ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಕಾನೂನು ಬಾಹಿರವಾಗಿ ನಿವೇಶನ ಪಡೆದುಕೊಂಡಿರುವ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸುವಂತೆ ಸಲ್ಲಿಕೆಯಾಗಿದ್ದ ಎರಡು ಖಾಸಗಿ ದೂರುಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಇಂದು ಮುಂದೂಡಿದೆ.
ಪ್ರಕರಣ ಸಂಬಂಧ ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ.ಅಬ್ರಹಂ ದಾಖಲಿಸಿದ್ದ ಪ್ರತ್ಯೇಕ ದೂರುಗಳ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ಟ ಅವರು ವಿಚಾರಣೆ ಮುಂದೂಡಿದರು. ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರಿನ ಸಂಬಂಧ ಅಂತಿಮ ಆದೇಶ ಕಾಯ್ದಿರಿಸಿದರೆ, ಅಬ್ರಹಂ ದೂರನ್ನು ಮುಂದಿನ ವಿಚಾರಣೆಗಾಗಿ ಮುಂದೂಡಿದರು.
ವಿಚಾರಣೆ ವೇಳೆ ದೂರುದಾರ ಸ್ನೇಹಮಹಿ ಕೃಷ್ಣ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್, ಲಾಲು ಪ್ರಸಾದ್ ಯಾದವ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ, ಭ್ರಷ್ಟಾಚಾರ ತಡೆ ಕಾಯ್ದೆ 19ರ ಅಡಿಯಲ್ಲಿ ತನಿಖೆಗೆ ಆದೇಶ ನೀಡಬಹುದಾಗಿದೆ. ಆದರೆ, ನೇರವಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡಲ್ಲಿ ಮಾತ್ರ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅನುಮತಿ ಅಗತ್ಯವಿಲ್ಲ. ಹೀಗಾಗಿ ತನಿಖೆಗೆ ಆದೇಶ ನೀಡಬಹುದಾಗಿದೆ ಎಂದರು.
ಇದಕ್ಕೆ ನ್ಯಾಯಾಧೀಶರು, ಕಾಗ್ನಿಸೆನ್ಸ್ ತೆಗೆದುಕೊಂಡು ದೂರುದಾರರ ಹೇಳಿಕೆ ದಾಖಲಿಸಬೇಕು. ಅದು ಪೊಲೀಸರಿಂದ ತನಿಖೆ ಬೇಕಾಗುತ್ತದೆ. ಅದಕ್ಕೆ ಪೂರ್ವಾನುಮತಿ ಅತ್ಯಗತ್ಯವಿರಲಿದೆ. ಗೌರ್ನರ್ ಅವರಿಂದ ಪೂರ್ವಾನುಮತಿ (ಸ್ಯಾನ್ಷನ್ ) ಇಲ್ಲದೇ ಹೇಗೆ ಪರಿಗಣಿಸುವುದು? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇದಕ್ಕೆ ವಕೀಲರು, ಈ ಹಂತದಲ್ಲಿ ಪೂರ್ವಾನುಮತಿ ಅವಶ್ಯಕತೆ ಇಲ್ಲ. ಕನಿಷ್ಠ ಬಿಎನ್‌ಎಸ್‌ಎಸ್ ಸೆಕ್ಷನ್‌ಗಳನ್ನು ಪರಿಗಣಿಸಿ ದೂರು ಸ್ವೀಕರಿಸಲು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಧೀಶರು ಅಂತಿಮ ಆದೇಶವನ್ನು ಆಗಸ್ಟ್ 20ಕ್ಕೆ ಕಾಯ್ದಿರಿಸಿದರು.
ಅಬ್ರಹಂ ವಾದ ಮಂಡನೆ: ಎರಡನೇ ಖಾಸಗಿ ದೂರ ಸಂಬಂಧ ವಾದಿಸಿದ ದೂರುದಾರ ಟಿ.ಜೆ.ಅಬ್ರಹಂ, ನಾನು ಸಲ್ಲಿಸಿರುವ ದೂರು ಹಾಗೂ ಈಗಾಗಲೇ ದಾಖಲಾಗಿರುವ ದೂರು ಸಂಪೂರ್ಣ ವಿಭಿನ್ನವಾಗಿದೆ.1998-99 ಆ ಜಾಗ ಮುಡಾದ ವಶದಲ್ಲಿತ್ತು. ಬಳಿಕ 1998 ಮಾರ್ಚ್ ಬಳಿಕ ಅದನ್ನು ಡಿನೋಟಿಫಿಕೇಷನ್ ಅರ್ಜಿ ಸಲ್ಲಿಸಲಾಗಿತ್ತು. 