ಬೆಂಗಳೂರು: ಹಣದಾಸೆಗೆ ಯುವಕನನ್ನು ಹತ್ಯೆಗೈದಿದ್ದ ಪ್ರಕರಣದ ಇಬ್ಬರು ಆರೋಪಿಗಳನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ವಿಕಾಸ್ ಕುಮಾರ್ ಮಾಚೋತ್ (25) ಎಂಬಾತನನ್ನು ಹತ್ಯೆಗೈದಿದ್ದ ಆರೋಪದಡಿ ಸಂತೋಷ್ ಕುಮಾರ್ (19) ಹಾಗೂ ಮತ್ತೋರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 6ರಂದು ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಹೋಬನಹಳ್ಳಿಯ ಪಂಚಮುಖಿ ಲೇಔಟ್ ಬಳಿ ಆರೋಪಿಗಳು ವಿಕಾಸ್ ಕುಮಾರ್‌ನನ್ನು ಹತ್ಯೆ ಮಾಡಿದ್ದರು. ಆರಂಭದಲ್ಲಿ ಮೃತನ ಗುರುತು ಪತ್ತೆಯಾಗಿರಲಿಲ್ಲ. ನಂತರ ಆತ ಬಿಹಾರ ಮೂಲದ ಕಟ್ಟಡ ಕಾರ್ಮಿಕ ವಿಕಾಸ್ ಕುಮಾರ್ ಮಚೋತ್ ಎಂದು ಪೊಲೀಸರು ಪತ್ತೆ ಹಚ್ಚಿದ್ದರು.
ಕಡಬಗೆರೆಯಲ್ಲಿ ವಾಸವಾಗಿದ್ದ ವಿಕಾಸ್ ಕುಮಾರ್, ಶನಿವಾರ ಅಂದ್ರಹಳ್ಳಿಯಲ್ಲಿ ಕಟ್ಟಡ ಕಾಮಗಾರಿ ಕೆಲಸ ಮುಗಿಸಿಕೊಂಡು ನಡೆದುಕೊಂಡೇ ಮನೆ ಕಡೆ ಹೊರಟ್ಟಿದ್ದ. ಮಾರ್ಗಮಧ್ಯೆ ವಿಕಾಸ್ ಕುಮಾರ್‌ನನ್ನು ಗಮನಿಸಿದ್ದ ಆರೋಪಿಗಳು, ಆತನ ಬ್ಯಾಗ್‌ನಲ್ಲಿ ಹಣ ಇರಬಹುದು ಎಂದು ಭಾವಿಸಿ, ಹಲ್ಲೆ ನಡೆಸಿ, ಕರಿಹೋಬನಹಳ್ಳಿ ಕಡೆ ಎಳೆದೊಯ್ದಿದ್ದರು. ಆದರೆ, ವಿಕಾಸ್ ಕುಮಾರ್‌ನ ಬಳಿ ಯಾವುದೇ ಹಣ ಇರಲಿಲ್ಲ. ಅಷ್ಟರಲ್ಲಿ ಆರೋಪಿಗಳ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದ. ಹೀಗಾಗಿ ವಿಕಾಸ್ ಕುಮಾರ್‌ನ ಮೃತದೇಹವನ್ನು ಕರಿಹೋಬನಹಳ್ಳಿಯ ಪಂಚಮುಖಿ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದ ಪೀಣ್ಯ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ವಿಕಾಸ್ ಕುಮಾರ್ ಸಾಗಿದ್ದ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹತ್ಯೆಯ ಕಾರಣ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಆರ್ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಮೇಲೆ ಬೆಟ್ಟಿಂಗ್: ಮೂವರ ಬಂಧನ