ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಹಾಗೂ ನೈಋತ್ಯ ಮುಂಗಾರು ಸಾರ್ವಕಾಲಿಕ ದಾಖಲೆಯಾಗಿದೆ. ಅವಧಿ ಮುನ್ನವೇ ಮುಂಗಾರು ಪ್ರವೇಶಿಸಿರುವುದರಿಂದ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಅನ್ನದಾತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸಹಜವಾಗಿ, ಜೂನ್ ಮೊದಲ ವಾರ ಅಥವಾ ನಂತರ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡುತ್ತಿತ್ತು. ಆದರೆ, ಈ ಬಾರಿ ಮೇ 24ಕ್ಕೆ ಪ್ರವೇಶಿಸಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗಾಗಿ, ಬಿತ್ತನೆಯೂ ನಿರೀಕ್ಷಿತ ಮಟ್ಟದಲ್ಲಿ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷವೂ ಮುಂಗಾರು ಉತ್ತಮವಾಗಿತ್ತು. ಈ ಬಾರಿಯೂ ಚುರುಕಾಗುವ ನಿರೀಕ್ಷೆ ಇದೆ.
2025ರ ಮೇನಲ್ಲಿ ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ 764 ಮಿ.ಮೀ. ಮಳೆಯಾಗಿದೆ. 1918ರ ಮೇನಲ್ಲಿ 706 ಮಿ.ಮೀ. ಮಳೆಯಾಗಿತ್ತು. 2025ರ ಮೇನಲ್ಲಿ ರಾಜ್ಯಾದ್ಯಂತ 245 ಮಿ.ಮೀ. ಸುರಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಒಂದೆಡೆ ಬಿತ್ತನೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರಿಗೆ ಕೊರತೆ ಉಂಟಾಗದಂತೆ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಕೃಷಿ ಇಲಾಖೆ ದಾಸ್ತಾನು ಇಟ್ಟಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಕಾರ್ಯ ಆರಂಭವಾಗಿದೆ.
ಪ್ರತೀ ಬಿತ್ತನೆ ಬೀಜದ ಬ್ಯಾಗ್ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಆ ಬೀಜದ ಪ್ರಮಾಣೀಕೃತ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಪತ್ತೆ ಹಚ್ಚಬಹುದಾದ ತಂತ್ರಜ್ಞಾನವನ್ನೂ ಪರಿಚಯಿಸಲಾಗಿದೆ. ಬಿತ್ತನೆ ಬೀಜಗಳ ಮೊಳಕೆ ಪ್ರಮಾಣದ (ಜೆರ್ಮಿನೇಶನ್ ಕೌಂಟ್) ಪ್ರಯೋಗ ಪರೀಕ್ಷೆ (ಲ್ಯಾಬ್ ಟೆಸ್ಟಿಂಗ್) ಯಾವಾಗ ನಡೆದಿದೆ. ಆ ಲಾಟ್‌ನಲ್ಲಿ ಮೊಳಕೆಯೊಡೆದ ಬಿತ್ತನೆ ಬೀಜಗಳ ಶೇಕಡಾವಾರು ಪ್ರಮಾಣ ಎಷ್ಟು ಎಂಬ ಮಾಹಿತಿಯೂ ಸಿಗುತ್ತದೆ. ಕೇಂದ್ರ ಸರ್ಕಾರದ ಸಾಥಿ ಪೋರ್ಟಲ್ ಮೂಲಕ ಕ್ಯೂಆರ್ ಕೋಡ್ ಬಳಸಿ ಈ ಸೌಲಭ್ಯವನ್ನೂ ಕೃಷಿ ಇಲಾಖೆ ಕಲ್ಪಿಸಿದೆ.
