ತುಮಕೂರು: ಕಳೆದ ನವೆಂಬರ್ನಲ್ಲಿ ನನ್ನ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿರುವ ಎಂಎಲ್ಸಿ ರಾಜೇಂದ್ರ ಅವರು ತುಮಕೂರು ಎಸ್ಪಿ ಕೆ ವಿ ಅಶೋಕ್ ಅವರಿಗೆ ದೂರು ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಲೆ ಯತ್ನ ಸುಪಾರಿಯ ಬಗ್ಗೆ ಈಗಾಗಲೇ ಡಿಜಿಗೆ ದೂರು ನೀಡಿದ್ದೆ. ಅವರು ಎಸ್ಪಿ ಅವರಿಗೆ ದೂರು ನೀಡುವಂತೆ ಹೇಳಿದ್ದರು. ಅವರಂತೆ ಇಂದು ತುಮಕೂರು ಎಸ್ಪಿಗೆ ದೂರು ಕೊಟ್ಟಿದ್ದೇನೆ. ಈ ಬಗ್ಗೆ ಎಫ್ಐಆರ್ ಮಾಡುವಂತೆ ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ.
ನವೆಂಬರ್ನಲ್ಲಿ ಮಗಳ ಬರ್ತ್ಡೇ ನಡೆಯುವ ಸಂದರ್ಭದಲ್ಲಿ ಮನೆಗೆ ಶಾಮಿಯಾನ ಹಾಕುವಾಗ ಕಾರಿಗೆ ಜಿಪಿಎಸ್ ಹಾಕಬೇಕು ಎಂದು ಮಾತನಾಡಿರುವುದು ಆಡಿಯೋ ಕ್ಲಿಪ್ನಲ್ಲಿ ರೆಕಾರ್ಡ್ ಆಗಿದೆ. ಒಟ್ಟು 70 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಾರೆ. ಅದ್ರಲ್ಲಿ ಐದು ಲಕ್ಷ ಕೊಟ್ಟಿದ್ದಾರೆ. ಯಾಕ್ ಕೊಟ್ಟಿದ್ದಾರೆ ಏನು ಅಂತಾ ಗೊತ್ತಿಲ್ಲ. ನಾನು ಆಯ್ತು, ನನ್ನ ಕೆಲಸ ಆಯ್ತು ಅಂತಾ ಇರುತ್ತೇನೆ. ಆದರೆ ಏಕೆ ನನ್ನ ಮೇಲೆ ಸುಪಾರಿ ಕೊಟ್ಟಿದ್ದಾರೆ ಎಂಬುದನ್ನ ತನಿಖೆ ಮಾಡಬೇಕು ಎಂದು ಡಿಜಿ ಹಾಗೂ ಎಸ್ಪಿ ಅವರಿಗೆ ಹೇಳಿದ್ದೇನೆ ಎಂದರು.
ಸುಪಾರಿ ಕೊಟ್ಟವರು ಯಾರು ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸುಪಾರಿ ಕೊಟ್ಟವರ ಹೆಸರು ಬಹಳಷ್ಟಿದೆ. ಅದರಲ್ಲಿ ಸೋಮ ಮತ್ತು ಭರತ್ ಅನ್ನುವವರ ಹೆಸರು ಆಡಿಯೋದಲ್ಲಿ ಹೆಚ್ಚಾಗಿ ಬಂದಿದೆ. ಅವರಿಬ್ಬರು ಯಾರಂತ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಆಡಿಯೋದಲ್ಲಿ ಮಾತನಾಡುತ್ತಿರುವವರು ಯಾರ್ಯಾರು ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲೇಡಿ ಮತ್ತು ಹುಡುಗ ಆ ಆಡಿಯೋದಲ್ಲಿ ಮಾತನಾಡಿದ್ದಾರೆ. ಅದರಲ್ಲಿ 18 ನಿಮಿಷದ ಸಂಭಾಷಣೆ ನಡೆದಿದೆ. ಏನು ವಿಚಾರಕ್ಕೆ ಸುಪಾರಿ ಕೊಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಮಂತ್ರಿ ಮಗನನ್ನ ಹೊಡೆಯಬೇಕು ಎಂಬ ಮಾತು ಆಡಿಯೋದಲ್ಲಿ ಕೇಳಿಬರುತ್ತೆ ಎಂದರು.

