ಮೈಸೂರು: ಶತಮಾನ ಕಂಡ ರಾಜ್ಯದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದಿಂದ ಇನ್ಮುಂದೆ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ದಾಖಲೆಗಳನ್ನು ಪಡೆದುಕೊಳ್ಳಬಹುದು. ಹೌದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ದಾಖಲೆ ಪಡೆಯುವ ಸೇವೆಯನ್ನು ಮೈಸೂರು ವಿವಿ ಜಾರಿಗೆ ತರಲು ಮುಂದಾಗಿದೆ.
ಪದವಿ, ಸ್ನಾತಕೋತ್ತರ ಪದವಿ ಅಂಕಪಟ್ಟಿ ದೋಷ, ಅಂಕಪಟ್ಟಿ ತಿದ್ದುಪಡಿ, ಘಟಿಕೋತ್ಸವ ಪ್ರಮಾಣ ಪತ್ರ, ಅಂಕಪಟ್ಟಿ ಕ್ರೋಢೀಕರಣ ಸೇರಿದಂತೆ ಒಟ್ಟು 28 ಬಗೆಯ ಪ್ರಮಾಣ ಪತ್ರಗಳನ್ನು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪಡೆಯಬಹುದು.
ಮೈಸೂರು ನಗರ, ಗ್ರಾಮಾಂತರ, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಸೇರಿದಂತೆ ವಿವಿಧೆಡೆಯ ವಿದ್ಯಾರ್ಥಿಗಳು ಮೈಸೂರು ವಿವಿ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈ ವಿದ್ಯಾರ್ಥಿಗಳು ಅಂಕಪಟ್ಟಿ, ವರ್ಗಾವಣೆ ಪತ್ರ ಸೇರಿದಂತೆ 28 ಬಗೆಯ ಪ್ರಮಾಣ ಪತ್ರ ಪಡೆಯಲು ತಮ್ಮ ಗ್ರಾಮದಿಂದ ಮೈಸೂರಿಗೆ ಬಂದು ಕ್ರಾಫರ್ಡ್ ಹಾಲ್, ಸಂಶೋಧನಾ ವಿಭಾಗ, ಬ್ಯಾಂಕ್ಗೆ ಅಲೆಯಬೇಕಾಗುತ್ತಿತ್ತು. ಇದಕ್ಕೆ ಇನ್ಮೇಲೆ ಅಂತ್ಯವಾಗಲಿದೆ. ಮುಂದಿನ ವಾರದಿಂದ ಈ ಸೇವೆ ನೀಡಲು ವಿವಿ ಪರೀಕ್ಷಾಂಗ ವಿಭಾಗ ತೀರ್ಮಾನಿಸಿದ್ದು, ಏಪ್ರಿಲ್ ಅಂತ್ಯದೊಳಗೆ ಲೋಕಾರ್ಪಣೆಗೊಳ್ಳಲಿದೆ ಎನ್ನುತ್ತಾರೆ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ.
ಪ್ರಮಾಣ ಪತ್ರಕ್ಕಾಗಿ ಡಿಜಿಟಲ್ ಮೊರೆ: ಬಹುತೇಕ ವಿದ್ಯಾರ್ಥಿಗಳು ಡಿಗ್ರಿ ಪೊರೈಸಿ ಎಷ್ಟೋ ವರ್ಷಗಳಾಗಿರುತ್ತದೆ. ಆದರೆ, ಅವರು ಪ್ರಮಾಣ ಪತ್ರವನ್ನೇ ಪಡೆದುಕೊಂಡಿರುವುದಿಲ್ಲ. ಕೆಲವರು ಘಟಿಕೋತ್ಸವ ಪ್ರಮಾಣ ಪತ್ರ ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿರುತ್ತಾರೆ. ಇನ್ನು ಕೆಲವರಿಗೆ ವಲಸೆ ಪತ್ರ, ನಕಲಿ ಪ್ರಮಾಣ ಪತ್ರ ಬೇಕಿರುತ್ತದೆ. ಒಂದು ಪ್ರಮಾಣ ಪತ್ರ ಪಡೆಯಲು ಬೆಳಗ್ಗೆಯಿಂದ ಸಂಜೆಯವರೆಗೂ ಅಲೆಯಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಇನ್ಮುಂದೆ ವಿದ್ಯಾರ್ಥಿಗಳು ಆನ್ಲೈನ್ನಲ್ಲೇ ಎಲ್ಲಾ ದಾಖಲಾತಿಯನ್ನು ಅಪ್ಲೋಡ್ ಮಾಡಿ, ಹಣ ಜಮಾ ಮಾಡಿ ವಾರದೊಳಗೆ ಪ್ರಮಾಣಪತ್ರ ಪಡೆಯಬಹುದು. ಇದರಿಂದ ವಿವಿಗೆ ಅಲೆಯುವುದೂ ತಪ್ಪುತ್ತದೆ. ಡಿಜಿಟಲ್ ವ್ಯವಸ್ಥೆಯೂ ಸಾಕಾರಗೊಳ್ಳುತ್ತದೆ.