ರಸಗೊಬ್ಬರ ದಾಸ್ತಾನು ಎಷ್ಟಿದೆ?: ಈ ವರ್ಷದ ಬರುವ ಸೆಪ್ಟೆಂಬರ್‌ವರೆಗೆ 26.77 ಲಕ್ಷ ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರದ ಅಗತ್ಯವಿದೆ. ಏಪ್ರಿಲ್ ಮತ್ತು ಮೇ ತಿಂಗಳಿಗೆ 7.51 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇದ್ದು, 15.88 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇತ್ತು. ಈ ಪೈಕಿ 4.98 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ರಸಗೊಬ್ಬರ ಮಾರಾಟವಾಗಿದೆ. 2025ರ ಮೇ ಕೊನೆ ವಾರದ ವೇಳೆಗೆ 10.89 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ರಸಗೊಬ್ಬರ ದಾಸ್ತಾನು ಇದೆ. ಕೇಂದ್ರವು ರಾಜ್ಯಕ್ಕೆ ಬೇಡಿಕೆಯಿರುವಷ್ಟು ರಸಗೊಬ್ಬರವನ್ನು ಪ್ರತಿ ತಿಂಗಳು ಸರಬರಾಜು ಮಾಡುತ್ತದೆ. ಹೀಗಾಗಿ, ರೈತರಿಗೆ ಯಾವುದೇ ಕೊರತೆಯಾಗುವುದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿತ್ತನೆ ಪ್ರದೇಶ 82.50 ಲಕ್ಷ ಹೆಕ್ಟೇರ್ ಗುರಿ: ಕಳೆದ ವರ್ಷ ರಾಜ್ಯದಲ್ಲಿ 82.48 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಈ ವರ್ಷ ಬಿತ್ತನೆ ಪ್ರದೇಶ ಮತ್ತಷ್ಟು ವಿಸ್ತಾರವಾಗಲಿದ್ದು, 82.50 ಲಕ್ಷ ಹೆಕ್ಟೇರ್ ಗುರಿ ಹೊಂದಲಾಗಿದೆ. ಈ ವರ್ಷ 4.63 ಲಕ್ಷ ಟನ್‌ಗೂ ಹೆಚ್ಚು ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದರೂ, ಕೃಷಿ ಇಲಾಖೆ 5.99 ಲಕ್ಷ ಕ್ವಿಂಟಲ್‌ಗೂ ಅಧಿಕ ಬಿತ್ತನೆ ಬೀಜ ದಾಸ್ತಾನು ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಬಿತ್ತನೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಯೂರಿಯಾ, ಎಸ್‌ಎಸ್‌ಪಿ ಸೇರಿದಂತೆ ಅಗತ್ಯಕ್ಕೆ ತಕ್ಕಂತೆ ನಾನಾ ರಸಗೊಬ್ಬರಗಳ ದಾಸ್ತಾನು ಮಾಡಲಾಗಿದೆ.
ಧಾನ್ಯಗಳ ಬೇಡಿಕೆ, ದಾಸ್ತಾನು ಎಷ್ಟಿದೆ?:
ಬೇಡಿಕೆ (ಕ್ವಿಂಟಾಲ್) | ದಾಸ್ತಾನು (ಕ್ವಿಂಟಾಲ್) | |
ರಾಗಿ | 23,000 | 31,288 |
ಭತ್ತ | 70,000 | 79,910 |
ತೊಗರಿ | 33,800 | 40,741 |
ನೆಲಗಡಲೆ | 70,000 | 1,11,177 |
ಸೋಯಾ ಅವರೆ | 1,80,500 | 2,00,000 |
ಮೆಕ್ಕೆಜೋಳ | 64,000 | 1,01,159 |
ಮುಂಗಾರು ಹಂಗಾಮು ಆರಂಭವಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಸ್ತುತ ರಸಗೊಬ್ಬರದ ಯಾವುದೇ ಕೊರತೆ ಇಲ್ಲ. ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದ್ದು, ಪರೀಕ್ಷೆ ಮಾಡಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ಪೂರೈಕೆ ಮಾಡಬೇಕು. ರೈತರಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಪೂರೈಸಬೇಕು. ಮುಂಗಾರಿನಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ - ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ
ಇದನ್ನೂ ಓದಿ: ವಿಜಯನಗರ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; 35 ಹೆಕ್ಟೇರ್ ಪ್ರದೇಶದಲ್ಲಿ ಹಾನಿಗೊಳಗಾದ ಬೆಳೆ
ಇದನ್ನೂ ಓದಿ: ರಾಜ್ಯದಲ್ಲಿ ಜೂನ್ 17ರವರೆಗೂ ಭಾರಿ ಮಳೆ ಮುನ್ಸೂಚನೆ: 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್