ನಾನು ತಮಾಷೆ ಅಂತಾ ಸುಮ್ಮನಾಗಿದ್ದೆ: ಜನವರಿಯಲ್ಲಿ ನನ್ನ ಸರ್ಕಲ್ನಲ್ಲಿ ಆ ಆಡಿಯೋ ಕ್ಲಿಪ್ ಸಿಕ್ಕಿತು. ನಾನು ತಮಾಷೆ ಅಂತಾ ಸುಮ್ಮನಾಗಿದ್ದೆ. ಆದ್ರೆ ಬೇರೆ ಕಡೆ ಈ ರೀತಿಯಾಗುತ್ತಿದೆ, ಸ್ವಲ್ಪ ಹುಷಾರಾಗಿರು ಎಂಬ ಮಾತನ್ನ ಹೇಳಿದ್ರು. ಅದು ಸೀರಿಯಸ್ ಅಂತಾ ಗೊತ್ತಾಗಿ ದೂರು ನೀಡಿದ್ದೇನೆ ಎಂದು ಹೇಳಿದರು.
ಹನಿಟ್ರ್ಯಾಪ್ ಹಾಗೂ ಈ ಕೊಲೆ ಸುಪಾರಿಗೂ ಬೇರೆ. ಹನಿಟ್ಯಾಪ್ ವಿಚಾರ ಈಗಾಗಲೇ ಸಿಐಡಿಗೆ ಕೊಟ್ಟಿದ್ದಾರೆ. ಸಿಐಡಿಯವರು ನಿನ್ನೆಯೇ ತನಿಖೆ ಪ್ರಾರಂಭಿಸಿದ್ದಾರೆ. ಎಡಿಜಿಪಿಯವರು ನೆನ್ನೆ ಮನೆಯ ಬಳಿ ಹೋಗಿ ಎಷ್ಟು ಜನ ಇದ್ದಾರೆ, ಯಾರೆಲ್ಲಾ ಮನೆಗೆ ಬರುತ್ತಾರೆ ಎಂಬ ರೆಕಾರ್ಡ್ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶಾಮಿಯಾನ ಹಾಕೋರು ನನ್ನ ಸ್ನೇಹಿತರೇ ಇದ್ದಾರೆ. ಸುಮ್ಮನೆ ಅವರನ್ನ ಎಳೆಯೋಕೆ ಇಷ್ಟ ಇಲ್ಲ. ಇಲ್ಲಿಂದಲೇ ದೂರು ಕ್ಯಾತಸಂದ್ರಕ್ಕೆ ಕಳಿಸುತ್ತಾರೆ ಎಂದರು.
ಎಸ್ಪಿ ಕೆ ವಿ ಅಶೋಕ್ ಏನಂದ್ರು ?: ಇಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ಬಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತಿಳಿಸಿದ್ದೇನೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ತಿಳಿಸಿದ್ದಾರೆ. ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವ ಆಧಾರದ ಮೇಲೆ ಪ್ರಕರಣವನ್ನು ಪೂರಕ ಸೆಕ್ಷನ್ಗಳಡಿ ದಾಖಲಿಸಲಾಗುವುದು. ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ನನಗೆ ಕೊಟ್ಟಿರುವ ದೂರಿನಲ್ಲಿ ಐವರ ಮೇಲೆ ಆರೋಪ ಹೊರಿಸಿದ್ದಾರೆ. ಆದರೆ ಪೊಲೀಸ್ ಠಾಣೆಯಲ್ಲಿ ಅವರು ಕೊಡುವ ದೂರಿನ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪೆನ್ ಡ್ರೈವ್ ಕೊಟ್ಟಿದ್ದಾರೆ: ನನಗೆ ಕೊಟ್ಟಿರುವ ದೂರಿನ ಜೊತೆ ಒಂದು ಪೆನ್ ಡ್ರೈವ್ ಕೊಟ್ಟಿದ್ದಾರೆ. ಅದ್ರಲ್ಲಿ ಆಡಿಯೋ ಸಾಕ್ಷಿಯಿದೆ ಎಂದಿದ್ದಾರೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ಸೇ ಒಂದು ಹನಿಟ್ರ್ಯಾಪ್ ಕಂಪನಿ: ಛಲವಾದಿ ನಾರಾಯಣಸ್ವಾಮಿ - CHALAVADI NARAYANASWAMY