ಬೆಳಗಾವಿ: ಒಂದೆಡೆ ಸರ್ಕಾರ ತಾನು ತಯಾರಿಸಿರುವುದು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ, ಜಾತಿ ಅದರಲ್ಲಿ ಒಂದು ಅಂಶ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಈ ವರದಿಯನ್ನು ಜಾತಿ ಗಣತಿ ಎಂದು ಪ್ರತಿಪಕ್ಷಗಳು ಕರೆಯುತ್ತಿವೆ. ಈ ಕುರಿತಂತೆ ರಾಜಕೀಯ ಚರ್ಚೆ ಜೋರಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಹಾಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ವರದಿ ಬಗ್ಗೆ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿಯೇ ಗೊಂದಲ ಇದೆ ಎಂದಿದ್ದಾರೆ. ಸಿದ್ದರಾಮಯ್ಯ ಬೇರೆ ಬೇರೆ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಈ ವರದಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರದಿಯಲ್ಲಿ ನೈಜತೆ ಇಲ್ಲ. ವೈಜ್ಞಾನಿಕವಾಗಿ ಜಾತಿ ಗಣತಿಯಾಗಬೇಕು. ಒಂದು ಜಾತಿ, ಧರ್ಮವನ್ನು ಕಮ್ಮಿ ತೋರಿಸುವ ಕೆಲಸ ಮಾಡಬಾರದು. ಇದಕ್ಕೆ ನಮ್ಮ ವಿರೋಧವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾತಿ ಗಣತಿ ಬಗ್ಗೆ ಸಂಪುಟದಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ. ಅಲ್ಲದೇ ಏ.17ರಂದು ವಿಸ್ತೃತ ಚರ್ಚೆಗೆ ಸಂಪುಟ ಸಭೆ ಕರೆದಿದ್ದಾರೆ. ಆದರೆ, ಈ ವರದಿಯೇ ಗೊಂದಲದಿಂದ ಕೂಡಿದೆ. ಪ್ರತಿಯೊಬ್ಬರ ಮನೆಗೆ ಹೋಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅದೇ ರೀತಿ ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಸಚಿವರ ನಿಲುವು ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಜಗದೀಶ ಶೆಟ್ಟರ್ ಶೆಟ್ಟರ್ ಹೇಳಿದ್ರು.
ನೂರಾರು ಕೋಟಿ ರೂ. ಖರ್ಚು ಮಾಡಿದ್ದರೂ ಜಾತಿ, ಧರ್ಮಗಳ ಅಂಕಿ ಅಂಶಗಳ ಗೊಂದಲ ಇದೆ. ಲಿಂಗಾಯತ, ಒಕ್ಕಲಿಗರು ಸೇರಿ ಅನೇಕ ಸಮುದಾಯಗಳು ವಿರೋಧಿಸಿವೆ. ವರದಿಯಲ್ಲಿ 75 ಲಕ್ಷ ಮುಸ್ಲಿಂರು ಎಂದು ತೋರಿಸುತ್ತಾರೆ. ಹೀಗೆ ಗೊಂದಲವಿರುವ ವರದಿಯನ್ನು ಏಕೆ ಮಂಡನೆ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಕಳೆದ ಅವಧಿಯಲ್ಲಿಯೇ ವರದಿ ಸ್ವೀಕಾರ ಮಾಡಬಹುದಿತ್ತು. ಸಿದ್ದರಾಮಯ್ಯನವರಿಗೆ ಸಂಕಷ್ಟ, ಹಗರಣಗಳ ಆರೋಪ ಬಂದಾಗ ಜಾತಿ ಗಣತಿ ಹೊರತೆಗೆಯುತ್ತಾರೆ. ಈಗ ಮುಡಾ ಹಗರಣದಲ್ಲಿ ಇಡಿ ತನಿಖೆ ಮತ್ತೆ ಆರಂಭವಾಗಲಿದೆ. ಹಾಗಾಗಿ, ಜನರ ಗಮನ ಬೇರೆಡೆ ಸೆಳೆಯಲು ಈ ತಂತ್ರ ಮಾಡಿದ್ದಾರೆ ಎಂದು ಶೆಟ್ಟರ್ ದೂರಿದರು.
ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿರುವ ಈ ಸಮಯದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಹಿಂದಿನ ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪದ ಕುರಿತು ವರದಿ ಕೇಳಿದ್ದಾರೆ. ಈಗಾಗಲೇ ಗುತ್ತಿಗೆದಾರ ಸಂಘವು ಭ್ರಷ್ಟಾಚಾರ ನಡೆದಿರಬಹುದು. ಆದರೆ, 40 ಪರ್ಸೆಂಟ್ ಬಗ್ಗೆ ಯಾವುದೇ ಸಾಕ್ಷಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ತನಿಖೆಗೆ ಮುಂದಾಗಿರುವುದು ಸರಿಯಲ್ಲ ಎಂದು ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಜಾತಿ ಗಣತಿ ವರದಿ ಚರ್ಚೆಗೆ 1 ವಾರ ವಿಶೇಷ ಸದನ ಕರೆಯಿರಿ: ಬಿಜೆಪಿ ಎಂಎಲ್ಸಿ ರವಿಕುಮಾರ್ ಆಗ್ರಹ