ETV Bharat / state

'ಕುರುಬರನ್ನು ಎಸ್ಟಿಗೆ ಸೇರಿಸಲು ಸಿದ್ದರಾಮಯ್ಯರ ಹಿಂದಿನ ಅವಧಿಯಲ್ಲೇ ಕೇಂದ್ರಕ್ಕೆ ಪ್ರಸ್ತಾಪ'

ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಅವಧಿಯಲ್ಲೇ ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಲಾಗಿತ್ತು ಎಂದು ಬಿಜೆಪಿ ಸಂಸದ ಬೊಮ್ಮಾಯಿ ತಿಳಿಸಿದ್ದಾರೆ.

Basavaraj-Bommai
ಸಂಸದ ಬಸವರಾಜ ಬೊಮ್ಮಾಯಿ (ETV Bharat)
author img

By ETV Bharat Karnataka Team

Published : October 9, 2025 at 1:25 PM IST

3 Min Read
Choose ETV Bharat

ಬೆಂಗಳೂರು: ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಸಿದ್ದರಾಮಯ್ಯನವರ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಹೋಗಿತ್ತು ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಕುರಿತು ಇಂದು ನಗರದಲ್ಲಿ ಮಾತನಾಡಿದ ಅವರು, ನಮ್ಮ ಅವಧಿಯಲ್ಲಿ ಕುಲಶಾಸ್ತ್ರೀಯ ಅಧ್ಯಯನ ವರದಿ ಬಂದಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಪರಿಶೀಲನೆ ಮಾಡಿ 2023ರ ಜುಲೈ 20ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಸಿದ್ದರಾಮಯ್ಯನವರ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಹೋಗಿತ್ತು. ಕುಲ ಶಾಸ್ತ್ರೀಯ ಅಧ್ಯಯನ ಮಾಡಿಸುವಂತೆ ವಾಪಸ್ ಬಂದಿತ್ತು. ಸಮ್ಮಿಶ್ರ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಆದೇಶ ಮಾಡಿತ್ತು ಎಂದು ಹೇಳಿದರು.

ನಮ್ಮ ಅವಧಿಯಲ್ಲಿ ಕುಲಶಾಸ್ತ್ರೀಯ ಅಧ್ಯಯನ ವರದಿ ಬಂದಿತ್ತು. ಅದನ್ನು ನಮ್ಮ ಸರ್ಕಾರ ಒಪ್ಪಿತ್ತು. ಚುನಾವಣೆ ಬಂದು ನಮ್ಮ ಸರ್ಕಾರ ಹೋಯಿತು. ಸರ್ಕಾರದ ದಾಖಲೆಗಳನ್ನು ತೆಗೆದು ನೋಡಲಿ. ಈಗ ಸಿದ್ದರಾಮಯ್ಯ ಅವರ ಕೈಯಲ್ಲಿದೆ, ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡಬೇಕು. ವಾಲ್ಮೀಕಿ ಸಮುದಾಯ ಮತ್ತು ಕುರುಬರ ನಡುವೆ ಏನೂ ಸಮಸ್ಯೆ ಆಗುವುದಿಲ್ಲ. ಅಹಿಂದ ನಾಯಕ ಸಿದ್ದರಾಮಯ್ಯ ಅವರೇ ಇದ್ದಾರೆ‌. ಮೀಸಲಾತಿ ಹೆಚ್ಚಳ ಮಾಡುವುದು ಅಷ್ಟು ಸುಲಭವಿಲ್ಲ ಎಂದರು.

