
ಡಿಸೆಂಬರ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ: ಯತೀಂದ್ರ ಸಿದ್ದರಾಮಯ್ಯ
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಅಂತ ಮುಖ್ಯಮಂತ್ರಿ ಅವರು ಸೂಚ್ಯವಾಗಿ ತಿಳಿಸಿದ್ದಾರೆ. ಬಹುಶಃ ಡಿಸೆಂಬರ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Published : October 12, 2025 at 3:36 PM IST
ರಾಯಚೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಅಂತ ಹಿರಿಯ ಸಚಿವರುಗಳು ಹೇಳಿದ್ದು, ಮುಖ್ಯಮಂತ್ರಿ ಅವರು ಕೂಡ ಸೂಚ್ಯವಾಗಿ ತಿಳಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಬಹುಶಃ ಡಿಸೆಂಬರ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ತಿಳಿಸಿದರು.
ಬಿಹಾರಕ್ಕೆ ಯಾರ‍್ಯಾರು ಎಷ್ಟೆಷ್ಟು ಕೊಡಬೇಕು ಅಂತ ನಿರ್ಧರಿಸಲು ಸಿಎಂ ಸಚಿವರ ಔತಣಕೂಟ ಕರೆದಿದ್ದಾರೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಅವರ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದಲ್ಲಿ ನಡೆಯೋದು ಅವರಿಗೆ ಹೇಗ್ರಿ ಗೊತ್ತಾಗುತ್ತೆ. ಅವರು ಏನಾದ್ರು ಹೇಳ್ತಾರೆ, ಅವರು ಹೇಳೋದು ನಿಜ ಆಗುತ್ತಾ ಎಂದು ತಿರುಗೇಟು ನೀಡಿದರು.
ಸಿಎಂ ಅವರು ಆಗಾಗ್ಗೆ ಔತಣಕೂಟ ಆಯೋಜಿಸುತ್ತಿರುತ್ತಾರೆ. ಎಷ್ಟೋ ಬಾರಿ ಸಿಎಲ್ಪಿ ಮೀಟಿಂಗ್ ವೇಳೆ ಕರೆದಿದ್ದಾರೆ, ಮನೆಗೂ ಕರೆದಿದ್ದಾರೆ. ಶಾಸಕರು, ಸಚಿವರನ್ನು ಕರೆದಿದ್ದಾರೆ. ಅದರಲ್ಲಿ ಬಿಹಾರ ಚುನಾವಣೆ ಕೂಡ ಚರ್ಚೆ ಆಗಬಹುದು. ಅದರ ಅರ್ಥ ದುಡ್ಡಿನ ವಿಚಾರ ಅಂತಲ್ಲ. ಪ್ರಸ್ತುತ ರಾಜಕೀಯ ಪರಿಸ್ಥಿತಿ ಏನಿದೆ ಹಾಗೂ ಅವರವರ ಇಲಾಖೆಗಳು ಹೇಗೆ ನಡೀತಿವೆ. ಸಮಸ್ಯೆ ಇದೆಯಾ ಅನ್ನೋದನ್ನು ಕೇಳಿ, ಬಿಹಾರ ಎಲೆಕ್ಷನ್ ಬಗ್ಗೆಯೂ ಮಾತನಾಡಿರಬಹುದು ಎಂದರು.
ನವೆಂಬರ್ ತಿಂಗಳ ನಂತರ ರಾಜ್ಯದಲ್ಲಿ ರಾಜಕೀಯ ಕ್ರಾಂತಿಯಾಗಿ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಶಾಸಕರ ಹೇಳಿಕೆ ಬಗ್ಗೆ ಮಾತನಾಡಿ, ನಿಜವಾಗಿ ಏನು ಮಾತುಕತೆ ನಡೆದಿದೆ ಎಂಬುದು ಯಾರಿಗೂ ತಿಳಿದಿಲ್ಲ. ಎಲ್ಲರೂ ಊಹಾಪೋಹದ ಆಧಾರದಲ್ಲಿ ಹೇಳುತ್ತಾರೆ. ನನಗೆ ಗೊತ್ತಿರೋ ಹಾಗೆ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಪದವಿಗೆ ಅರ್ಹರು ಇರೋರು ನಮ್ಮ ಪಕ್ಷದಲ್ಲಿ ಬಹಳಷ್ಟು ಜನ ಇದ್ದಾರೆ. ಹೀಗಾಗಿ ಆಗಾಗ ಕ್ಲೇಮ್ ಮಾಡುತ್ತಾರೆ, ಅದರಲ್ಲೇನು ತಪ್ಪಿಲ್ಲ ಎಂದು ಹೇಳಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ಮೇಲೆ ಕಮಿಷನ್ ಆರೋಪ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಪ್ರತಾಪ್ ಸಿಂಹ ಯಾರ್ರೀ, ಆತ ರಾಜಕೀಯದಲ್ಲಿ ಪ್ರಸಿದ್ಧಿ ಆಗಿರಬೇಕು. ಹಾಗಾಗಿ, ಸುಮ್ನೆ ಸಾಕ್ಷಿ, ಆಧಾರ ಇಲ್ಲದೆ ಆರೋಪ ಮಾಡ್ತಿರ್ತಾರೆ. ಅವರ ಆರೋಪ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಅವರ ಪಕ್ಷವೇ ಅವರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನಾವ್ಯಾಕೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಟಾಂಗ್ ನೀಡಿದರು.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಿವರೆಗೂ ಸಿದ್ದರಾಮಯ್ಯ ಅವರು ಸಿಎಂ ಆಗಿರ್ತಾರೋ, ಅಲ್ಲಿವರೆಗೂ ಅವರ ಸಂಪುಟದಲ್ಲಿ ನನ್ನ ಮಂತ್ರಿ ಮಾಡಲ್ಲ ಅಂತ ಹೇಳಿದ್ದಾರೆ. ಹಾಗಾಗಿ ನನ್ನ ಮಂತ್ರಿ ಸ್ಥಾನದ ಬಗ್ಗೆ ಪ್ರಶ್ನೆಯೇ ಬರಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇನ್ನು ನಗರದ ರಂಗಮಂದಿರಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ತೆರಳುವ ವೇಳೆ ಬೃಹತ್ ಮೆರವಣಿಗೆ ಆಯೋಜಿಸಲಾಗಿತ್ತು. ಈ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯಗೆ ಬೃಹತ್ ಸೇಬು ಹಣ್ಣಿನ ಹಾರವನ್ನು ಹಾಕಲಾಯಿತು.
ಇದನ್ನೂ ಓದಿ: ಬಿಹಾರ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ: ಮುಖ್ಯಸಚೇತಕ ಸಲೀಂ ಅಹ್ಮದ್
ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಪರಿಶೀಲನೆ

