ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಆರೋಪ ಪ್ರಕರಣ ಸಂಬಂಧ ಸುಳ್ಳು ತನಿಖಾ ವರದಿ ನೀಡಿರುವುದಾಗಿ ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಕೇಂದ್ರ ಜಾಗೃತ ಆಯೋಗಕ್ಕೆ ನೀಡಿದ್ದ ದೂರನ್ನು ಸ್ವೀಕರಿಸಿ ಪರಿಶೀಲಿಸುವುದಾಗಿ ತಿಳಿಸಿದೆ.
ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಮೊಬೈಲ್ಗೆ ಮೂರು ದಿನಗಳ ಹಿಂದೆ ಸಂದೇಶ ಕಳುಹಿಸಿರುವ ಆಯೋಗವು ದೂರು ಸ್ವೀಕರಿಸಿ ಪರಿಶೀಲಿಸಿದ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಮುಡಾ ಹಗರಣ ಸಂಬಂಧ ಲೋಕಾಯುಕ್ತ ಎಡಿಜಿಪಿ ಮನೀಶ್ ಕರ್ಬೀಕರ್, ಐಜಿಪಿ ಸುಬ್ರಮಣ್ಯೇಶ್ವರಾವ್ ಹಾಗೂ ತನಿಖಾಧಿಕಾರಿಯಾಗಿರುವ ಎಸ್ಪಿ ಟಿ.ಜೆ. ಉದೇಶ್ ವಿರುದ್ಧ ಕರ್ತವ್ಯ ಲೋಪವೆಸಗಿದ್ದು, ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕೋರಿ ಕಳೆದ ಮಾರ್ಚ್ 12ರಂದು ಸ್ನೇಹಮಯಿ ಕೃಷ್ಣ ಅವರು ದೂರು ನೀಡಿದ್ದರು. ಸದ್ಯ ದೂರು ದಾಖಲಿಸಿಕೊಂಡಿರುವ ಆಯೋಗವು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಮುಡಾ ವ್ಯಾಪ್ತಿಯ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹಾಗೂ ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರಿನ ಮೇರೆಗೆ ಎಫ್ಆರ್ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ದೋಷಾರೋಪಪಟ್ಟಿ ಸಲ್ಲಿಸಿದ್ದರು. ವರದಿಯಲ್ಲಿ ಸಿದ್ದರಾಮಯ್ಯ ಹಾಗೂ ಕುಟುಂಬಸ್ಥರಿಗೆ ಕ್ಲೀನ್ ಚಿಟ್ ನೀಡಿದ್ದರು. ಆರೋಪಿತರ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಿದ್ದರೂ ಸಮಗ್ರ ತನಿಖೆ ನಡೆಸದೆ ಆರೋಪಿಗಳಿಗೆ ಅನೂಕಲವಾಗುವ ರೀತಿಯಲ್ಲಿ ವರದಿ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ನೇಹಮಯಿ ಕೃಷ್ಣ ಅವರು ದೂರು ನೀಡಿದ್ದರು.
ಇದನ್ನೂ ಓದಿ: ಸೂಕ್ತ ದಾಖಲಾತಿ ನೀಡುವಂತೆ EDಯಿಂದ ಮುಡಾ ಆಯುಕ್ತರಿಗೆ ಪತ್ರ - MUDA CASE