ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧನಕ್ಕೆ ಒಳಾಗಿರುವ ಐಶ್ವರ್ಯಾ ಗೌಡ ಅವರಿಗೆ ಮಧ್ಯಂತರ ಜಾಮೀನು ನೀಡುವ ವಿಚಾರವಾಗಿ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯ(ಇ.ಡಿ)ಕ್ಕೆ ಹೈಕೋರ್ಟ್ ಎರಡು ದಿನ ಕಾಲಾವಕಾಶ ನೀಡಿದೆ.
ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮ ಪ್ರಶ್ನಿಸಿ ಐಶ್ವರ್ಯಾ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಸೂಚನೆ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಂಧನ ಪ್ರಕ್ರಿಯೆಯಲ್ಲಿ ಜಾರಿ ನಿರ್ದೇಶನಾಲಯ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಐಶ್ವರ್ಯಾ ಗೌಡಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಅವರು, ಅರ್ಜಿದಾರರ ಮಧ್ಯಂತರ ಮನವಿಗೆ ಆಕ್ಷೇಪಣೆ ಸಲ್ಲಿಸಲು ತಮಗೆ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿ, ಅಷ್ಟರೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹಲವರಿಗೆ ಹಣ ಹಾಗೂ ಚಿನ್ನಾಭರಣ ವಂಚಿಸಿದ ಆರೋಪದಡಿ ಐಶ್ವರ್ಯಾ ಗೌಡ ವಿರುದ್ಧ ವಿವಿಧ ಏಳು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿವೆ. ಅವುಗಳ ಪೈಕಿ ಕೆಲ ಪ್ರಕರಣಗಳಲ್ಲಿ ಜಾಮೀನು ದೊರೆತಿದೆ. ಇನ್ನೂ ಕೆಲ ಪ್ರಕರಣದಲ್ಲಿ ಐಶ್ವರ್ಯಾ ಗೌಡ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ತನಿಖಾಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ ಎಂದು ವಿವರಿಸಿದರು.
ಹಣ ಅಕ್ರಮ ವರ್ಗಾವಣೆ ಆರೋಪದಡಿ ಐಶ್ವರ್ಯಾ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ ತನಿಖಾಧಿಕಾರಿಗಳು ಮಾರ್ಚ್ 31ರಂದು ಪ್ರಕರಣ ದಾಖಲಿಸಿದ್ದಾರೆ. ಏ.24ರಂದು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ, ಯಾವ ಆಧಾರದಲ್ಲಿ ಬಂಧನ ಮಾಡಲಾಗಿದೆ ಎಂಬ ಬಗ್ಗೆ ತನಿಖಾಧಿಕಾರಿಗಳು ಐಶ್ವರ್ಯಾ ಗೌಡರ ಸಂಬಂಧಿಕರು ಹಾಗೂ ಸ್ನೇಹಿತರಿಗೆ ತಿಳಿಸಿಲ್ಲ.
ಬಂಧಿತರಿಂದ ಯಾವುದೇ ದಾಖಲೆ ವಶಪಡಿಸಿಕೊಂಡಿಲ್ಲ. ಆದರೂ ಕಾನೂನಿಗೆ ವಿರುದ್ಧವಾಗಿ ಆಕೆಯ ಹೇಳಿಕೆ ದಾಖಲಿಸಿಕೊಂಡಿದೆ. ಬಂಧನಕ್ಕೆ ಕಾರಣ ನೀಡದೆ ಹೋದರೆ, ಆಕೆಯು ನ್ಯಾಯಾಲಯದಲ್ಲಿ ತನ್ನನ್ನು ತಾನು ಹೇಗೆ ಸಮರ್ಥಿಸಿಕೊಳ್ಳುವುದು ಹೇಗೆ? ಎಂದು ಪ್ರಶ್ನಿಸಿದರು.
ಬಂಧನಕ್ಕೆ ಕಾರಣ ನೀಡದಿರುವುದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ. ಇನ್ನೂ ಬಂಧನವೇ ಅಕ್ರಮ ಎಂದು ಕಂಡುಬಂದರೆ, ಒಂದು ಕ್ಷಣ ಸಹ ಆರೋಪಿಯನ್ನು ಬಂಧನಲ್ಲಿ ಮುಂದುವರಿಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಐಶ್ವರ್ಯಾ ಗೌಡ ಅವರಿಗೆ ಎರಡನೇ ತರಗತಿ ಓದುವ ಮಗುವಿದೆ. ಆ ಮಗುವನ್ನು ಪಾಲನೆ ಮಾಡಬೇಕಿರುವುದರಿಂದ ಮಧ್ಯಂತರ ಜಾಮೀನು ನೀಡಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶ ಮಾಡಬೇಕು ಎಂದು ಕೋರಿದರು.
ಪ್ರಕರಣದ ಹಿನ್ನೆಲೆ ಏನು?: ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿ ಹಲವರಿಗೆ ಹಣ ಹಾಗೂ ಚಿನ್ನಾಭರಣ ಮೋಸ ಮಾಡಿದ ಹಾಗೂ ಸುಮಾರು 75 ಕೋಟಿ ರು. ಅಕ್ರಮ ವಹಿವಾಟು ನಡೆಸಿದ ಆರೋಪ ಮೇಲೆ ಐಶ್ವರ್ಯಾ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ: ನ್ಯಾ.ಕೆ.ಸೋಮಶೇಖರ್ ಅವರನ್ನು ಮಣಿಪುರ ಹೈಕೋರ್ಟ್ ಸಿಜೆಯಾಗಿ ನೇಮಿಸಿದ ಕೇಂದ್ರ - JUSTICE KEMPAIAH SOMASHEKAR