2001ರಿಂದ 2003ರ ತನಕವೂ ಮುಡಾ ಹೆಸರಲ್ಲಿಯೇ ಇತ್ತು. ಅಷ್ಟರಲ್ಲಿ ಆ ಪ್ರದೇಶ ಸಾಕಷ್ಟು ಅಭಿವೃದ್ಧಿ ಆಗಿತ್ತು. ದೇವನೂರು ಬಡಾವಣೆ ಎಂಬುದಾಗಿ ಹೆಸರು ಪಡೆದುಕೊಂಡಿತ್ತು. ಆ ನಂತರ, ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಯಾಗಿದೆ. ಅಲ್ಲಿದ್ದ ಖಾಲಿ ಜಾಗಕ್ಕೆ ನಕಲಿ ದಾಖಲೆ ಸೃಷ್ಡಿಯಾಗಿದೆ. ಈ ಜಮೀನನ್ನು ಮಾರಿದವರಿಗೆ ಮುಡಾದಿಂದ ನಿವೇಶ ನೀಡಲಾಗಿತ್ತು. ಆದರೆ, ಜಮೀನನ್ನು ಮಾರಿದ್ದ ವ್ಯಕ್ತಿ 2004ರ ವರೆಗೂ ಕಂದಾಯ ಕಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಅಲ್ಲದೆ, ಪ್ರಕರಣದ ಆರೋಪಿಯಾಗಿರುವ ಸಿದ್ದರಾಮಯ್ಯ ಏಪ್ರಿಲ್ 2013ರ ಚುನಾವಣಾ ಪ್ರಮಾಣ ಪತ್ರದಲ್ಲಿ ಈ ಅಂಶವನ್ನು ವಿವರಿಸಬೇಕಾಗಿತ್ತು. ಆದರೆ, ಅದನ್ನು ತೋರಿಸಿಲ್ಲ. ಲೋಕಾಯುಕ್ತಕ್ಕೆ ದಾಖಲೆ ಸಲ್ಲಿಸುವ ವಿವರದಲ್ಲಿಯೂ ಈ ಮಾಹಿತಿ ಮುಚ್ಚಿಟ್ಟಿದ್ದಾರೆ. ಈ ಆಸ್ತಿ ಅಕ್ರಮ ಗಳಿಕೆ ಆದ್ದರಿಂದ ಈ ಅಂಶ ಜನರಿಗೆ ಗೊತ್ತಾಗದಂತೆ ಮುಚ್ಚಿಟ್ಟಿದ್ದಾರೆ. ಆ ಜಮೀನಿಗೆ ಸಂಬಂಧಿಸಿದಂತೆ ಪರಿಹಾರಕ್ಕಾಗಿ ಸಿದ್ದರಾಮಯ್ಯ ಪತ್ನಿ ನಗರಾಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ತೀರ್ಮಾನಕ್ಕೆ ಬರಲಾಗುತ್ತದೆ. ಆದೇ ಬಡಾವಣೆ ಹೊರತು ಪಡಿಸಿ ಹಳೆಯ ಬಡಾವಣೆಯಲ್ಲಿ ಬದಲಿ ನಿವೇಶನಕ್ಕಾಗಿ ಮನವಿ ಮಾಡುತ್ತಾರೆ.
ಜೊತೆಗೆ, ದೇವನೂರು ಬಡಾವಣೆಯನ್ನು ಕೆಸರೆ ಗ್ರಾಮ ಎಂದು ತೋರಿಸಿ ಅಭಿವೃದ್ಧಿಯಾದ ಬಡಾವಣೆಯನ್ನೇ ಕೃಷಿ ಭೂಮಿಯನ್ನಾಗಿ ಮಾಡುತ್ತಾರೆ. ಇದನ್ನು ಭೂಸ್ವಾಧೀನಾಧಿಕಾರಿಗಳು ಪರಿಗಣಿಸಿ ಆರೋಪಿಗೆ ಅಭಿವೃದ್ಧಿ ಪಡಿಸಿರುವ ಬಡಾವಣೆಯಲ್ಲಿ 55 ಕೋಟಿ ರೂ. ಬೆಲೆ ಬಾಳುವ ನಿವೇಶನಗಳನ್ನು ಹಂಚಿಕೆ ಮಾಡುತ್ತಾರೆ. ಇದು ಸಂಪೂರ್ಣ ಕಾನೂನು ಬಾಹಿರ ಎಂದು ಅಬ್ರಹಂ ವಿವರಿಸಿದರು.
ಬದಲಿ ನಿವೇಶನ ಹಂಚಿಕೆ ಮಾಡುವ ಸಂಬಂಧದ ಸಭೆಯಲ್ಲಿ ಸ್ಥಳೀಯ ಶಾಸಕರಾಗಿದ್ದ ಆರೋಪಿತರ ಮಗ ಯತೀಂದ್ರ ಭಾಗಿಯಾಗುತ್ತಾರೆ. ಈ ಸಭೆಯಲ್ಲಿ ಬದಲಿ ನಿವೇಶನ ನೀಡಲು ನಿರ್ಧಾರ ಕೈಗೊಳ್ಳಲಾಗಿರುತ್ತದೆ. ಈ ಪ್ರಕ್ರಿಯೆ ಸಂಪೂರ್ಣ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ನಡೆಸಿದ ಹಗರಣವಾಗಿದೆ.
ಪ್ರಕರಣ ಸಂಬಂಧ ಈಗಾಗಲೇ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ, ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದೇನೆ. ಜತೆಗೆ, ರಾಜ್ಯಪಾಲರಿಂದ ಅನುಮತಿ ಕೋರಿ ಮನವಿ ಮಾಡಿದ್ದೇನೆ. ಹೀಗಾಗಿ ನಮ್ಮ ಅರ್ಜಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆಯಡಿ ವಾದ ಮಂಡಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು, ಇದಕ್ಕೆ ಅನುಮತಿಸಿದ ನ್ಯಾಯಾಧೀಶರು ವಿಚಾರಣೆನ್ನು 21ಕ್ಕೆ ಮುಂದೂಡಿದರು.
ಇದನ್ನೂ ಓದಿ: ನನ್ನ ಮೇಲೆ ದ್ವೇಷ ಸಾಧಿಸಿ ರಾಜ್ಯ ಹಾಳು ಮಾಡಿಕೊಳ್ಳಬೇಡಿ: ಹೆಚ್.ಡಿ.ಕುಮಾರಸ್ವಾಮಿ - HMT Land