ಬಿಗ್ ಬಾಸ್ ಮನೆಗೆ ಬೀಗ ಜಡಿದ ವಿಚಾರವಾಗಿ ಮಾತನಾಡಿದ ಅವರು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರ ವ್ಯಾಪ್ತಿ ಏನು? ಬಂದ್ ಮಾಡುವ ಅಧಿಕಾರ ಇದೆಯಾ?, ಇಲ್ಲವಾ? ನೋಡಬೇಕು. ಒಂದು ಕಡೆ ಮನರಂಜನಾ ಉದ್ಯಮ ನಡೆಯಬೇಕು, ಇನ್ನೊಂದೆಡೆ ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕಿದೆ. ಎಷ್ಟು ದಿನದಿಂದ ಈ ಸಮಸ್ಯೆ ಇದೆ. ಈಗ್ಯಾಕೆ ಈ ಕ್ರಮ ಕೈಗೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡುತ್ತದೆ. ಇಕೊ ಎಕನಾಮಿಕ್ಸ್ ಅಂತಾರೆ‌, ಆರ್ಥಿಕತೆಯೂ ನಡೆಯಬೇಕು, ಪರಿಸರವೂ ಉಳಿಯಬೇಕು. ಅದು ಈ ರಾಜ್ಯದಲ್ಲಿ ತಪ್ಪಿ ಹೋಗಿದೆ. ರಾಜ್ಯದಲ್ಲಿ ಎಲ್ಲವೂ ದಾರಿ ತಪ್ಪಿದೆ. ನಡೆದದ್ದೇ ದಾರಿ ಎನ್ನುವಂತಾಗಿದೆ. ಹಾಗೆ ಆದಾಗಲೇ ಈ ರೀತಿಯ ಘಟನೆಗಳು ನಡೆಯುತ್ತವೆ. ಡಿ.ಕೆ.ಶಿವಕುಮಾರ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅನುಮತಿ ಕೊಡಿಸಿ ಇದರಲ್ಲಿ ತಮ್ಮ ಪಾತ್ರ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್​​ನಲ್ಲಿ ನವೆಂಬರ್ ಕ್ರಾಂತಿಯಾಗುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಕಾಂಗ್ರೆಸ್ ಆಂತರಿಕ ವಿಚಾರ. ಆದರೆ, ಕಾಂಗ್ರೆಸ್ ಶಾಸಕರು ಮತ್ತು ಮಂತ್ರಿಗಳ ನಡುವೆ ಸಾಕಷ್ಟು ಗೊಂದಲ ಇದೆ. ಅಶಿಸ್ತು ತೋರಿದರೆ ಕ್ರಮ ಕೈಗೊಳ್ಳುತ್ತೇನೆ ಎಂದರೂ ಶಾಸಕರು ಸುಮ್ಮನಿಲ್ಲ. ಹೈಕಮಾಂಡ್​​​ನವರಿಗೂ ಇದರ ಬಗ್ಗೆ ಸ್ಪಷ್ಟತೆ ಇಲ್ಲ. ಸಿಎಂ ಸಿದ್ದರಾಮಯ್ಯ ಅವರ ಹಿನ್ನೆಲೆ ಮತ್ತು ಇಮೇಜ್ ಬಗ್ಗೆ ಯೋಚನೆ ಮಾಡುತ್ತಿದ್ದಾರೆ‌. ಡಿಸಿಎಂ ಶಿವಕುಮಾರ್ ಪಕ್ಷ ಕಟ್ಟಿದ್ದಾರೆ. ಅವರ ಬಗ್ಗೆಯೂ ಯೋಚನೆ ಮಾಡಿ ಯಾವುದೇ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ. ಕ್ರಾಂತಿ ನವೆಂಬರ್​​ನಲ್ಲಿ ಆಗುತ್ತದೋ, ಡಿಸೆಂಬರ್​​ನಲ್ಲಿ ಆಗುತ್ತದೋ ಕಾದುನೋಡಬೇಕು ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಕ್ಕೆ, ನರೇಂದ್ರ ಮೋದಿ ಸರ್ಕಾರ 15ನೇ ಹಣಕಾಸು ಅಡಿಯಲ್ಲಿ ಹಾಗೂ ಇತರ ಯೋಜನೆಗಳಿಗೆ ಐದು ಪಟ್ಟು ಹಣ ಹೆಚ್ಚಿಗೆ ನೀಡಿದೆ. 15ನೇ ಹಣಕಾಸು ಯೋಜನೆಯಲ್ಲಿ 14ನೇ ಹಣಕಾಸು ಆಯೋಗಕ್ಕಿಂತ ಒಂದು ಲಕ್ಷ ಕೋಟಿ ಹೆಚ್ಚಿಗೆ ಕೊಟ್ಟಿದೆ. ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಐದು ವರ್ಷದಲ್ಲಿ ಒಟ್ಟು 7 ಸಾವಿರ ಕೋಟಿ ರೂ. ಬಂದಿತ್ತು. ಈಗ ಪ್ರತಿ ವರ್ಷ ಏಳು ಸಾವಿರ ಕೋಟಿ ಬರುತ್ತಿದೆ. 6 ಸಾವಿರ ಕಿ. ಮೀ. ಹೈವೆ ಆಗುತ್ತಿದೆ. ರಾಜ್ಯದಲ್ಲಿ ಕೇಂದ್ರದ ಅನುದಾನದಿಂದಲೇ ಯೋಜನೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಹೇಳಿದರು.

ಸಾಮಾಜಿಕ, ಆರ್ಥಿಕ ಸಮೀಕ್ಷೆಯಿಂದ ಮಕ್ಕಳು ಮತ್ತು ಶಿಕ್ಷಕರಿಗೆ ದೊಡ್ಡ ಅನ್ಯಾಯವಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ಸಮೀಕ್ಷೆ ನಡೆಯುತ್ತಿಲ್ಲ. ಬಹಳಷ್ಟು ಜನ ಮನೆಯಲ್ಲಿ ಇರುವುದಿಲ್ಲ. ಸಹಕಾರ ನೀಡುತ್ತಿಲ್ಲ, ಹೀಗಾಗಿ ಈ ಸಮೀಕ್ಷೆಗೆ ಯಾವುದೇ ಮಹತ್ವ ಉಳಿದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಜಾಲಿವುಡ್ ಸ್ಟುಡಿಯೋ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡುವಂತೆ ಡಿಸಿಎಂ ಡಿಕೆಶಿ ಸೂಚನೆ: ಬಿಗ್ ಬಾಸ್ ಪುನಾರಂಭ?