ಸಮಯ ಉಳಿತಾಯ: ಈ ಹಿಂದೆ ಮೈಸೂರು ವಿವಿಯಲ್ಲಿ ಸಕಾಲ ಸೇವೆ ಜಾರಿಯಲ್ಲಿತ್ತು. ವಿದ್ಯಾರ್ಥಿಗಳ ಯಾವುದೇ ಕೆಲಸವನ್ನು 20 ದಿನದೊಳಗೆ ಮುಗಿಸಿಕೊಡಲು ಈ ಸೇವೆಯನ್ನು ಆರಂಭಿಸಲಾಗಿತ್ತು. ಕಚೇರಿಯ ಸಿಬ್ಬಂದಿ ಅಥವಾ ಅಧಿಕಾರಿಗಳು ನಿಗದಿಪಡಿಸಿದ ಗುರಿ ತಲುಪುವಲ್ಲಿ ವಿಫಲವಾದರೆ ಪ್ರತಿ ಅರ್ಜಿಗೆ ದಿನಕ್ಕೆ 20 ರೂ. ದಂಡ ವಿಧಿಸಲು ಅವಕಾಶವಿತ್ತು. ಈ ಮೊತ್ತವನ್ನು 500 ರೂ. ವರೆಗೆ ಹೆಚ್ಚಿಸಲು ಅವಕಾಶವಿತ್ತು. ದಂಡದ ಮೊತ್ತವನ್ನು ಉದ್ಯೋಗಿಯ ಸಂಬಳದಲ್ಲಿ ಕಡಿತ ಮಾಡಲು ಮೈಸೂರು ವಿವಿ ಸೂಚನೆಯನ್ನೂ ನೀಡಿತ್ತು. ಆದರೆ, ಕೆಲವೇ ವರ್ಷಗಳ ನಂತರ ಇದು ನಿಂತು ಹೋಯಿತು. ಇದೀಗ ಆನ್ ಲೈನ್ ಸೇವೆ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿಕೊಡಲಿದೆ.
ವಿಲೇವಾರಿ ತ್ವರಿತ: ಆನ್‌ಲೈನ್ ಮೂಲಕ ಅರ್ಜಿ ಒದಗಿಸಲು ವಿವಿ ಸಿಬ್ಬಂದಿಗೆ ಆನ್ ಲೈನ್ ತರಬೇತಿ ನೀಡಲಾಗಿದೆ. ಸಿಬ್ಬಂದಿಯು ಪ್ರತಿ ಆನ್ ಲೈನ್ ಅರ್ಜಿ ಮತ್ತು ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ ಅಂತಿಮ ಮುದ್ರೆ ಒತ್ತಿದ ನಂತರ ಸರ್ಟಿಫಿಕೆಟ್ ಪಡೆಯಬಹುದು. ಇದಕ್ಕಾಗಿ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಹಾಕಿದ ವಾರದೊಳಗೆ ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆಯಬಹುದು. ತುರ್ತು ಇದ್ದವರು ಆನ್ಲೈನ್ನಲ್ಲಿ ಅರ್ಜಿ ಹಾಕಿ, ಎರಡು ದಿನದೊಳಗೆ ವಿವಿಗೆ ಬಂದು ಆಫ್ಲೈನ್ನಲ್ಲೂ ಪ್ರಮಾಣಪತ್ರ ಪಡೆಯಬಹುದು ಎನ್ನುತ್ತಾರೆ ಮೈಸೂರು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಎನ್.ನಾಗರಾಜ್.
ಪ್ರಯೋಜನ ಹೇಗೆ?: ಆನ್‌ಲೈನ್ ಸೇವೆಯಿಂದ ಮೈಸೂರು ವಿವಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ, ವಿದ್ಯಾರ್ಥಿಗಳ ಸಮಯ ಉಳಿತಾಯ, ಪೇಪರ್ ಬಳಕೆಗೆ ಕಡಿವಾಣ, ಆಡಳಿತದಲ್ಲಿ ಪಾರದರ್ಶಕತೆ ತರಲು ಅನುಕೂಲವಾಗಲಿದೆ.
ಇದನ್ನೂ ಓದಿ: ಪದವಿ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಪರೀಕ್ಷೆ ಬರೆದು ಕನಸು ನನಸು ಮಾಡಿಕೊಳ್ಳಿ