ಮಂಗಳೂರು: ಇಲ್ಲಿನ ಸುರತ್ಕಲ್‌ನ ಎನ್ಐಟಿಕೆ ಬೀಚ್‌ನಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿದ ಮುಂಬೈ ಮೂಲದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಮತ್ತೋರ್ವನನ್ನು ಲೈಫ್ ಗಾರ್ಡ್ ಸಮುದ್ರದಿಂದ ಮೇಲಕ್ಕೆತ್ತಿದರೂ ದುರಾದೃಷ್ಟವಶಾತ್, ತೀವ್ರ ಅಸ್ವಸ್ಥಗೊಂಡಿದ್ದ ಆತ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾನೆ.
ಮುಂಬೈ ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಧ್ಯಾನ್ ಬಂಜನ್(18), ಹಾಗೂ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಹನೀಶ್ ಕುಲಾಲ್ (15) ಮದುವೆಗೆಂದು ಸೂರಿಂಜೆಯ ಪ್ರಖ್ಯಾತ್ ಎಂಬವರ ಮನೆಗೆ ಬಂದಿದ್ದರು. ಮಂಗಳವಾರ ಸಂಜೆ 5.30ಕ್ಕೆ ಧ್ಯಾನ್ ಹಾಗೂ ಹನೀಶ್ ಸೇರಿದಂತೆ 10 ಮಂದಿ ಸೂರಿಂಜೆಯ ಮನೆಯಿಂದ ಎನ್ಐಟಿಕೆ ಬೀಚ್‌ಗೆ ವಿಹಾರಕ್ಕೆಂದು ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮುದ್ರಕ್ಕೆ ಇಳಿದ ಧ್ಯಾನ್ ಹಾಗೂ ಹನೀಶ್ ಕುಲಾಲ್ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ. ಇದನ್ನು ಗಮನಿಸಿದ ಲೈಫ್ ಗಾರ್ಡ್ ಪ್ರದೀಪ್ ಆಚಾರ್ಯ ಎಂಬವರು ಧ್ಯಾನ್ ಬಂಜನ್‌ನನ್ನು ದಡಕ್ಕೆ ಎಳೆದು ತಂದಿದ್ದಾರೆ. ಆದರೆ ಹನೀಶ್ ಕುಲಾಲ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಧ್ಯಾನ್ನನ್ನು ತಕ್ಷಣ ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸುವ ವೇಳೆಗಾಗಲೇ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋ ಕಾಮಗಾರಿ ವೇಳೆ ಬೃಹತ್ ತಡೆಗೋಡೆ ಉರುಳಿ ಬಿದ್ದು ಆಟೋ ಚಾಲಕ ಸಾವು