ಹುಬ್ಬಳ್ಳಿ: "ಬಾಲಕಿ ಹತ್ಯೆ ಪ್ರಕರಣ ಜನರ ಮನಸ್ಸಿಗೆ ತುಂಬಾ ಘಾಸಿಗೊಳಿಸಿದೆ, ಈ ರೀತಿ ಪ್ರಕರಣ ನಡೆಯಬಾರದಿತ್ತು. ಮೃತ ಬಾಲಕಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು" ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ, ಇನ್ನೂ ಹೆಚ್ಚಿನ ಪರಿಹಾರಕ್ಕಾಗಿ ಸರ್ಕಾರ ಮುಂದಾಗಬೇಕು. ಬಾಲಕಿಯ ತಂದೆ ತಾಯಿ ಅತ್ಯಂತ ಬಡ ಕುಟುಂಬದವರು, ಈ ರೀತಿ ಬಾಲಕಿ ಮೇಲೆ ನಡೆದಿರುವುದು ಅತ್ಯಂತ ರಾಕ್ಷಸಿ ಕೃತ್ಯ. ಈ ಬಗ್ಗೆ ಅಧಿಕಾರಿಗಳ ಜೊತೆಗೂ ಸಹ ನಾನು ಮಾತನಾಡಿದ್ದೇನೆ. ಪೊಲೀಸರು ಶೀಘ್ರವೇ ಕ್ರಮ ಕೈಗೊಂಡಿದ್ದಾರೆ. ಈ ರೀತಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನ್ಯಾಯ ಕೊಡಿಸಿರುವುದು ಅತ್ಯಂತ ಶ್ಲಾಘನೀಯ, ಮಹಿಳಾ ಪಿಎಸ್‌ಐ ಕಾರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.
"ರಾಜ್ಯದಲ್ಲಿ ಇಂತಹ ಪ್ರಕರಣಗಳು ಪದೇ ಪದೆ ನಡೆಯುತ್ತಿವೆ. ಆದ್ರೆ ಇತ್ತೀಚೆಗೆ ಗೃಹ ಸಚಿವರು ಇಂತಹ ಪ್ರಕರಣಗಳ ವಿಚಾರದಲ್ಲಿ, ಬೇಜಾವಾಬ್ದಾರಿತನದ ಹೇಳಿಕೆ ನೀಡಿದ್ರು, ಇಂತಹ ಹೇಳಿಕೆ ನೀಡುವುದು ಒಬ್ಬ ಗೃಹಮಂತ್ರಿಗೆ ಶೋಭೆ ತರುವಂತದ್ದಲ್ಲ. ನಗರದ ಪ್ರದೇಶಗಳಲ್ಲಿ ಗಾಂಜಾ ಸೇವನೆ, ಗಾಂಜಾ ಮಾರಾಟ ಯಥೇಚ್ಚವಾಗಿ ನಡೆಯುತ್ತಿದೆ. ಈ ವಿಚಾರದಲ್ಲಿ ಗಾಂಜಾ ಮಾರಾಟ ಮೂಲವನ್ನ ಪತ್ತೆ ಹಚ್ಚುವ ನಿಟ್ಟಿನಲ್ಲಿ ಮುಂದಾಗಬೇಕು, ಗಾಂಜಾ ಮೂಲವನ್ನ ಪತ್ತೆಹಚ್ಚು ಕೆಲಸಕ್ಕೆ ಮುಂದಾದ್ರೆ ಮಾತ್ರ ಇಂತಹ ಪ್ರಕರಣಗಳನ್ನ ತಡೆಗಟ್ಟಲು ಸಾಧ್ಯ" ಎಂದರು.
ಕೊಲೆಯಾದ ಬಾಲಕಿಯ ಮನೆಗೆ ತೆರಳಿ ಸಾಂತ್ವನ ಹೇಳಿದ ಮಹಿಳಾ ಆಯೋಗದ ಅಧ್ಯಕ್ಷೆ: ಮತ್ತೊಂದೆಡೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ವಿಶ್ವೇಶ್ವರ ನಗರದಲ್ಲಿರುವ ಕೊಲೆಯಾದ ಬಾಲಕಿಯ ಮನೆಗೆ ಸೋಮವಾರ ರಾತ್ರಿ ಭೇಟಿ ಕೊಟ್ಟು ಪಾಲಕರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಕ್ಕಳು, ಮಹಿಳೆಯರ ಮೇಲೆ ನಡೆಯುತ್ತಿರುವ ಹೇಯ ಕೃತ್ಯಗಳ ಬಗ್ಗೆ ಅಂಕಿ - ಸಂಖ್ಯೆ ಸಂಗ್ರಹಿಸಿ ಕೇಂದ್ರ-ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಹೇಯ ಕೃತ್ಯ ಎಸಗುವವರ ಮೇಲಿನ ಪ್ರಕರಣ ಬೇಗನೆ ವಿಲೇವಾರಿಯಾಗಿ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ತ್ವರಿತ ನ್ಯಾಯಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ಆಯೋಗಕ್ಕೆ ಪತ್ರ ಬರೆದಿದ್ದೇನೆ. ನೇಹಾ ಹಿರೇಮಠ ಕೊಲೆ ಪ್ರಕರಣ ಸಂದರ್ಭದಲ್ಲೂ ತ್ವರಿತ ನ್ಯಾಯಾಲಯ ಸ್ಥಾಪಿಸಲು ಕೋರಿದ್ದೆ. ಆದರೆ, ಈಡೇರಲಿಲ್ಲ. ಕಾನೂನು ವ್ಯವಸ್ಥೆಗೆ ತಲೆಬಾಗಬೇಕಾಗುತ್ತದೆ" ಎಂದರು.
ಇದನ್ನೂ ಓದಿ:'ಮಗಳಿಗೆ ಒಳ್ಳೆ ಶಿಕ್ಷಣ ಕೊಡಿಸಿ ಉನ್ನತ ಸ್ಥಾನದಲ್ಲಿ ನೋಡಬೇಕೆಂದುಕೊಂಡಿದ್ದ ತಾಯಿಯ ಕನಸು ನುಚ್ಚುನೂರು'
ಇದನ್ನೂ ಓದಿ: ಹುಬ್ಬಳ್ಳಿ ಬಾಲಕಿ ಕೊಲೆಗೈದ ಆರೋಪಿಗೆ ಗುಂಡಿಕ್ಕಿದ ಪೊಲೀಸ್ ಇಲಾಖೆಗೆ ಅಭಿನಂದನೆ: ಸಂಸದ ರಾಘವೇಂದ್ರ