?
ಡಿಎನ್ಎ ವರದಿಯಲ್ಲಿಯೂ ಮಿಸ್ ಮ್ಯಾಚ್: ''ಜಾಮೀನಿನ ಮೇಲೆ ಹೊರಬಂದ ನನ್ನ ಕಕ್ಷಿದಾರ ಕೆಲವೊಂದು ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಆಗ ಅವರು ನನ್ನ ಹೆಂಡ್ತಿ ಇನ್ನು ಬದುಕಿದ್ದಾಳೆ. ಬೇರೆ ವ್ಯಕ್ತಿಯೊಬ್ಬನ ಜೊತೆಗಿದ್ದು, ಜೀವನ ನಡೆಸುತ್ತಿದ್ದಾಳೆ ಎಂದು ತಿಳಿಸಿದ್ದರು. ಈ ವಿಷಯವನ್ನು ನಾನು ನ್ಯಾಯಾಲಯದ ಗಮನಕ್ಕೆ ತಂದಿರುತ್ತೇನೆ. ಸಾಕ್ಷಿದಾರರನ್ನು ವಿಚಾರಿಸಿದಾಗ ಒಂದೊಂದಾಗಿ ಸತ್ಯ ಹೊರಬಂದಿದೆ. ಆಕೆಯ ಕೊಲೆಯಾಗಿಲ್ಲ, ಇನ್ನೂ ಬದುಕಿದ್ದಾರೆ. ಬೇರೆ ವ್ಯಕ್ತಿಯೊಂದಿಗೆ ಅವರು ಜೀವನ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಸಾಕ್ಷಿಗಳ ಮೂಲಕ ತಿಳಿದುಬಂದಿತು. ಪತ್ತೆಯಾದ ಮೃತದೇಹವನ್ನು 2022ರಲ್ಲಿ ಡಿಎನ್ಐ ಪರೀಕ್ಷೆ ಮಾಡಲಾಗಿತ್ತು. ಆದರೆ, ಮೃತದೇಹದ ಡಿಎನ್ಐ ಪರೀಕ್ಷೆಯ ವರದಿ ಬರುವ ಮುನ್ನ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಆದರೆ ಅಂತಿಮವಾಗಿ ಡಿಎನ್ಎ ವರದಿಯಲ್ಲಿಯೂ ಮಿಸ್ ಮ್ಯಾಚ್ ಎಂದು ಉಲ್ಲೇಖವಾಗಿತ್ತು'' ಎಂಬುದನ್ನು ವಕೀಲರು ತಿಳಿಸಿದ್ದರು.
ಪತ್ನಿ ಕೊಲೆ ಆರೋಪದ ಮೇಲೆ ಬಂಧಿತನಾದ ಸುರೇಶ್ ಪತ್ನಿಯನ್ನ ಕೊಲೆ ಮಾಡಿಲ್ಲ ಎಂಬುದು ನ್ಯಾಯಾಲಯದ ಮೂಲಕ ಸಾಬೀತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ನ್ಯಾಯಾಲಯ ಸಂಪೂರ್ಣ ವರದಿ ನೀಡುವಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದೆ. ಅದರಂತೆ ಪ್ರಕರಣದ ಆರೋಪಿ ಸುರೇಶ್ ಹಾಗೂ ಆತನ ತಂದೆ ತಾಯಿ ಜೊತೆಗೆ ಮಲ್ಲಿಗೆಯ ಪ್ರತ್ಯೇಕ ವಿಚಾರಣೆ ನಡೆದಿದೆ. ಈ ಬಗ್ಗೆ ಎಸ್ಪಿ ವಿಷ್ಣುವರ್ಧನ್, ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರನ್ನು ವಿಚಾರಣೆ ಮಾಡಿ ಏಪ್ರಿಲ್ 17 ರಂದು ಕೋರ್ಟ್ಗೆ ವರದಿ ಸಲ್ಲಿಸಲಿದ್ದಾರೆ. ಈ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಹೇಗೆ ಎಂಬುದನ್ನ ತೀರ್ಮಾನ ಮಾಡಲಾಗುವುದು - ಪಾಂಡು ಪೂಜಾರಿ, ಸುರೇಶ್ ಪರ ವಕೀಲ.
ಇದನ್ನೂ ಓದಿ: ಐದು ವರ್ಷದ ಮಗು ಕೊಂದ ಮಲತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಚಿಕ್ಕೋಡಿ ಕೋರ್ಟ್